ಜಿಲ್ಲೆ

ಹಿರಿಯರ ತ್ಯಾಗ, ಬಲಿದಾನ ಅರಿತು ಮುನ್ನಡೆಯಿರಿ

ವಿಜಯವಾಣಿ ಸುದ್ದಿಜಾಲ ಗೌರಿಬಿದನೂರು

ಯುವ ದಲಿತ ಹೋರಾಟಗಾರರು ಹಿರಿಯರ ತ್ಯಾಗ ಬಲಿದಾನ ಅರಿತು ಅವರ ಮಾರ್ಗದರ್ಶನದಲ್ಲಿ ಹೋರಾಟ ರೂಪಿಸಿಕೊಂಡು ನೊಂದವರಿಗೆ ನ್ಯಾಯ ಕೊಡಿಸಬೇಕು ಎಂದು ಜಿಲ್ಲಾ ದಸಂಸದ ಸಂಘಟನಾ ಸಂಚಾಲಕ ಹುದಗೂರು ನಂಜುಂಡಪ್ಪ ತಿಳಿಸಿದರು.

ತಾಲೂಕಿನ ಡಿಪಾಳ್ಯದಲ್ಲಿ ಹೊಬ್ಬಳಿಮಟ್ಟದ ದಸಂಸ ಸರ್ವ ಸದಸ್ಯರ ಹಾಗೂ ನೂತನ ಪದಾಧಿಕಾರಿಗಳ ಆಯ್ಕೆ ಸಭೆಯಲ್ಲಿ ಮಾತನಾಡಿ, ಸಂಘಟನೆ ಅಂಬೇಡ್ಕರ್​ ನೆರಳಿನಲ್ಲಿ ಮುನ್ನಡೆಯುತ್ತಿದ್ದು, ಅವರ ತತ್ವ ಆದರ್ಶಕ್ಕೆ ಕಳಂಕ ಬಾರದಂತೆ ಸಮಿತಿಯ ಪದಾಧಿಕಾರಿಗಳು ಅಸಹಾಯಕರಿಗೆ, ದೀನದಲಿತರಿಗೆ ನ್ಯಾಯ ಕೊಡಿಸಲು ಹೋರಾಡಬೇಕು. ಗುರಿ ಇಲ್ಲದ ಚಳುವಳಿ ಜೀವಂತವಾಗಿರುವುದಿಲ್ಲ, ಗುರಿ ಹೊಂದಿರುವ ಚಳುವಳಿಗಳು ಮುಂದಿನ ಪೀಳಿಗೆಗೆ ಜೀವಂತವಾಗಿರುತ್ತವೆ. ಆದ್ದರಿಂದ ಯುವ ಹೋರಾಟಗಾರರು ಹಿರಿಯರನ್ನು ಅರ್ಥ ಮಾಡಿಕೊಂಡು ಹೋರಾಟಗಳಲ್ಲಿ ತೊಡಗಿಸಿಕೊಳ್ಳಬೇಕು ಎಂದರು. ಸಮಿತಿಯ ತಾಲೂಕು ಸಂಚಾಲಕ ಕೆ.ಎಂ.ಮಧುಕುಮಾರ್​ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಸಂವಿಧಾನ ವಿರೋಧಿ ಹೇಳಿಕೆಗಳು ಕೇಳಿ ಬರುತ್ತಿರುವುದು ಸಂವಿಧಾನಕ್ಕೆ ಮಾರಕ. ಆದ್ದರಿಂದ ನಾವೆಲ್ಲರೂ ಸಂವಿಧಾನ ಉಳಿಸುವ- ರಕ್ಷಿಸುವ ಹೋರಾಟ ರೂಪಿಸಬೇಕಾಗಿದೆ ಎಂದರು.

ಆಯ್ಕೆಯಾದ ಪದಾಧಿಕಾರಿಗಳು

ಸಂಚಾಲಕರಾಗಿ ಸೋಮಶೇಖರ್​, ಜಿ.ನರಸಿಂಹಮೂರ್ತಿ, ಸಂಘಟನಾ ಸಂಚಾಲಕರು ಹುದುಗೂರು ನಾರಾಯಣಪ್ಪ, ಡಿಪಾಳ್ಯ ಚಿಕ್ಕ ನರಸಿಂಹಯ್ಯ, ಗುಂಡ್ಲಹಳ್ಳಿ ವೆಂಕಟೇಶ್​, ವೆಂಕಟಾಪುರ ನಂದಪ್ಪ, ನಾಮಗೊಂಡ್ಲು ಬಾಬು, ಸಮಿತಿ ಸದಸ್ಯರಾದ ಚಂದ್ರಪ್ಪ ಮಂಜುನಾಥ ನಾಗೇಶ್​, ಗಂಗಯ್ಯ ಕಡಬೂರಿನ ನವೀನ್​, ನರಸಿಂಹಮೂರ್ತಿ, ಸುರೇಶ್​ ಆಯ್ಕೆಯಾಗಿದ್ದಾರೆ.