ಶಿವಮೊಗ್ಗ: ಬಿಜೆಪಿ ಕಾರ್ಯಕರ್ತರು ಪ್ರಧಾನಿ ನರೇಂದ್ರ ಮೋದಿ ಜನ್ಮದಿನದ ಹಿನ್ನೆಲೆಯಲ್ಲಿ ಬುಧವಾರ ಸಂಭ್ರಮದಲ್ಲಿದ್ದರೆ ಕಾಂಗ್ರೆಸ್‌ನವರು ವಿನೂತನವಾಗಿ ಮೋದಿ ವಿರುದ್ಧ ಪ್ರತಿಭಟಿಸುವ ಮೂಲಕ ಸಾರ್ವಜನಿಕರ ಗಮನಸೆಳೆದರು. ಮೋದಿ ನೀಡಿದ್ದ ಭರವಸೆಯಂತೆ ಉದ್ಯೋಗ ಸೃಷ್ಟಿಯಾಗಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಶಿವಮೊಗ್ಗದ ಮುಖ್ಯ ಬಸ್ ನಿಲ್ದಾಣದಲ್ಲಿ ಮೋದಿ ಅವರ ಫ್ಲೆಕ್ಸ್ ಅಳವಡಿಸಿ, ಅದರಲ್ಲಿ ಮೋದಿ ಅವರಿಗೆ ಜನ್ಮದಿನದ ಶುಭಾಶಯ ಕೋರಲಾಗಿತ್ತು. ಜತೆಗೆ ಸೆ.11 ನಿರುದ್ಯೋಗ ದಿನ ಎಂದು ನಮೂದಿಸುವ ಮೂಲಕ ಪ್ರತಿಭಟನೆಯಲ್ಲೂ ಕ್ರಿಯಾಶೀಲತೆ ಮೆರೆದರು. ಕೆಲವರು ಶೂ ಪಾಲಿಶ್ ಮಾಡಿದರೆ, ಇನ್ನೂ ಕೆಲವರು ತರಕಾರಿ ಮಾರಾಟ ಮಾಡಿದರು. ಬೋಂಡಾ, ಟೀ ಮಾರಾಟವೂ ನಡೆಯಿತು. ನಿರುದ್ಯೋಗ ಹಾಗೂ ಮೋದಿ ವಿರುದ್ಧ ಭಿತ್ತಿ ಪತ್ರಗಳನ್ನು ಪ್ರದರ್ಶಿಸಿದರು. ಕೇಂದ್ರ ಸರ್ಕಾರ ಮತ್ತು ಪ್ರಧಾನಿ ವಿರುದ್ಧ ಘೋಷಣೆಗಳನ್ನು ಕೂಗಿದರು.
2014ರ ಲೋಕಸಭೆ ಚುನಾವಣೆ ಪ್ರಚಾರದ ವೇಳೆ ದೇಶದಲ್ಲಿ ವರ್ಷಕ್ಕೆ ಎರಡು ಕೋಟಿ ಉದ್ಯೋಗ ಸೃಷ್ಟಿಸುತ್ತೇವೆಂದು ಹೇಳಿ ಕೇಂದ್ರದಲ್ಲಿ ಮೂರು ಬಾರಿ ಅಧಿಕಾರದ ಚುಕ್ಕಾಣಿ ಹಿಡಿದ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಕೊಟ್ಟ ಭರವಸೆ ಈಡೇರಿಸುವಲ್ಲಿ ವಿಫಲವಾಗಿದೆ. ಕಾಂಗ್ರೆಸ್ ಬೆಳೆಸಿದ್ದ ಸರ್ಕಾರಿ ಸ್ವಾಮ್ಯದ ಬೃಹತ್ ಕೈಗಾರಿಕೆಗಳನ್ನು ಮುಚ್ಚಿದ್ದು ನರೇಂದ್ರ ಮೋದಿ. ಇದರಿಂದ ಲಕ್ಷಾಂತರ ಮಂದಿ ಉದ್ಯೋಗ ಕಳೆದುಕೊಳ್ಳುವಂತಾಯಿತು ಎಂದು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಆರ್.ಪ್ರಸನ್ನಕುಮಾರ್ ದೂರಿದರು.
ಪಾಲಿಕೆ ಮಾಜಿ ಸದಸ್ಯ ಎಚ್.ಸಿ.ಯೋಗೇಶ್ ಮಾತನಾಡಿ, ಸರ್ಕಾರಿ ಸ್ವಾಮ್ಯದ ಉದ್ದಿಮೆಗಳನ್ನು ಖಾಸಗೀಕರಣ ಮಾಡುವ ಮೂಲಕ ಉದ್ಯೋಗ ಕಡಿತ ಮಾಡಲಾಗಿದೆ. ಉದ್ಯೋಗ ಸೃಷ್ಟಿ ಬಗ್ಗೆ ಕೇಂದ್ರ ಸರ್ಕಾರವನ್ನು ಪ್ರಶ್ನಿಸಿದ ಯುವಜನತೆಗೆ ಬೋಂಡಾ, ತರಕಾರಿ, ಚಹಾ ಮಾರಾಟ ಮಾಡಿ ಎಂಬ ಉಚಿತ ಸಲಹೆಯನ್ನು ನರೇಂದ್ರ ಮೋದಿ ನೀಡಿರುವುದು ಖಂಡನೀಯ ಎಂದರು.
ಯುವ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಹರ್ಷಿತ್ ಗೌಡ, ಪ್ರಮುಖರಾದ ಮಧುಸೂದನ್, ಚೇತನ್, ಚರಣ್, ಗಿರೀಶ್, ಪ್ರವೀಣ, ಶಶಿಕುಮಾರ್, ಸಕ್ಲೇನ್, ರೇಷ್ಮಾ, ಬಾಲಾಜಿ, ವಿಜಯ್, ರವಿ ಕಾಟಿಕೆರೆ ಇತರರಿದ್ದರು.