ಮೈಸೂರು: ಮುಡಾ ಹಗರಣದ ನೆಪದಲ್ಲಿ ಸಿದ್ದರಾಮಯ್ಯ ಅವರ ತೇಜೋವಧೆ ಮಾಡಲಾಗುತ್ತಿದೆ. ಐಟಿ, ಇಡಿ, ಸಿಬಿಐ ಬಳಸಿ ಸಿಎಂ ಸ್ಥಾನದಿಂದ ಕೆಳಗಿಳಿಸುವ ಹುನ್ನಾರ ನಡೆಯುತ್ತಿದೆ ಎಂದು ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಜಾಗೃತ ವೇದಿಕೆಯಿಂದ ಮುಡಾ ಕಚೇರಿ ಮುಂದೆ ಶನಿವಾರ ಧರಣಿ ನಡೆಯಿತು.
ಪೊರಕೆ ಹಿಡಿದು ಘೋಷಣೆಗಳನ್ನು ಕೂಗಿದ ಪ್ರತಿಭಟನಾಕಾರರು, ಮುಖ್ಯಮಂತ್ರಿ ಸಿದ್ದರಾಮಯ್ಯ ಸರ್ಕಾರವನ್ನು ಅಸ್ಥಿರಗೊಳಿಸಲು ಬಿಜೆಪಿ-ಜಾ.ದಳದ ನಾಯಕರು ಹುನ್ನಾರ ನಡೆಸುತ್ತಿದ್ದಾರೆಂದು ಆರೋಪಿಸಿದರು.
ಮುಡಾದಲ್ಲಿ ನಡೆದಿರುವ ಹಗರಣದ ನೆಪದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ವಿನಾಕಾರಣ ತೇಜೋವಧೆ ಮಾಡಲಾಗುತ್ತಿದೆ. ಅಹಿಂದ ನಾಯಕನೊಬ್ಬ ಎರಡನೇ ಬಾರಿ ಮುಖ್ಯಮಂತ್ರಿಯಾಗಿರುವುದನ್ನು ಬಿಜೆಪಿ, ಜೆಡಿಎಸ್‌ಗೆ ಸಹಿಸಲು ಆಗುತ್ತಿಲ್ಲ. ಹೀಗಾಗಿ ಅಸೂಯೆಯಿಂದ ಸಿದ್ದರಾಮಯ್ಯ ವಿರುದ್ಧ ರಾಜಕೀಯ ಕಾರಣಕ್ಕಾಗಿ ಟೀಕೆ ಮಾಡಲಾಗುತ್ತಿದೆ ಎಂದು ದೂರಿದರು.
2021ರಲ್ಲಿ ಮುಡಾದಲ್ಲಿ ಬ್ರಹ್ಮಾಂಡ ಭ್ರಷ್ಟಾಚಾರ ನಡೆದಿದೆ. ಬಿ.ಎಸ್.ಯಡಿಯೂರಪ್ಪ ಮುಖ್ಯಮಂತ್ರಿಗಳಾಗಿದ್ದರು. ಅವರ ಪುತ್ರ ಬಿ.ವೈ.ವಿಜಯೇಂದ್ರ ರಾಜ್ಯ ಬಿಜೆಪಿಯ ಉಪಾಧ್ಯಕ್ಷರಾಗಿದ್ದಾಗ ನಡೆದಿದೆ. ಈ ಭ್ರಷ್ಟಾಚಾರದ ವಿರುದ್ಧ ಬಿಜೆಪಿ ಮತ್ತು ಜೆಡಿಎಸ್ ಧ್ವನಿ ಎತ್ತುತ್ತಲಿಲ್ಲ ಏಕೆ? ಆಗ ಮುಡಾ ಆಯುಕ್ತರಾಗಿದ್ದ ಡಾ.ಡಿ.ಬಿ.ನಟೇಶ್ ಹಾಗೂ ಅವರ ಗುಂಪನ್ನು ಕಟ್ಟಿಕೊಂಡು ಮುಡಾವನ್ನು ಅಧ್ವಾನ ಮಾಡಿದ್ದಾರೆ. ಆ ಸಂದರ್ಭದಲ್ಲಿ ಮುಡಾದಲ್ಲಿ ಭ್ರಷ್ಟಾಚಾರ ನಡೆದಿದೆ ಎಂದು ದೂರಿದರು.
ಸಾಹಿತಿ ಪ್ರೊ.ಕೆ.ಎಸ್.ಭಗವಾನ್, ನಿವೃತ್ತ ಪ್ರಾಧ್ಯಾಪಕ ಮಹೇಶ್‌ಚಂದ್ರಗುರು, ರಂಗಾಯಣ ಮಾಜಿ ನಿರ್ದೇಶಕ ಎಚ್.ಜನಾರ್ಧನ, ಸಮಾಜ ಸೇವಕ ಕೆ.ರಘುರಾಂ, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಬಿ.ಜೆ.ವಿಜಯಕುಮಾರ್, ವೇದಿಕೆ ಅಧ್ಯಕ್ಷ ಕೆ.ಎಸ್.ಶಿವರಾಮು, ದಸಂಸ ಸಂಚಾಲಕರಾದ ಚುಂಚನಹಳ್ಳಿ ಮಲ್ಲೇಶ, ಕಂದಹಳ್ಳಿ ನಾರಾಯಣ್, ಜಿಲ್ಲಾ ಕುಂಬಾರ ಸಂಘದ ಅಧ್ಯಕ್ಷ ಎಚ್.ಎಸ್. ಪ್ರಕಾಶ್, ನಗರ ಕಾಂಗ್ರೆಸ್ ಅಧ್ಯಕ್ಷ ಆರ್. ಮೂರ್ತಿ, ಪ್ರಧಾನ ಕಾರ್ಯದರ್ಶಿ ಎಂ.ಶಿವಣ್ಣ, ವಕ್ತಾರ ಎಸ್. ರಾಜೇಶ್, ಕೆಪಿಸಿಸಿ ಸಂಯೋಜಕ ಎನ್. ಭಾಸ್ಕರ್, ಮಡಿವಾಳರ ಸಂಘದ ಅಧ್ಯಕ್ಷ ರವಿನಂದನ, ಉಪ್ಪಾರ ಸಂಘದ ಜಿಲ್ಲಾ ಅಧ್ಯಕ್ಷ ಯೋಗೇಶ ಉಪ್ಪಾರ್, ವಿಶ್ವಕರ್ಮ ಸಂಘದ ಜಿಲ್ಲಾ ಅಧ್ಯಕ್ಷ ಮೊಗಣ್ಣಾಚಾರ್, ನಗರ ಕಾಂಗ್ರೆಸ್ ಹಿಂದುಳಿದ ವರ್ಗಗಳ ಅಧ್ಯಕ್ಷ ಎನ್. ಆರ್. ನಾಗೇಶ್, ಮುಖಂಡರಾದ ಲೋಕೇಶ, ರಹೀಂ, ಮಹೇಂದ್ರ, ಬಸಪ್ಪ ಬಸವರಾಜು ಇತರರು ಇದ್ದರು.