ಜಿಲ್ಲೆ

ಅಭಿವೃದ್ಧಿ ಕಾಣದ ತೂಂಬಡ್ಕ ರಸ್ತೆ

Avinash R

ಪೆರ್ಲ: ಪೆರ್ಲ ಸ್ವರ್ಗ ಪಾಣಾಜೆ ಅಂತಾರಾಜ್ಯ ಸಂಪರ್ಕ ರಸ್ತೆಯ ಸ್ವರ್ಗ ಜಂಕ್ಷನ್ ನಿಂದ ವಾಣೀನಗರ ಕಿನ್ನಿಂಗಾರು ರಸ್ತೆಯಲ್ಲಿ 100 ಮೀ.ಮುಂದುವರಿದು ಎಡಕ್ಕೆ ತಿರುಗಿ ಕರ್ನಾಟಕ ರಾಜ್ಯ ಸಂಪರ್ಕಿಸುವ ಸ್ವರ್ಗ-ತೂಂಬಡ್ಕ-ಆರ್ಲಪದವು ರಸ್ತೆಯ ಕೇರಳದ 1.3 ಕಿ.ಮೀ.ರಸ್ತೆ ಭಾಗ ವರ್ಷಗಳಿಂದ ಅಭಿವೃದ್ಧಿ ಕಾಣದೆ ಸಂಚಾರ ದುರವಸ್ಥೆ ಎದುರಿಸುತ್ತಿದೆ. ತೂಂಬಡ್ಕ ಬಯಲಿನ ನಾಲ್ಕೈದು ಕೆಂಪು ಕಲ್ಲು ಕೋರೆಗಳಿಂದ ಈ ಹಿಂದೆ ಪ್ರತಿ ದಿನ ಹತ್ತಕ್ಕೂ ಹೆಚ್ಚು ಲಾರಿಗಳಲ್ಲಿ ತೂಂಬಡ್ಕ-ಸ್ವರ್ಗ-ಪಾಣಾಜೆ ಮೂಲಕ ಹಾಸನ, ಕೊಡಗು ಸಹಿತ ಕರ್ನಾಟಕದ ವಿವಿಧ ಜಿಲ್ಲೆಗಳಿಗೆ ಕೆಂಪು ಕಲ್ಲು ಸಾಗಿಸಲಾಗುತ್ತಿತ್ತು. ಪ್ರಸ್ತುತ ಕೋರೆ ಹೊಂಡ ಭೂಗರ್ಭ ತಲುಪಿದ್ದು ಕಲ್ಲು ಖಾಲಿಯಾಗಿದೆ. ಕೋರೆ ಸಂಖ್ಯೆ ಒಂದಕ್ಕಿಳಿದಿದೆ. ಕಲ್ಲು ಸಾಗಾಟದ ಲಾರಿಗಳ ಸಂಖ್ಯೆಯೂ ಕಡಿಮೆಯಾಗಿದೆ. ಕಲ್ಲು ಸಾಗಾಟದ ದೊಡ್ಡ ಲಾರಿ, ಟಿಪ್ಪರ್ ಭಾರಕ್ಕೆ ವಾಹನದ ಟಯರ್ ಹೋಗುವ ಎರಡೂ ಬದಿ ಸವೆದು ಒಂದಡಿ ತಗ್ಗಿದೆ. ನಡು ಭಾಗ ಎತ್ತರಿಸಿದ ರಸ್ತೆಯಲ್ಲಿ ಕಾರುಗಳ ಅಡಿ ಭಾಗ ನೆಲಕ್ಕೆ ತಾಗುತ್ತಿದೆ. ತ್ರಿಚಕ್ರ ವಾಹನಗಳ ಮುಂದಿನ ಚಕ್ರವನ್ನು ರಸ್ತೆಯ ನಡು ಭಾಗದಿಂದ ಕೆಳಗಿಳಿಸಲೂ ಸಾಧ್ಯವಿಲ್ಲ. ವಾಹನಗಳು ಎದುರು ಬದುರಾದರೆ 100 ಮೀ ಗೂ ಹೆಚ್ಚು ರಿವರ್ಸ್ ಗಿಯರೇ ಗತಿ. ರಸ್ತೆಯ ಶೋಚನೀಯ ಸ್ಥಿತಿಯಿಂದ ಆಟೋ ರಿಕ್ಷಾ, ಟ್ಯಾಕ್ಸಿ ವಾಹನ ಚಾಲಕರು ಬಾಡಿಗೆ ನಿರಾಕರಿಸುತ್ತಿದ್ದಾರೆ. ಇದರಿಂದ ತೂಂಬಡ್ಕ ಗುಡ್ಡೆ ಮೇಲಿನ ಮೂರು ಎಸ್ ಸಿ ಕುಟುಂಬಗಳು, ಕರ್ನಾಟಕ ಪಾಲ್ತಮೂಲೆ ಹಾಗೂ ತೂಂಬಡ್ಕದ 15ಕ್ಕೂ ಹೆಚ್ಚು ಎಸ್ ಟಿ ಸಹಿತ ಈ ರಸ್ತೆಯನ್ನು ದೈನಂದಿನ ಹಾಗೂ ತುರ್ತು ಸನ್ನಿವೇಶದಲ್ಲಿ ಅವಲಂಬಿಸಿರುವ ಸುಮಾರು 50 ಕುಟುಂಬಗಳು ತೊಂದರೆಗೊಳಗಾಗಿದೆ. ಈ ಅಂತಾರಾಜ್ಯ ಸಂಪರ್ಕ ರಸ್ತೆಗೆ ತ್ರಿಸ್ತರ ಪಂಚಾಯಿತಿ ಅನುದಾನಗಳು ಅಪರ್ಯಾಪ್ತವಾಗಿದ್ದು, ಪಿಎಂಜಿ ಎಸ್‌ವೈ ಯೋಜನೆಯಲ್ಲಿ ಮೇಲ್ದರ್ಜೆಗೇರಿಸಿ ಅಭಿವೃದ್ಧಿಪಡಿಸಲು ಅಧಿಕೃತರು ತಯಾರಾಗಬೇಕು. ಒಂದೇ ವರ್ಷದಲ್ಲೇ ಡಮಾರ್! ಸ್ವರ್ಗ ತೂಂಬಡ್ಕ ರಸ್ತೆ ಅಭಿವೃದ್ಧಿಯ ನಿರಂತರ ಬೇಡಿಕೆ, ಮನವಿ ಪರಿಗಣಿಸಿ ಮಂಜೇಶ್ವರ ಶಾಸಕರ 2016-17 ವರ್ಷದ ವಿಶೇಷ ಅಭಿವೃದ್ಧಿ ನಿಧಿ (ಎಸ್.ಡಿ.ಎಫ್.) 4.75 ಲಕ್ಷ ಅನುದಾನದಲ್ಲಿ ರಸ್ತೆ ಆರಂಭದ 173 ಮೀ.ಭಾಗ ಎಣ್ಮಕಜೆ ಪಂಚಾಯಿತಿ ಮಿನಿ ಸ್ಟೇಡಿಯಂ ತಿರುವಿನವರೆಗೆ 2017ರಲ್ಲಿ ಡಾಂಬರಯ ಕಾಮಗಾರಿ ನಡೆದಿತ್ತು. ಆದರೆ ಒಂದೇ ವರ್ಷದಲ್ಲಿ ಡಾಂಬರ್ ಸಂಪೂರ್ಣ ಕಿತ್ತು ಹೋಗಿ ರಸ್ತೆ ಪೂರ್ವಸ್ಥಿತಿಗಿಂತ ಶೋಚನೀಯವಾಗಿದೆ. ಪಾಣಾಜೆ ಗ್ರಾಪಂ ವ್ಯಾಪ್ತಿಯ ಸೂರಂಬೈಲು ಸರ್ಕಾರಿ ಶಾಲೆವರೆಗೆ ಕಾಂಕ್ರೀಟ್, ಮುಂದುವರಿದು ಇಂಟರ್ ಲಾಕ್, ಭರಣ್ಯ ಕೂಡು ರಸ್ತೆ ತನಕ ಮತ್ತೆ ಕಾಂಕ್ರೀಟ್, ಭರಣ್ಯದಿಂದ ಸ್ವರ್ಗ-ಪುತ್ತೂರು ರಸ್ತೆ ತನಕ ಡಾಂಬರ್ ರಸ್ತೆಯಾಗಿದೆ. ಕರ್ನಾಟಕ ಆರಂಭದ ಸ್ವಲ್ಪ ಭಾಗ ಹೊರತು ಪಡಿಸಿ ಸುಮಾರು 3 ಕಿ.ಮೀ.ಸಂಪೂರ್ಣ ಸುಸ್ಥಿತಿಯಲ್ಲಿದೆ. ಕೇರಳದಲ್ಲಿ ಕಲ್ಲು ಮಣ್ಣು ! ಕೇರಳ ಭಾಗದ 1.3 ಕಿ.ಮೀ.ಕಚ್ಚಾ ರಸ್ತೆ ಸಂಪೂರ್ಣ ಸವೆದು ಹೊಂಡ-ಗುಂಡಿ, ಧೂಳಿನಿಂದ ಕೂಡಿದೆ. ತೂಂಬಡ್ಕ ಪಾರೆ ಪ್ರದೇಶದ ರಸ್ತೆ ಸವೆದಿದೆ. ಕರ್ನಾಟಕ ಗಡಿಯಲ್ಲಿ ಹೊಸ ಬಿಎಸ್‌ಎನ್‌ಎಲ್ ಟವರ್ ಸ್ಥಾಪಿಸಲಾದ ರಸ್ತೆ ಭಾಗದಲ್ಲಿ ಮಧ್ಯೆ ಹೊಂಡ ಸೃಷ್ಟಿಯಾಗಿದೆ. ಪ್ರತಿ ಮಳೆಗಾಲದ ಬಳಿಕ ಸ್ಥಳೀಯರು, ಕ್ವಾರೆ ಕಾರ್ಮಿಕರು ಕಲ್ಲು ಮಣ್ಣು ಹಾಕಿ ದುರಸ್ತಿ ಮಾಡುತ್ತಿದ್ದಾರೆ. ಮಳೆಗಾಲದಲ್ಲಿ ವಾಹನಗಳು ಜಾರುವುದು, ಹೂತು ಹೋಗುವುದು ಮಾಮೂಲಾಗಿದೆ.

ಪಿಎಂಜಿಎಸ್ ವೈ 4ನೇ ಹಂತದ ಯೋಜನೆಯಡಿ ಗ್ರಾಮ ಸಡಕ್ ಆ್ಯಪ್‌ನಲ್ಲಿ ರಸ್ತೆಯ ಚಿತ್ರಗಳು ಅಪ್‌ಲೋಡ್ ಆಗಿದೆ. ರಾಜ್ಯ ಸರ್ಕಾರದ ಅಂಗೀಕಾರ ಲಭಿಸಿದ್ದು ಕೇಂದ್ರ ಸರ್ಕಾರದ ಪರಿಗಣನೆಯಲ್ಲಿದೆ. ರಸ್ತೆಗೆ ಲಭಿಸುವ ರ‌್ಯಾಂಕ್ ಅಭಿವೃದ್ಧಿಗೆ ನಿರ್ಣಯಕವಾಗಿದೆ. ಸುನಿಲ್ ಕುಮಾರ್ ರೈ ಸಿ., ಪಿಎಂಜಿಎಸ್ ವೈ ಮೇಲ್ವಿಚಾರಕರು ಮಂಜೇಶ್ವರ ವಿಭಾಗ, ಕಾಸರಗೋಡು