ಹಿರೀಸಾವೆ: ಪಟ್ಟಣದ ಹೊರ ವಲಯದಲ್ಲಿರುವ ಗಂಗಾಧರ್ ಕ್ರೀಡಾಂಗಣ ಅಗತ್ಯ ಸೌಲಭ್ಯವಿಲ್ಲದೆ ಸೊರಗುತ್ತಿದೆ.
ಶ್ರವಣಬೆಳಗೊಳ ವಿಧಾನಸಭಾ ಕ್ಷೇತ್ರದ ಸರ್ವತೋಮುಖ ಅಭಿವೃದ್ಧಿಗೆ ಶ್ರಮಿಸಿ ಮನೆ ಮಾತಾಗಿದ್ದ ಮಾಜಿ ಶಾಸಕ ಹಿರೀಸಾವೆಯ ದಿ.ಗಂಗಾಧರ್ ಅವರ ಹೆಸರಿನಲ್ಲಿ ಪಟ್ಟಣದ ಹೊರವಲಯದಲ್ಲಿ ಸುಮಾರು 2.10 ಎಕರೆ ಪ್ರದೇಶದಲ್ಲಿ ಕ್ರೀಡಾಂಗಣ ನಿರ್ಮಿಸಲಾಗಿದೆ. ಇದರಿಂದ ಕಳೆದ 7-8 ವರ್ಷಗಳಿಂದ ಹೋಬಳಿ ಮಟ್ಟದ ಕ್ರೀಡಾಕೂಟ ಸೇರಿದಂತೆ ವಿವಿಧ ಕ್ರೀಡೆಗಳು ಹಾಗೂ ಇತರ ಕಾರ್ಯಕ್ರಮಗಳನ್ನು ನಡೆಸಲಾಗುತ್ತಿದೆ. ಉಳಿದಂತೆ ಪ್ರತಿದಿನ ಬೆಳಗ್ಗೆ ವಾಯುವಿಹಾರಕ್ಕೆಂದು ಆಗಮಿಸುವ ಜನತೆಗೆ ಇಲ್ಲಿ ವ್ಯಾಯಾಮ ಮಾಡಲು ಅನುಕೂಲವಾಗಿದೆ.
ಅಲ್ಲದೆ ಶನಿವಾರ, ಭಾನುವಾರ ಹಾಗೂ ರಜೆ ದಿನಗಳಲ್ಲಿ ಯುವಕರು ಸೇರಿ ಮೈದಾನದಲ್ಲಿ ಕ್ರಿಕೆಟ್ ಆಡುವುದನ್ನು ಕಾಣಬಹುದಾಗಿದೆ. ಆದರೆ ಅಗತ್ಯ ಸೌಲಭ್ಯವಿಲ್ಲದೆ ಪಾಳು ಬಿದ್ದಿರುವ ಪರಿಣಾಮ ಸಂಜೆ ನಂತರ ಮದ್ಯ ವ್ಯಸನಿಗಳ ಅಡ್ಡೆಯಾಗಿದ್ದು, ಅನೈತಿಕ ಚಟುವಟಿಕೆಯ ತಾಣವಾಗಿ ಪರಿಣಮಿಸಿದೆ.
ಹೋಬಳಿಯ ಹೊನ್ನೇನಹಳ್ಳಿ ಗ್ರಾಮದ ಶಶಿಕುಮಾರ್ ಅವರ ಪುತ್ರ ಎಚ್.ಎಸ್.ಮೋಹಿತ್ ಭಾರತೀಯ ಕಿರಿಯರ ಹಾಕಿ ತಂಡದಲ್ಲಿ ಗೋಲ್‌ಕೀಪರ್ ಆಗಿ ಪ್ರತಿನಿಧಿಸಿದ್ದು, ಏಷ್ಯಾ ಕಪ್ ಟೂರ್ನಿಯಲ್ಲಿ ಉತ್ತಮ ಗೋಲ್ ಕೀಪರ್ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಇನ್ನು ಸಮೀಪದ ಕಾವಲು ಹೊಸೂರು ಗ್ರಾಮದ ಮೊಮ್ಮಗನೊಬ್ಬ ರಾಷ್ಟ್ರೀಯ ಮಟ್ಟದ ವಾಲಿಬಾಲ್ ಪಂದ್ಯದಲ್ಲಿ ಅವಕಾಶ ಗಿಟ್ಟಿಸಿಕೊಂಡಿರುವುದು ಹಿರೀಸಾವೆ ಹೋಬಳಿಗೆ ಹೆಮ್ಮೆ ತಂದುಕೊಟ್ಟಿದೆ.
ಆದರೆ ಇಂತಹ ಪ್ರತಿಭೆಗಳಿರುವ ಹೋಬಳಿ ಕೇಂದ್ರದಲ್ಲಿನ ಕ್ರೀಡಾಂಗಣವು ಪರಿಪೂರ್ಣವಾದ ಅಭಿವೃದ್ಧಿ ಕಂಡಿಲ್ಲ. ಅನೇಕ ಕ್ರೀಡಾ ಪ್ರತಿಭೆಗಳ ಬದುಕಿಗೆ ಸಹಕಾರಿಯಾಗಬೇಕಿದ್ದ ಮೈದಾನದಲ್ಲಿ ಅಭಿವೃದ್ಧಿ ಮರಿಚಿಕೆಯಾಗಿದೆ ಎಂಬುದು ಸಾರ್ವಜನಿಕರ ಅಸಮಾಧಾನಕ್ಕೆ ಕಾರಣವಾಗಿದೆ.
ಸೌಲಭ್ಯ ಮರೀಚಿಕೆ: ಹಲವು ವರ್ಷಗಳಿಂದ ಜನಪ್ರತಿನಿಧಿಗಳು ನೀಡಿದ ಭರವಸೆಯಂತೆ 45 ರಿಂದ 50 ಲಕ್ಷ ರೂ. ಅಂದಾಜು ವೆಚ್ಚದಲ್ಲಿ ಅಗತ್ಯ ಮೂಲ ಸೌಕರ್ಯಗಳೊಂದಿಗೆ ಸುಸಜ್ಜಿತ ಕ್ರೀಡಾಂಗಣ ನಿರ್ಮಾಣವಾಗಬೇಕಿತ್ತು. ಆದರೆ ರಿಲೇ ಟ್ರ್ಯಾಕ್, ಒಂದು ಬದಿಯಲ್ಲಿ ಗ್ರಿಲ್ಸ್ ಬೇಲಿ ಹಾಗೂ 4 ಹೈಮಾಸ್ಟ್ ಲೈಟ್ ಬಿಟ್ಟರೆ ಮತ್ಯಾವುದೇ ಅಭಿವೃದ್ಧಿ ಕಂಡಿಲ್ಲ ಎಂಬುದು ಕ್ರೀಡಾಸಕ್ತರ ಆರೋಪವಾಗಿದೆ.