ದೇವದುರ್ಗದ ಕಿತ್ತೂರುರಾಣಿ ಚನ್ನಮ್ಮ ವಸತಿ ಶಾಲೆಯಲ್ಲಿ ಆಯೋಜಿಸಿದ್ದ ಕಾನೂನು ಅರಿವು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ವಿದ್ಯಾರ್ಥಿನಿಯರು. 
ಜಿಲ್ಲೆ

ಅನ್ಯಾಯದ ವಿರುದ್ಧ ಧ್ವನಿ ಎತ್ತಿ

ದೇವದುರ್ಗ: ಕಾನೂನಿನ ಜ್ಞಾನ ಹೊಂದಿರುವ ವ್ಯಕ್ತಿ ಅಪರಾಧ ಮಾಡುವುದು ಕಡಿಮೆ. ಪ್ರತಿಯೊಬ್ಬರೂ ಸಂವಿಧಾನ, ಕಾನೂನು ಜ್ಞಾನ ಪಡೆದು ಉತ್ತಮ ಪ್ರಜೆಗಳಾಗಿ ಬದುಕಬೇಕು ಎಂದು ಜೆಎಂಎಫ್‌ಸಿ ನ್ಯಾಯಾಲಯದ ನ್ಯಾಯಾಧೀಶ ಬಾಳಸಾಹೇಬ್ ವಡವಡೆ ಹೇಳಿದರು.


ಪಟ್ಟಣದ ಕಿತ್ತೂರು ರಾಣಿ ಚನ್ನಮ್ಮ ವಸತಿ ಶಾಲೆಯಲ್ಲಿ ಕಾನೂನು ಸೇವಾ ಪ್ರಾಧಿಕಾರ, ವಕೀಲರ ಸಂಘ ಹಾಗೂ ಪೊಲೀಸ್ ಇಲಾಖೆಯಿಂದ ಆಯೋಜಿಸಿದ್ದ ಕಾನೂನು ಅರಿವು ಕಾರ್ಯಕ್ರಮ ಉದ್ಘಾಟಿಸಿ ಭಾನುವಾರ ಮಾತನಾಡಿದರು.

ಉಚಿತ ನ್ಯಾಯ

ಕಾನೂನು ಅರಿವು ಪಡೆದರೆ ಅನ್ಯಾಯದ ವಿರುದ್ಧ ಧ್ವನಿ ಎತ್ತುವ ಜತೆಗೆ ನ್ಯಾಯ ಪಡೆಯಬಹುದು. ಅನ್ಯಾಯಕ್ಕೊಳಗಾದವರಿಗೆ ಉಚಿತ ನ್ಯಾಯ ಕೊಡುವ ವ್ಯವಸ್ಥೆಯಿದೆ. ದೇಶದ ಸಂವಿಧಾನ, ಕಾನೂನುಗಳು, ಮೂಲ ಹಕ್ಕುಗಳು, ಕರ್ತವ್ಯಗಳ ಬಗ್ಗೆ ವಿದ್ಯಾರ್ಥಿಗಳು ಶಾಲಾ ಕಾಲೇಜು ಹಂತಗಳಲ್ಲಿ ಓದಿ ಅಧ್ಯಯನ ಮಾಡಬೇಕಿದೆ. ಕಾನೂನು ಜ್ಞಾನ ನಮಗೆ ಉತ್ತಮ ಜೀವನ ನಡೆಸಲು ಸಹಕಾರಿಯಾಗಲಿದೆ ಎಂದರು.


ಪಿಐ ಕೆ.ಹೊಸಕೇರಪ್ಪ ಮಾತನಾಡಿ, ಯುವಜನತೆ ಮಾದಕ ವಸ್ತುಗಳ ಸೇವನೆಯಿಂದ ದೂರವಿರಬೇಕು. ಮಹಿಳೆಯರ ಮೇಲೆ ನಡೆಯುವ ದೌರ್ಜನ್ಯ, ಅನ್ಯಾಯ ತಡೆಯಲು ವಿಶೇಷ ಕಾನೂನುಗಳಿವೆ. ಪೋಕ್ಸೋ ಕಾಯ್ದೆ, ಬಾಲ್ಯ ವಿವಾಹ ತಡೆ ಕಾಯ್ದೆ, ಬಾಲಕಾರ್ಮಿಕ ಪದ್ಧತಿ ನಿರ್ಮೂಲನೆ, ಮಾನವ ಕಳ್ಳಸಾಗಣೆ ತಡೆಗೆ ಕಾನೂನಿನ ನೆರವು ಸದಾ ಇರಲಿದೆ. ವಿದ್ಯಾರ್ಥಿಗಳು ಸಾಮಾನ್ಯ ಕಾನೂನು ಜ್ಞಾನ ಜತೆಗೆ ನಿಯಮಗಳನ್ನು ಅರಿಯಬೇಕಿದೆ. ಇದರಿಂದ ಸಮಾಜದಲ್ಲಿ ನಡೆಯುವ ದುರ್ಘಟನೆಗಳನ್ನು ತಡೆಯಬಹುದು ಎಂದರು.

ವಕೀಲರ ಸಂಘದ ಅಧ್ಯಕ್ಷ ಬಸವರಾಜ ಮನ್ನಾಪುರಿ, ಕಾರ್ಯದರ್ಶಿ ಪಿಡ್ಡಯ್ಯ, ವಕೀಲರಾದ ವೆಂಕನಗೌಡ, ಪ್ರಾಚಾರ್ಯ ರಂಗಪ್ಪ ನಾಯಕ ಹಾಗೂ ಅಂಗನವಾಡಿ ಕಾರ್ಯಕರ್ತರು, ವಿದ್ಯಾರ್ಥಿಗಳು ಭಾಗವಹಿಸಿದ್ದರು.