ಹೊಸಕೋಟೆಯ ಬೆಸ್ಕಾಂ ವಿದ್ಯುತ್ ಪ್ರಸರಣ ಘಟಕದ ಬಳಿ 100 ಕೋಟಿ ರೂ.ವೆಚ್ಚದ ವಿದ್ಯುತ್ ಕೇಬಲಿಂಗ್ ಕಾಮಗಾರಿಗೆ ಶಾಸಕ ಶರತ್ ಬಚ್ಚೇಗೌಡ ಭೂಮಿ ಪೂಜೆ ನೆರವೇರಿಸಿದರು.ಯೋಜನಾ ಪ್ರಾಧಿಕಾರದ ಅಧ್ಯಕ್ಷ ಕೇಶವ್‌ಮೂರ್ತಿ, ನಿರ್ದೇಶಕ ಸುಬ್ಬರಾಜ್, ಕೊರಳೂರು ಸುರೇಶ್, ನಗರಸಭೆ ಸದಸ್ಯ ಗೌತಮ್, ಮುಖಂಡರಾದ ಬಿ.ವಿ.ಬೈರೇಗೌಡ, ಟಿ.ಎಸ್ ರಾಜಶೇಖರ್ ಮತ್ತಿತರರಿದ್ದರು. 
ಜಿಲ್ಲೆ

ಭೂಗತ ವಿದ್ಯುತ್ ಕೇಬಲಿಂಗ್

ಬೆಂಗಳೂರು ಗ್ರಾಮಾಂತರ ಡೆಸ್ಕ್

ಶಾಸಕ ಶರತ್‌ಬಚ್ಚೇಗೌಡರಿಂದ ಭೂಮಿಪೂಜೆ-100 ಕೋಟಿ ರೂ.ವೆಚ್ಚದ ಯೋಜನೆ

ಹೊಸಕೋಟೆ: ಮುಂದಿನ 20 ವರ್ಷಗಳ ಅಭಿವೃದ್ಧಿ ದೃಷ್ಟಿಯಲ್ಲಿ 100 ಕೋಟಿ ರೂ.ವೆಚ್ಚದಲ್ಲಿ 216 ಕಿ.ಮೀ 67 ಮೆಗಾವಾಟ್ ಪ್ರಸರಣ ಸಾಮರ್ಥ್ಯದ ಭೂಗತ ಕೇಬಲಿಂಗ್ ಅಳವಡಿಕೆ ಕಾಮಗಾರಿಗೆ ಚಾಲನೆ ನೀಡಲಾಗಿದ್ದು, ಇದು ರಾಜ್ಯದಲ್ಲಿ ಬೆಂಗಳೂರು ಹೊರತುಪಡಿಸಿ ರಾಜ್ಯದಲ್ಲೇ ತಾಲೂಕಿನಲ್ಲಿ ಮೊದಲ ಕಾಮಗಾರಿಯಾಗಿದೆ ಎಂದು ಶಾಸಕ ಶರತ್‌ಬಚ್ಚೇಗೌಡ ಹೇಳಿದರು.

ನಗರದ ಬೆಸ್ಕಾಂ ವಿದ್ಯುತ್ ಪ್ರಸರಣ ಕೇಂದ್ರದಲ್ಲಿ ವಿದ್ಯುತ್ ಕೇಬಲಿಂಗ್ ಕಾಮಗಾರಿಗೆ ಶುಕ್ರವಾರ ಭೂಮಿ ಪೂಜೆ ನೆರವೇರಿಸಿ ಮಾತನಾಡಿದರು.

ನಗರದಲ್ಲಿ 30 ಮೆಗಾವಾಟ್ ವಿದ್ಯುತ್ ಪ್ರಸರಣ ವ್ಯವಸ್ಥೆ ಇದ್ದು, ಸುಮಾರು 35 ರಿಂದ 37 ಮೆಗಾವಾಟ್ ವಿದ್ಯುತ್ ಪ್ರಸರಣ ಮಾಡಲಾಗುತ್ತಿದೆ, ಒತ್ತಡದಲ್ಲಿ ಕೆಲವು ಸಂದರ್ಭದಲ್ಲಿ ವಿದ್ಯುತ್ ವ್ಯತ್ಯಯ ಕಂಡು ಬರುವುದು ಸಾಮಾನ್ಯವಾಗಿದೆ. ಆದ್ದರಿಂದ ಇದನ್ನು ಸರಿಪಡಿಸಲು ಇಂಧನ ಸಚಿವರಲ್ಲಿ ಕಳೆದ ವರ್ಷ ಮನವಿ ಸಲ್ಲಿಸಲಾಗಿತ್ತು. ಸಂಪೂರ್ಣ ಡಿಪಿಆರ್ ಸಿದ್ಧಪಡಿಸಿ ಸಂಪುಟದಲ್ಲಿ ಮಂಜೂರಾತಿ ಪಡೆದು ಟೆಂಡರ್ ಪ್ರಕ್ರಿಯೆ ಮುಗಿಸಿ ಕಾಮಗಾರಿಗೆ ಇಂದು ಚಾಲನೆ ನೀಡಲಾಗುತ್ತಿದೆ ಎಂದು ಮಾಹಿತಿ ನೀಡಿದರು.

ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳ ದೂರದೃಷ್ಟಿ ಹಾಗೂ ಸಮನ್ವಯತೆ ಇದ್ದಲ್ಲಿ ಇಂತಹ ಉತ್ತಮ ಕೆಲಸಗಳನ್ನು ಮಾಡಲು ಸಾಧ್ಯ ಎಂದು ಅಭಿಪ್ರಾಯಪಟ್ಟರು. ಮುಂದಿನ 20 ವರ್ಷಗಳ ಅಭಿವೃದ್ಧಿ ಗಮನದಲ್ಲಿಟು 67 ಮೆಗಾವಾಟ್ ವಿದ್ಯುತ್ ಸರಬರಾಜು ಮಾಡುವ ಯೋಜನೆಯಾಗಿದ್ದು ಗುಣಮಟ್ಟದ ವಿದ್ಯುತ್ ಪ್ರಸರಣದ ಜತೆ ಸೋರಿಕೆ ತಡೆಯುವುದು, ವಿದ್ಯುತ್ ಅವಘಡಗಳನ್ನು ತಡೆಯಬಹುದಾಗಿದೆ ಎಂದರು. ತಾಲೂಕಿನಲ್ಲಿರುವ 6 ವಿದ್ಯುತ್ ಪ್ರಸರಣಾ ಘಟಕಗಳ ಮೇಲ್ದರ್ಜೆಗೇರಿಸಲು ಕ್ರಮ ಕೈಗೊಳ್ಳಲಾಗಿದ್ದು ಅಭಿವೃದ್ಧಿ ಹೊಂದುತ್ತಿರುವ ತಾಲೂಕಿನ ಜನತೆಗೆ ಉತ್ತಮ ಸವಲತ್ತುಗಳನ್ನು ನೀಡಲು ಇಂತಹ ಕಾಮಗಾರಿಗಳು ಅವಶ್ಯ ಎಂದರು.

ವಿಪಕ್ಷಗಳ ಟೀಕೆ ಸತ್ಯಕ್ಕೆ ದೂರ

ರಾಜ್ಯ ಸರ್ಕಾರದ ಖಜಾನೆ ಖಾಲಿಯಾಗಿದೆ ಎಂದು ವಿಪಕ್ಷ ಟೀಕೆ ಮಾಡುತ್ತಿರುವುದು ಸತ್ಯಕ್ಕೆ ದೂರದ ಮಾತಾಗಿದೆ ಎಂದು ಗುಡುಗಿದ ಶಾಸಕರು, ಕಾಂಗ್ರೆಸ್ ಸರ್ಕಾರ ತಾಲೂಕಿನ ಕೆರೆಗಳಿಗೆ 43 ಎಂಎಲ್ ಡಿ ನೀರು ಹರಿಸುವ ಯೋಜನೆ ಜಾರಿ ಮಾಡಿದೆ, 40 ಕೋಟಿ ರೂ.ವೆಚ್ಚದಲ್ಲಿ ನಿರ್ಮಾಣಗೊಂಡಿರುವ ತಾಯಿ ಮಕ್ಕಳ ಆಸ್ಪತ್ರೆ ಉದ್ಘ್ಗಾಟನೆಗೆ ಸಿದ್ದವಾಗಿದೆ, 40 ಕೋಟಿ ರೂ.ವೆಚ್ಚದಲ್ಲಿ ಮತ್ತೊಂದು ಜಿಲ್ಲಾಸ್ಪತ್ರೆಗೆ ಭೂಮಿ ಪೂಜೆ ನೆರವೇರಿಸಬೇಕಿದೆ ಹೀಗೆ ಇನ್ನು ಹಲವು ಯೋಜನೆಗಳು ತಾಲೂಕಿನಲ್ಲಿ ಸಾಕಾರಗೊಳ್ಳುತ್ತಿವೆ ಎಂದರು.