ಜಿಲ್ಲೆ

‘ಪಿಎಂ ಜನ್ಮನ್’ ಯೋಜನೆ ಅಡಿ ಹಾಡಿ ಜನರಿಗೆ ಸವಲತ್ತು ತಲುಪಿಸಿ

ಮೈಸೂರು: ‘ಪಿಎಂ ಜನ್ಮನ್’ ಬುಡಕಟ್ಟು ಸಮುದಾಯಗಳನ್ನು ಮುಖ್ಯವಾಹಿನಿಗೆ ತರುವ ಪ್ರಮುಖ ಯೋಜನೆಯಾಗಿದ್ದು, ಇದಕ್ಕೆ ನೇಮಕವಾಗಿರುವ ನೋಡಲ್ ಅಧಿಕಾರಿಗಳು ಯೋಜನೆ ಯಶಸ್ಸಿಗೆ ಅಗತ್ಯ ಕ್ರಮವಹಿಸಬೇಕು ಎಂದು ಜಿಲ್ಲಾಧಿಕಾರಿ ಡಾ.ಕೆ.ವಿ.ರಾಜೇಂದ್ರ ಸೂಚಿಸಿದರು.

ಜಿಲ್ಲಾಧಿಕಾರಿ ಕಚೇರಿಯಲ್ಲಿ ಪಿಎಂ ಜನ್ಮನ್ ಯೋಜನೆ ಅನುಷ್ಠಾನ ಸಂಬಂಧ ಸೋಮವಾರ ಆಯೋಜಿಸಿದ್ದ ಸಭೆಯಲ್ಲಿ ಮಾತನಾಡಿದ ಅವರು, ಸುರಕ್ಷಿತ ವಸತಿ, ಶುದ್ಧ ಕುಡಿಯುವ ನೀರು , ಸುಧಾರಿತ ಆರೋಗ್ಯ, ಶಿಕ್ಷಣ, ಪೋಷಣೆ, ರಸ್ತೆ ಮತ್ತು ದೂರಸಂಪರ್ಕ ಜತೆಗೆ ಸುಸ್ಥಿರ ಜೀವನೋಪಾಯಕ್ಕಾಗಿ ಅಗತ್ಯವಿರುವ ಸೌಲಭ್ಯಗಳು ಬುಡಕಟ್ಟು ಸಮುದಾಯದ ಅರ್ಹ ಫಲಾನುಭವಿಗಳಿಗೆ ಸಿಗುವ ಕೆಲಸ ಆಗಬೇಕು. ಈ ನಿಟ್ಟಿನಲ್ಲಿ ಅಧಿಕಾರಿಗಳು ಸಮರ್ಪಕವಾಗಿ ಕೆಲಸ ನಿರ್ವಹಿಸಬೇಕು ಎಂದು ಡಿಸಿ ನಿರ್ದೇಶನ ನೀಡಿದರು.

ಜಿಲ್ಲೆಯಲ್ಲಿ 153 ಹಾಡಿಗಳಲ್ಲಿ ಬುಡಕಟ್ಟು ಸಮುದಾಯದ ಜನ ವಾಸವಿದ್ದಾರೆ. ಜೇನು ಕುರುಬ ಸಮುದಾಯದವರು ಈಗಲೂ ಕಚ್ಚಾ ಮನೆಗಳಲ್ಲಿ ವಾಸವಿದ್ದು, ಅವರಿಗೆ ಪಕ್ಕಾ ಮನೆ ನಿರ್ಮಿಸಿಕೊಡಬೇಕು. ಸೌಲಭ್ಯವಂಚಿತ ಬುಡಕಟ್ಟು ಸಮುದಾಯದ ಅರ್ಹ ಫಲಾನುಭವಿಗಳನ್ನು ಗುರುತಿಸಿ ಸವಲತ್ತು ನೀಡಬೇಕು. 15 ವರ್ಷ ಹಳೆಯ ಮನೆಗಳು ಇದ್ದರೂ ಅಂತಹವರನ್ನು ಗುರುತಿಸಿ ಸೌಲಭ್ಯಗಳನ್ನು ನೀಡಬೇಕು ಎಂದು ಹೇಳಿದರು.

ಪ್ರತಿ ತಾಲೂಕಿನ ತಹಸೀಲ್ದಾರ್‌ಗಳು ಈ ಯೋಜನೆಯಡಿ ಸೌಲಭ್ಯಗಳನ್ನು ನೀಡಲು ಪ್ರತಿದಿನ ಎರಡು ಗಂಟೆ ಕೆಲಸ ನಿರ್ವಹಿಸಬೇಕು. ಯಾವುದೇ ಹಾಡಿಗಳಲ್ಲಿ ಮೂಲ ಸೌಕರ್ಯ ಕೊರತೆಯಾಗದಂತೆ ಕ್ರಮ ವಹಿಸಬೇಕು. ಹಾಡಿಗಳಲ್ಲಿ ಸಭೆ ನಡೆಸಿ ಕುಡಿಯುವ ನೀರು, ಗ್ರಾಮ ಸಡಕ್ ಯೋಜನೆಯಡಿ ರಸ್ತೆ ನಿರ್ಮಾಣ, ಆಧಾರ್ ನೋಂದಣಿ, ಜಾತಿ ಹಾಗೂ ಜನನ ಪ್ರಮಾಣ ಪತ್ರ , ಎಪಿಕ್ ಕಾರ್ಡ್ ಮಾಡಿಸಿಕೊಳ್ಳುವಂತೆ ತಿಳಿಸಬೇಕು ಎಂದು ಹೇಳಿದರು.
ಎಚ್.ಡಿ.ಕೋಟೆ, ಹುಣಸೂರು ಹಾಗೂ ಪಿರಿಯಾಪಟ್ಟಣ ತಾಲೂಕುಗಳ ಹಾಡಿಗಳಿಗೆ ಜಿಲ್ಲಾ ಮಟ್ಟದ ಅಧಿಕಾರಿಗಳು ಭೇಟಿ ನೀಡಿ ಅಗತ್ಯ ಮೂಲ ಸೌಕರ್ಯ ಕಲ್ಪಿಸಲು ಆದ್ಯತೆ ನೀಡಬೇಕು ಎಂದರು.

ಜಿಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕೆ.ಎಂ.ಗಾಯತ್ರಿ, ಅಪರ ಜಿಲ್ಲಾಧಿಕಾರಿ ಆರ್.ಲೋಕನಾಥ್, ಹುಣಸೂರು ಉಪ ವಿಭಾಗಾಧಿಕಾರಿ ಹ್ಯಾರಿಸ್ ಸುಮೈರ್, ಸಮಗ್ರ ಬುಡಕಟ್ಟು ಅಭಿವೃದ್ಧಿ ಯೋಜನೆಯ ಸಮನ್ವಯಾಧಿಕಾರಿ ಎನ್. ಮುನಿರಾಜು ಇತರರಿದ್ದರು.