ಜಿಲ್ಲೆ

ಜೈಲಿನಲ್ಲಿ ವಿಚಾರಣಾಧೀನ ಕೈದಿ ಬರ್ತಡೇ ಆಚರಣೆ :ಫೋಟೋ ವೈರಲ್

ಮಂಜುನಾಥ.ಕೆ

ಬೆಂಗಳೂರು: ಪರಪ್ಪನ ಅಗ್ರಹಾರದಲ್ಲಿರುವ ವಿಚಾರಣಾಧೀನ ಕೈದಿಯೊಬ್ಬ ಜೈಲಿನಲ್ಲಿ ತನ್ನ ಬೆಂಬಲಿಗರೊಂದಿಗೆ ಕೇಕ್ ಕತ್ತರಿಸಿ ಹುಟ್ಟುಹಬ್ಬ ಆಚರಿಸಿಕೊಂಡಿರುವ ಫೋಟೋ ವೈರಲ್ ಆಗಿದೆ.


ಹೊರಗಡೆಯಿಂದ ಬಂದ ಗೆಳೆಯರು ತಮ್ಮಕೊಲೆಗಾರ ಸ್ನೇಹಿತನಿಗೆ ಹಾರ, ಕೇಕ್ ತೆಗೆದುಕೊಂಡು ಹೋಗಿ ಬರ್ತ ಡೇ ಆಚರಿಸಿದ್ದಾರೆ. ವಿಚಾರಣಾಧೀನ ಕೈದಿಯಾಗಿ ಜೈಲಿನಲ್ಲಿರುವ ಉಮೇಶ್ ಅದ್ಧೂರಿಯಾಗಿ ಬರ್ತ್‌ಡೇ ಆಚರಿಸಿಕೊಂಡಿದ್ದಾನೆ. ಕೇಕ್ ತಿಂದು ಸ್ನೇಹಿತರೊಂದಿಗೆ ಫೋಟೋ ಕ್ಲಿಕ್ಕಿಸಿಕೊಂಡಿದ್ದಾನೆ. ಅಲ್ಲದೆ ಜೈಲು ಅಧಿಕಾರಿಗಳು ಬರ್ತ್‌ಡೇಗೆ ಜೈಲನ್ನೇ ಫೈವ್‌ಸ್ಟಾರ್ ಹೋಟೆಲ್ ರೀತಿಯಲ್ಲಿ ವೇದಿಕೆ ಸಜ್ಜು ಮಾಡಿ ಕೊಟ್ಟಿದ್ದಾರೆ ಎಂಬ ಆರೋಪವೂ ಕೇಳಿ ಬಂದಿದೆ.


ಪೀಣ್ಯ ಠಾಣಾ ವ್ಯಾಪ್ತಿಯಲ್ಲಿ ಆನಂದ್ ಎಂಬುವವನನ್ನು ಕೊಲೆ ಉಮೇಶ್ ಜೈಲು ಸೇರಿದ್ದ. ಇಂಥವನು ಪರಪ್ಪನ ಅಗ್ರಹಾರ ಜೈಲಿನಲ್ಲೇ ಬೆಂಬಲಿಗರೊಂದಿಗೆ ಕೇಕ್ ಕಟ್ ಮಾಡಿ ಹುಟ್ಟುಹಬ್ಬ ಆಚರಿಸಿಕೊಂಡಿರುವುದಕ್ಕೆ ಸಾರ್ವಜನಿಕ ವಲಯದಲ್ಲಿ ಆಕ್ರೋಶ ವ್ಯಕ್ತವಾಗಿದೆ.
ಈ ಹಿಂದೆ ಹಲವು ಬಾರಿ ಪರಪ್ಪನ ಅಗ್ರಹಾರ ಜೈಲಿನ ಮೇಲೆ ಮೇಲಧಿಕಾರಿಗಳು ದಾಳಿ ನಡೆಸಿ ತಪಾಸಣೆ ಮಾಡಿದಾಗ ಕೈದಿಗಳ ಬಳಿ ಮೊಬೈಲ್ ಫೋನ್, ಗಾಂಜಾ ಮತ್ತಿತರ ವಸ್ತುಗಳು ಪತ್ತೆಯಾಗಿದ್ದವು. ಅದಾದ ಬಳಿಕ ಅಲ್ಲಿನ ನಿಯಮಗಳನ್ನು ಬಿಗಿ ಮಾಡಲಾಗಿತ್ತು. ಆದರೂ ಈಗ ಇದೇ ರೀತಿಯ ಘಟನೆಗಳು ಮರುಕಳಿಸುತ್ತಿವೆ. ಮನಪರಿವರ್ತನೆಗೆಂದು ಜೈಲಿಗೆ ಕಳುಹಿಸಿದರೆ, ಅಲ್ಲಿಯೂ ರೌಡಿಗಳು ಹೈಫೈ ಜೀವನ ನಡೆಸಿ ಯಾವುದೇ ಪರಿವರ್ತನೆ ಮಾಡಿಕೊಳ್ಳದೆ ಜೈಲಿನಿಂದ ಬಂದು ಅದೇ ಕೆಲಸಗಳನ್ನು ಮಾಡುತ್ತಾರೆ. ಹೀಗಾಗಿ ಆದಷ್ಟು ಬೇಗ ಸಂಬಂಧ ಪಟ್ಟ ಅಧಿಕಾರಿಗಳು ಈ ಬಗ್ಗೆ ಗಮನ ಹರಿಸಿ ಬಿಗಿ ನಿಯಮಗಳನ್ನು ಮಾಡಬೇಕು ಎಂದು ಕೆಲವರು ಆಗ್ರಹಿಸಿದ್ದಾರೆ.