ಜಿಲ್ಲೆ

ಪೂರ್ಣಗೊಳ್ಳದ ಓವರ್ ಹೆಡ್ ಟ್ಯಾಂಕ್

ಪ್ರಸಿನ್ ಕೆ.ಆರ್

ಸುಂಟಿಕೊಪ್ಪ: ಸಾರ್ವಜನಿಕರ ತೆರಿಗೆ ಹಣದಿಂದ ಸರ್ಕಾರ ಹತ್ತು ಹಲವು ಯೋಜನೆಗಳನ್ನು ರೂಪಿಸುವ ಮೂಲಕ ಸಾರ್ವಜನಿಕರ ಉಪಯೋಗಕ್ಕಾಗಿ ನಿರ್ಮಿಸಲಾದ ಕಾಮಗಾರಿಗಳು ನಿಗದಿತ ಸಮಯಕ್ಕೆ ಪೂರ್ಣಗೊಳ್ಳದೆ ತೆರಿಗೆ ಹಣ ದುರುಪಯೋಗವಾಗುವುದು ವಿಪರ್ಯಾಸವಾಗಿದೆ.

ಇದಕ್ಕೆ ಉದಾಹರಣೆ ಎಂಬಂತೆ ನಾಕೂರು ಶಿರಂಗಾಲ ಗ್ರಾಮ ಪಂಚಾಯಿತಿ ವ್ಯಾಪ್ತಿಯ ನಾಕೂರು ಶಿರಂಗಾಲ ಭಾಗ-2ರಲ್ಲಿ ಕುಡಿಯುವ ನೀರಿಗಾಗಿ 2021ರಲ್ಲಿ ಜಲಜೀವನ್ ಮಿಷನ್ ಯೋಜನೆಯಡಿ ಓವರ್ ಹೆಡ್ ಟ್ಯಾಂಕ್ ಕಾಮಗಾರಿಯನ್ನು ಆರಂಭಿಸಲಾಗಿ ಗುತ್ತಿಗೆದಾರರ ನಿರ್ಲಕ್ಷೃದಿಂದ ಕಾಮಗಾರಿ ಪೂರ್ಣಗೊಳ್ಳದೆ ಗ್ರಾಮಸ್ಥರ ಆಕ್ರೋಶಕ್ಕೆ ಕಾರಣವಾಗಿದೆ.

ನಾಕೂರು ಶಿರಂಗಾಲ ಗ್ರಾಮದ ದಿವಂಗತ ಜಯಂತ್ ಬಂಗೇರ ಗ್ರಾಮಸ್ಥರಿಗೆ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಲು ಜಾಗವನ್ನು ದಾನವಾಗಿ ನೀಡಿ ಟ್ಯಾಂಕ್ ನಿರ್ಮಿಸಲು ಅವಕಾಶ ಕಲ್ಪಿಸಿದ್ದರು. ಜಲಜೀವನ್ ಮಿಷನ್ ಯೋಜನೆ ಅಡಿ ಸುಮಾರು 55ಲಕ್ಷ ವೆಚ್ಚದಲ್ಲಿ ಕಾಮಗಾರಿ ಆರಂಭಿಸಿದ ಗುತ್ತಿಗೆದಾರ ಸಂತೋಷ್ 2021ರಲ್ಲಿ ಪ್ರಾರಂಭವಾದ ಓವರ್ ಹೆಡ್ ಟ್ಯಾಂಕ್ ಕಾಮಗಾರಿಯನ್ನು 2024ಬಂದರೂ ಪೂರ್ಣಗೊಳಿಸಿಲ್ಲ.

ಗುತ್ತಿಗೆದಾರ ಸಂತೋಷ್, ಉಪಗುತ್ತಿಗೆದಾರ ಅದ್ರಾಂ ಎಂಬುವವರಿಗೆ ಕಾಮಗಾರಿ ಜವಬ್ದಾರಿ ನೀಡಿದ್ದರು. ಅದ್ರಂ ಅನಾರೋಗ್ಯದಿಂದ ಐದು ತಿಂಗಳ ಹಿಂದೆ ಮೃತಪಟ್ಟರು. ಇದರಿಂದ ಕಾಮಗಾರಿ ತಾತ್ಕಾಲಿಕವಾಗಿ ಸ್ಥಗಿತಗೊಂಡಿದೆ. ಗುತ್ತಿಗೆದಾರ ಸಂತೋಷ್ ಕೂಡ ಈ ಬಗ್ಗೆ ಯಾವುದೇ ಪರಿಹಾರ ಕಂಡುಕೊಳ್ಳದೆ ಕಾಮಗಾರಿ ಸ್ಥಗಿತಗೊಳಿಸಿರುವುದಕ್ಕೆ ಗ್ರಾಮಸ್ಥರು ಅಸಮಾಧಾನಗೊಂಡಿದ್ದಾರೆ.

ಗ್ರಾಮದ ಜನರು ನಿರಂತರ ಕುಡಿಯುವ ನೀರಿನ ಸಮಸ್ಯೆ ಎದುರಿಸುತ್ತಿದ್ದಾರೆ. ಗ್ರಾ.ಪಂ. ಸದಸ್ಯರ ನಿರ್ಲಕ್ಷೃದಿಂದ ಕಾಮಗಾರಿ ಪೂರ್ಣಗೊಂಡಿಲ್ಲ, ಸಂಬಂಧಪಟ್ಟವರು ಎಚ್ಚೆತ್ತು ಸಮಸ್ಯೆ ಬಗೆಹರಿಸಬೇಕು ಎಂದು ಗ್ರಾಮದ ಶಂಕರ್ ನಾರಾಯಣ, ಅನಿಲ್ ಕುಮಾರ್ ಒತ್ತಾಯಿಸಿದ್ದಾರೆ. ಸಮಸ್ಯೆ ಬಗೆಹರಿಯದಿದ್ದಲ್ಲಿ ಗ್ರಾಮಸ್ಥರು ಒಟ್ಟು ಸೇರಿ ಪ್ರತಿಭಟನೆ ಹಮ್ಮಿಕೊಳ್ಳುವುದಾಗಿ ಎಚ್ಚರಿಸಿದ್ದಾರೆ.