ಮುಳಬಾಗಿಲು: ರಾಷ್ಟ್ರೀಯ ಹೆದ್ದಾರಿ 75ರ ದೇವರಾಯಸಮುದ್ರ ಬಳಿ ಒಂದೂವರೆ ಎಕರೆ ಪ್ರದೇಶದಲ್ಲಿ ಟೆಕ್ಸ್‌ಟೈಲ್ ಪಾರ್ಕ್ ನಿರ್ಮಾಣಕ್ಕೆ ತಮಿಳುನಾಡಿನ ಉದ್ಯಮಿಗಳು ಆಸಕ್ತಿವಹಿಸಿದ್ದು, ಅವರಿಗೆ ಸೂಕ್ತ ಜಮೀನನ್ನು ಒದಗಿಸುವುದರ ಜತೆಗೆ ಮೂಲ ಸೌಲಭ್ಯಗಳನ್ನು ಕಲ್ಪಿಸಿ 5 ಸಾವಿರ ನಿರುದ್ಯೋಗಿಗಳಿಗೆ ಉದ್ಯೋಗವಕಾಶ ಕಲ್ಪಿಸಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಚ್. ನಾಗೇಶ್ ಹೇಳಿದರು.
ನಗರದ ಡಿವಿಜಿ ಗಡಿ ಕನ್ನಡಭವನದಲ್ಲಿ ಕೈಮಗ್ಗ ಮತ್ತು ಜವಳಿ ಇಲಾಖೆಯಿಂದ 2020-21ನೇ ಸಾಲಿನ ನೂತನ ಜವಳಿ ನೀತಿ ಯೋಜನೆಯಡಿಯಲ್ಲಿ ಎಸ್ಸಿ, ಎಸ್ಟಿ ಹಾಗೂ ಇತರ ಫಲಾನುಭವಿಗಳಿಗೆ ಇಲಾಖೆಯಿಂದ ಯೋಜನೆಗಳ ಕುರಿತು ಅರಿವು ಮೂಡಿಸುವ ಎರಡು ದಿನಗಳ ಉದ್ಯಮಶೀಲತಾ ಅಭಿವೃದ್ಧಿ ತರಬೇತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ದೇವರಾಯಸಮುದ್ರ ಬಳಿ 1,500 ಹೆಕ್ಟೇರ್ ಪ್ರದೇಶವನ್ನು ಕೈಗಾರಿಕಾ ವಲಯವಾಗಿ ಗುರುತಿಸಲು ಸರ್ಕಾರದ ಮುಂದೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಶೀಘ್ರದಲ್ಲೇ ಅನುಮತಿ ದೊರೆತರೆ 50 ಸಾವಿರ ನಿರುದ್ಯೋಗಿಗಳಿಗೆ ಉದ್ಯೋಗ ಸಿಗುತ್ತದೆ ಎಂದರು.
ಪ್ರಧಾನಮಂತ್ರಿ ನರೇಂದ್ರ ಮೋದಿ ಸರ್ಕಾರ ನೂತನ ಜವಳಿ ನೀತಿಯನ್ನು ಅನುಷ್ಠಾನಮಾಡಿದ್ದು, ಇದಕ್ಕಾಗಿ ಉದ್ಯಮಶೀಲತಾ ಅಭಿವೃದ್ಧಿ ತರಬೇತಿ ಕಾರ್ಯಕ್ರಮಗಳ ಮೂಲಕ ಕೌಶಲ ತುಂಬಿ ಸ್ವಉದ್ಯೋಗ ಕೈಗೊಳ್ಳಲು ಅವಕಾಶ ಮಾಡಲಾಗುತ್ತಿದೆ. ನೇಕರಾರರಿಗೆ ವಿಶೇಷ ಪ್ಯಾಕೇಜ್ ಅಡಿಯಲ್ಲಿ ರಿಯಾಯಿತಿ ದರದಲ್ಲಿ ವಿದ್ಯುತ್ ಸೇರಿ ಮೂಲ ಸೌಲಭ್ಯಗಳ ಸಾಲ, ಸಹಾಯಧನ ನೀಡಲಾಗುತ್ತಿದೆ. ತರಬೇತಿ ಪಡೆದ ಎಲ್ಲ ಫಲಾನುಭವಿಗಳು ಕೈಮಗ್ಗ ಮತ್ತು ಜವಳಿ ಕೌಶಲವನ್ನು ಹೆಚ್ಚಿಸಿಕೊಂಡು ಸ್ವಾವಲಂಬಿಗಳಾಗಬೇಕು ಎಂದರು.
ತಾಪಂ ಅಧ್ಯಕ್ಷ ಎ.ವಿ.ಶ್ರೀನಿವಾಸ್ ಮಾತನಾಡಿ, ಸಚಿವ ಎಚ್.ನಾಗೇಶ್ ಅವರು ವಿಶೇಷ ಆಸಕ್ತಿ ವಹಿಸಿ ಕೈಮಗ್ಗ ಮತ್ತು ಜವಳಿ ಇಲಾಖೆಯಿಂದ ತಾಲೂಕಿನ ಫಲಾನುಭವಿಗಳಿಗೆ ಸೌಲಭ್ಯಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ಒದಗಿಸಲು ಮುಂದಾಗಿರುವುದು ಶ್ಲಾಘನೀಯ. ತರಬೇತಿ ಪಡೆದ ನಂತರ ಎಲ್ಲರೂ ಸ್ವ ಉದ್ಯೋಗ ಮಾಡುವ ಮೂಲಕ ಕಿರು ಜವಳಿ ಉದ್ಯಮವನ್ನು ಆರಂಭಿಸಿ ಮುಂದೆ ದೊಡ್ಡ ಪ್ರಮಾಣದಲ್ಲಿ ಬೆಳೆಯಬೇಕೆಂದು ಸಲಹೆ ನೀಡಿದರು.
ನಗರಸಭೆ ಅಧ್ಯಕ್ಷ ರಿಯಾಜ್ ಅಹ್ಮದ್, ಕೈಮಗ್ಗ ಮತ್ತು ಜವಳಿ ಇಲಾಖೆಯ ದಕ್ಷಿಣ ವಲಯ ಜಂಟಿ ನಿರ್ದೇಶಕ ಎ.ಸುರೇಶ್‌ಕುಮಾರ್, ಉಪನಿರ್ದೇಶಕಿ ಎಂ.ಸೌಮ್ಯ, ಎಪಿಎಂಸಿ ಅಧ್ಯಕ್ಷ ಗೊಲ್ಲಹಳ್ಳಿ ಪಿ.ವೆಂಕಟೇಶ್, ದರಕಾಸ್ತು ಸಮಿತಿ ಸದಸ್ಯ ಆರ್.ಪೆದ್ದಪ್ಪಯ್ಯ, ಜಿಲ್ಲಾ ಮಹಿಳಾ ಕಾಂಗ್ರೆಸ್ ಮಾಜಿ ಅಧ್ಯಕ್ಷೆ ಕೆ.ಎಂ.ಅರುಣಕುಮಾರಿ, ಕೈಮಗ್ಗ ನೇಕಾರರ ಸಂಘದ ಅಧ್ಯಕ್ಷ ಟಿ.ರಮೇಶ್, ಕಾರ್ಯದರ್ಶಿ ಎಸ್.ಕೆ.ನಾಗರಾಜ್, ವೈಷ್ಣವಿ ನೇಕಾರ ಸಂಸ್ಥೆಯ ಅಧ್ಯಕ್ಷ ನಾಗರಾಜ್, ಸಂಘದ ನಿರ್ದೇಶಕ ನಾರಾಯಣಸ್ವಾಮಿ, ಮುಖಂಡ ಜಿ.ಆರ್.ಮಹದೇವ್ ಮತ್ತಿತರರು ಇದ್ದರು.