ಜಿಲ್ಲೆ

ಎಲ್ಲ ಧರ್ಮಗಳ ಸಾಮರಸ್ಯ ಅರಿಯಿರಿ

ಕುಂದಗೋಳ: ಪುರಾಣ, ಬೈಬಲ್ ಹಾಗೂ ಕುರಾನ್ ಗ್ರಂಥಗಳ ಬಗ್ಗೆ ಶ್ರದ್ಧೆಯಿಂದ ಅಧ್ಯಯನ ಮಾಡಿ ಎಲ್ಲ ಧರ್ಮಗಳು ಒಂದೇ ಎಂದು ತೋರಿಸಿ ಕೊಟ್ಟವರು ರಾಮಕೃಷ್ಣ ಪರಮಹಂಸರು ಎಂದು ಗೌರಿಗದ್ದೆ ದತ್ತಾಶ್ರಮದ ಅವಧೂತ ಶ್ರೀ ವಿನಯ ಗುರೂಜಿ ಹೇಳಿದರು.

ತಾಲೂಕಿನ ಗುಡಗೇರಿ ಗ್ರಾಮದ ಶ್ರೀ ದ್ಯಾಮವ್ವ ದೇವಿ ದೇವಸ್ಥಾನ ಆವರಣದಲ್ಲಿ ಕಲ್ಪತರು ದಿನದ ಅಂಗವಾಗಿ ನಿರಾಮಯ ಫೌಂಡೇಷನ್ (ರಿ) ವತಿಯಿಂದ ಕಳಸದ ಶ್ರೀ ಗುರು ಗೋವಿಂದ ಭಟ್ಟರ ಸನ್ನಿಧಾನದಿಂದ ಶಿಷ್ಯ ಶಿಶುನಾಳ ಶರೀಫರ ಸನ್ನಿಧಿವರೆಗೂ ಬುಧವಾರ ಹಮ್ಮಿಕೊಂಡಿದ್ದ ಸದ್ಭಾವನಾ ಪಾದಯಾತ್ರೆಯ ಸಭಾ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು. ಎಲ್ಲ ಧರ್ಮಗಳ ಸಾಮರಸ್ಯ ಅರಿಯಬೇಕು. ಹಿಂಸೆ ಯಾವ ಧರ್ಮದಲ್ಲಿಯೂ ಇಲ್ಲ. ಧರ್ಮಕ್ಕೆ, ಗುರುಪೀಠಕ್ಕೆ ಸೂರ್ಯ-ಚಂದ್ರ ಇರುವವರೆಗೂ ಅಂತ್ಯವಿಲ್ಲ. ಯಾರನ್ನು ಜಾತಿಗೆ ಸೀಮಿತ ಮಾಡದೆ ನೀತಿಗೆ ಸೀಮಿತ ಮಾಡಬೇಕು ಎಂದರು.

ನಿರಾಮಯ ಫೌಂಡೇಷನ್ ಸಂಸ್ಥಾಪಕ ಡಾ. ಮಲ್ಲಿಕಾರ್ಜುನ ಬಾಳಿಕಾಯಿ ಮಾತನಾಡಿ, ಗುರುವಿನ ಮಾರ್ಗದರ್ಶನದಿಂದ ಶಿಷ್ಯ ಪರಿವರ್ತನೆ ಆಗುತ್ತಾನೆ. ಹಲವು ಕಡೆ ಶಿಷ್ಯನನ್ನು ಗುರುತಿಸಲಾಗುತ್ತದೆ ಆದರೆ, ಶಿಷ್ಯನಿಗೆ ಮಾರ್ಗದರ್ಶನ ನೀಡಿದ ಗುರುವನ್ನು ಗುರುತಿಸುವ ಕೆಲಸವಾಗಬೇಕು. ಸ್ವಾಮಿ ವಿವೇಕಾನಂದರಿಗೆ ಗುರು ಉಪದೇಶ ಮಾಡಿದವರೆ ರಾಮಕೃಷ್ಣ ಪರಮಹಂಸರು. ಅದರಂತೆ ಗೋವಿಂದ ಭಟ್ಟರು ಹಾಗೂ ಶಿಶುವಿನಹಾಳ ಶರೀಫರ ಅಧ್ಯಾತ್ಮ ಸಾಧನೆಗೆ ಕಾರಣೀಕರ್ತರಾಗಿದ್ದಾರೆ. ಅವರ ತತ್ವಾದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ಬದುಕಬೇಕು ಎಂದರು.

ಆಧ್ಯಾತ್ಮಿಕ ಅನ್ವೇಷಕ ಹಾಗೂ ಬರಹಗಾರ ಮಹಮದ್ ರಫೀಕ್ ತಮ್ಮ ಜೀವನದ ಮಾರ್ಗದರ್ಶಕರಾದ ಗುರುಗಳ ಕುರಿತು ಮಾತನಾಡಿದರು. ಗದುಗಿನ ಶ್ರೀ ಜಗದ್ಗುರು ಶಿವಾನಂದ ಬ್ರಹ್ಮಮಠದ ಪರಮ ಪೂಜ್ಯ ಶ್ರೀ ಸದಾಶಿವಾನಂದ ಮಹಾಸ್ವಾಮಿಗಳು, ಅಳವಂಡಿಶ್ರೀ ಸಿದ್ಧೇಶ್ವರ ಮಠದ ಶ್ರೀ ಯೋಗರ್ಷಿ ಸಿದ್ದವೀರ ಸ್ವಾಮೀಜಿಗಳು ಆಶೀರ್ವಚನ ನೀಡಿದರು. ಕುಂದಗೋಳ ಕಲ್ಯಾಣಪುರ ಮಠದ ಶ್ರೀ ಬಸವಣ್ಣಜ್ಜನವರು, ಕಮಡೊಳ್ಳಿ ಗ್ರಾಮದ ವಿರಕ್ತಮಠದ ಶ್ರೀ ರಾಚೋಟೇಶ್ವರ ದೇವರು ಸಾನ್ನಿಧ್ಯ ವಹಿಸಿದ್ದರು. ಜಿಪಂ ಮಾಜಿ ಸದಸ್ಯ ಹಾಗೂ ದೇವಸ್ಥಾನದ ಕಮಿಟಿ ಅಧ್ಯಕ್ಷ ವೆಂಕನಗೌಡ ಹಿರೇಗೌಡ್ರ, ಕಮಿಟಿಯ ಸದಸ್ಯ ವಿರೂಪಾಕ್ಷಗೌಡ ರಂಗನಗೌಡ್ರ , ಗ್ರಾಮಸ್ಥರು ಹಾಗೂ ವಿವಿಧ ಗ್ರಾಮಗಳಿಂದ ಆಗಮಿಸಿದ ಜನರು ಪಾದಯಾತ್ರೆಯಲ್ಲಿ ಪಾಲ್ಗೊಂಡಿದ್ದರು.