ಹುಣಸೂರು: ಕೃಷಿ ಪರಿಕರಗಳ ಮಾರಾಟಗಾರರು ಹವಾಮಾನ ವೈಪರೀತ್ಯದ ನಡುವೆ ಜೂಜಾಟ ನಡೆಸಿ ಬಸವಳಿದ ರೈತಾಪಿ ಜನರ ಬವಣೆ ಅರಿತು ಸೇವಾ ಮನೋಭಾವದೊಂದಿಗೆ ವ್ಯವಹರಿಸಬೇಕೆಂದು ಕೃಷಿ ಇಲಾಖೆ ಜಂಟಿ ನಿರ್ದೇಶಕ ಡಾ.ಕೆ.ಎಚ್.ರವಿ ಮನವಿ ಮಾಡಿದರು.
ನಗರದ ಅಂಬೇಡ್ಕರ್ ಭವನದಲ್ಲಿ ಮಂಗಳವಾರ ಹುಣಸೂರು ಉಪವಿಭಾಗ ವ್ಯಾಪ್ತಿಯ ಕೃಷಿ ಪರಿಕರ ಮಾರಾಟಗಾರರ ಸಭೆಯನ್ನು ಉದ್ಘಾಟಿಸಿ ಮಾತನಾಡಿ, ಸರ್ಕಾರಿ ಅಧಿಕಾರಿಗಳು ಮತ್ತು ಕೃಷಿ ಪರಿಕರ ಮಾರಾಟಗಾರರ ನಡುವಿನ ಸಂಬಂಧಗಳ ಬಗ್ಗೆ ರೈತರಲ್ಲಿ ಋಣಾತ್ಮಕ ಮನೋಭಾವವಿದೆ. ಇದನ್ನು ಹೋಗಲಾಡಿಸಬೇಕಿದೆ. ಮೂಲತಃ ನಾವೆಲ್ಲರೂ ರೈತರಾಗಿದ್ದೇವೆ. ವ್ಯಾಪಾರ ನಡೆಸುವಾಗ ಕೇವಲ ಲಾಭದ ದೃಷ್ಟಿಯಿಂದ ಮಾತ್ರ ರೈತರೊಂದಿಗೆ ವ್ಯವಹರಿಸಬೇಡಿ. ಅತಿವೃಷ್ಟಿ, ಅನಾವೃಷ್ಟಿಯ ಜೂಜಾಟದ ನಡುವೆ ಕಷ್ಟಪಟ್ಟು ರೈತ ಬೆಳೆಯುತ್ತಾನೆ. ಅವನ ಬವಣೆ ಅರಿಯಿರಿ. ವ್ಯಾಪಾರಂ ದ್ರೋಹಚಿಂತನಂ ಎನ್ನುವ ಹಳೆಯ ಮಾತನ್ನು ಸುಳ್ಳಾಗಿಸುವತ್ತ ನಿಮ್ಮ ಚಿಂತನೆ ಇರಲಿ ಎಂದರು.
ಅಗತ್ಯವಸ್ತುಗಳ ಕಾಯ್ದೆ ಪಾಲನೆ ಆಗಲಿ: ಕಾನೂನಿನ ಚೌಕಟ್ಟಿನಲ್ಲಿ ವ್ಯವಹಾರ ನಡೆಸುವ ಯಾವುದೇ ವ್ಯಾಪಾರಿಗೂ ನಮ್ಮಿಂದ ತೊಂದರೆಯಾಗುವುದಿಲ್ಲವೆನ್ನುವ ಭರವಸೆ ನೀಡುತ್ತೇನೆ. ಅಗತ್ಯ ವಸ್ತುಗಳ ಕಾಯ್ದೆಯಡಿ ಅಂಗಡಿ ಮಳಿಗೆಗಳಲ್ಲಿ ದರಪಟ್ಟಿ ಪ್ರದರ್ಶನ, ದಾಸ್ತಾನು ಪರಿಮಾಣ ಪ್ರದರ್ಶನ, ಪ್ರತಿ ಗ್ರಾಹಕರಿಗೆ ಬಿಲ್ ನೀಡುವುದು, ಎಂಆರ್‌ಪಿ ದರದಲ್ಲಿ ಮಾರಾಟ ಮಾಡುವುದು ಇವೇ ಮುಂತಾದ ಕನಿಷ್ಠ ಕಾನೂನುಗಳನ್ನು ಕಡ್ಡಾಯವಾಗಿ ಪಾಲಿಸಿರಿ. ಪಿಒಎಸ್(ಪಾಯಿಂಟ್ ಆಫ್ ಸೇಲ್) ಉಪಕರಣವನ್ನು ಬಹುತೇಕ ಗ್ರಾಮೀಣ ಭಾಗದ ಡೀಲರ್‌ಗಳು ಸಮರ್ಪಕವಾಗಿ ಬಳಕೆ ಮಾಡದ ಕಾರಣ ಜಿಲ್ಲೆಯಲ್ಲಿ ದಾಸ್ತಾನು ಲೆಕ್ಕಾಚಾರ ಸಮರ್ಪಕವಾಗಿ ಸಿಗುತ್ತಿಲ್ಲ. ಹಾಗಾಗಿ ಪಿಒಎಸ್ ವ್ಯವಸ್ಥೆಯಲ್ಲಿ ಸಮರ್ಪಕವಾಗಿ ಕ್ಲಿಯರ್ ಮಾಡಿಕೊಳ್ಳಿರಿ ಎಂದರು.
28 ದಿನಗಳಲ್ಲಿ ಪರವಾನಗಿ ನೀಡುತ್ತೇನೆ: ಮಾರಾಟಗಾರರಿಗೆ ಅಗತ್ಯವಾಗಿರುವ ರಸಗೊಬ್ಬರ ಮಾರಾಟದ ಪರವಾನಗಿ, ಬಿತ್ತನೆ ಬೀಜ ಮಾರಾಟ ಪರವಾನಗಿ ಸೇರಿದಂತೆ ವಿವಿಧ ರೀತಿಯ ಪರವಾನಗಿಯನ್ನು ಸರ್ಕಾರ ನಿಗದಿಪಡಿಸಿ 28 ದಿನಗಳೊಳಗೆ ನಿಮಗೆ ತಲುಪಿಸುವ ಜವಾಬ್ದಾರಿ ನನ್ನದು. ಇದಕ್ಕಾಗಿ ನೀವು ಸರ್ಕಾರ ನಿಗದಿಪಡಿಸಿದ ಶುಲ್ಕವನ್ನು ಹೊರತುಪಡಿಸಿ ಒಂದು ರೂಪಾಯಿಯನ್ನೂ ಯಾರಿಗೂ ನೀಡಬೇಕಿಲ್ಲ. ಆದರೆ ಕಾನೂನಿನ ಪಾಲನೆ ನಿಮ್ಮದಾಗಬೇಕು. ವ್ಯಾಪಾರದೊಂದಿಗೆ ಸೇವೆಯೂ ನಿಮ್ಮ ವ್ಯಾಪಾರದ ಒಂದು ಭಾಗವಾಗಲಿ ಎಂದು ಕೋರಿದರು.
ಸಭೆಯಲ್ಲಿ ಕೃಷಿ ಇಲಾಖೆ ಹುಣಸೂರು ಸಹಾಯಕ ನಿರ್ದೇಶಕ ಅನಿಲ್‌ಕುಮಾರ್, ಪಿರಿಯಾಪಟ್ಟಣದ ವೈ.ಪ್ರಸಾದ್, ಕೆ.ಆರ್.ನಗರದ ಕೆ.ಎಂ.ಮಲ್ಲಿಕಾರ್ಜುನ, ತಾಲೂಕು ರಸಗೊಬ್ಬರ ಮಾರಾಟಗಾರರ ಸಂಘದ ಅಧ್ಯಕ್ಷ ರಾಜಶೇಖರ್, ಗಿರೀಶ್, ಪ್ರಸಾದ್, ರೈತ ಉತ್ಪಾದಕರ ಕಂಪನಿ ಅಧ್ಯಕ್ಷ ಲಿಂಗರಾಜು, ನಿರ್ದೇಶಕ ಉಂಡುವಾಡಿ ಚಂದ್ರೇಗೌಡ, ರೈತ ಸೇವಾ ಕೇಂದ್ರದ ಅಧಿಕಾರಿಗಳು, ಕೃಷಿ ಅಧಿಕಾರಿಗಳು ಮತ್ತು ರೈತರು ಹಾಜರಿದ್ದರು.
ಕ್ರಿಮಿನಲ್ ಮೊಕದ್ದಮೆ ಹೂಡಲಾಗುವುದು: ಜಿಲ್ಲೆಯಿಂದ ಯೂರಿಯಾ ಗೊಬ್ಬರವನ್ನು ಅಂತಾರಾಜ್ಯಕ್ಕೆ ಕಳ್ಳಸಾಗಣೆ ಮೂಲಕ ಸಾಗಿಸಲಾಗುತ್ತಿದೆ ಎಂಬ ವದಂತಿಗಳಿವೆ. ಯಾರೇ ಆದರೂ ಇಂತಹ ಕೃತ್ಯ ನಡೆಸಿದಲ್ಲಿ ಅವರ ವಿರುದ್ಧ ಅಗತ್ಯ ವಸ್ತುಗಳ ಕಾಯ್ದೆಯಡಿ ಮಾತ್ರ ಪ್ರಕರಣ ದಾಖಲಿಸದೇ ಕ್ರಿಮಿನಲ್ ಮೊಕದ್ದಮೆಯನ್ನೂ ದಾಖಲಿಸಲಿದ್ದೇವೆ. ಸರ್ಕಾರ ಟನ್ ಯೂರಿಯಾವನ್ನು 1500 ರೂ. ಸಬ್ಸಿಡಿಯೊಂದಿಗೆ ಕೇವಲ 500 ರೂ.ಗಳಿಗೆ ನೀಡುತ್ತಿದೆ. ಇದನ್ನು ಕೃಷಿಯೇತರ ಕಾರ್ಯಗಳಿಗಾಗಿ ಅಕ್ರಮವಾಗಿ ಬಳಸಲಾಗುತ್ತಿದ್ದು, 4,500 ರೂ.ಗಳಿಗೆ ಮಾರಾಟ ಮಾಡಲಾಗುತ್ತಿದೆ. ಸಗಟು ಮತ್ತು ಚಿಲ್ಲರೆ ಮಾರಾಟಗಾರರು ಇಂತಹ ಯಾವುದೇ ಅನ್ಯಾಯಗಳನ್ನು ನಡೆಸುವ ಕಾರ್ಯಕ್ಕೆ ಇಳಿಯಬಾರದು ಎಂದು ಕೃಷಿ ಇಲಾಖೆ ಜಂಟಿ ನಿರ್ದೇಶಕ ರವಿ ಎಚ್ಚರಿಸಿದರು.