ಜಿಲ್ಲೆ

ಮತ್ತೆ ನರಬಲಿಗಾಗಿ ಕಾದಿದೆ ಉಂಡಬತ್ತಿ ಕೆರೆ

ಆರ್. ಕೃಷ್ಣ ಮೈಸೂರು

ಮೂವತ್ತೊಂದು ಜನರನ್ನು ಬಲಿ ಪಡೆದಿದ್ದ ನಂಜನಗೂಡು ರಸ್ತೆಯ ಉಂಡತ್ತಿಕೆರೆ ಮತ್ತೆ ನರ ಬಲಿಗೆ ಕಾಯ್ದು ಕುಳಿತಂತಿದೆ..!

ಕೆಲ ವರ್ಷಗಳ ಹಿಂದೆ ಬೀಗರ ಔತಣಕೂಟ ಮುಗಿಸಿ ಬರುತ್ತಿದ್ದ ಟೆಂಪೋ ಸೂಕ್ತ ರಕ್ಷಣಾ ತಡೆಗೋಡೆ ಇಲ್ಲದ ಕೆರೆಗೆ ಉರುಳಿ ಭಾರಿ ಅನಾಹುತ ಸಂಭವಿಸಿ 31 ಜನರನ್ನು ಬಲಿ ಪಡೆದಿತ್ತು. ಬಳಿಕ ಎಚ್ಚೆತ್ತು ಕಬ್ಬಿಣದ ತಡೆಗೋಡೆ ನಿರ್ಮಿಸಲಾಗಿತ್ತು. ಆದರೆ ಈಗ ಕೆರೆ ದಡದಲ್ಲಿರುವ ಹೆದ್ದಾರಿ ಗುಂಡಿ ಬಿದ್ದಿರುವುದಲ್ಲದೇ, ಗಿಡಗಂಟಿಗಳು ಬೆಳೆದು ರಸ್ತೆಗೆ ಚಾಚಿಕೊಂಡಿವೆ. ಇದರಿಂದ ವಾಹನ ಸವಾರರು ತೊಂದರೆ ಅನುಭವಿಸುತ್ತಿದ್ದು, ರಾತ್ರಿ ವೇಳೆ ವಾಹನ ಸಂಚಾರಕ್ಕೆ ಅಡ್ಡಿಯಾಗುತ್ತಿದೆ. ಹೀಗಾಗಿ ಮೈಸೂರು ತಾಲೂಕಿನ ಕಡಕೊಳ ಗ್ರಾಮದ ಬಳಿ ಇರುವ ಉಂಡತ್ತಿಕೆರೆ ಕೆರೆ ಮತ್ತೆ ನರಬಲಿಗಾಗಿ ಕಾಯುತ್ತಿದ್ದು. ಸಂಬಂಧಪಟ್ಟ ಅಧಿಕಾರಿಗಳ ನಿರ್ಲಕ್ಷೃದಿಂದ ಮುಗ್ಧ ಜೀವಗಳನ್ನು ಬಲಿಪಡೆದ ಕೆರೆ ಮತ್ತೊಂದು ದುರಂತ ನಿದರ್ಶನಕ್ಕೆ ನಾಂದಿಯಾಗಲಿದೆ.

ರಾಷ್ಟ್ರೀಯ ಹೆದ್ದಾರಿ-766ರಲ್ಲಿ ಬರುವ ಕಡಕೊಳ ಸಮೀಪದ ಉಂಡುಬತ್ತಿಕೆರೆ ವರುಣಾ ನಾಲೆಗೆ ನೀರು ಬಿಟ್ಟಿರುವುದಲ್ಲದೇ ಉತ್ತಮ ಮಳೆಯಿಂದಾಗಿ ಕೆರೆ ತುಂಬಿಕೊಂಡಿದೆ. ಕೆರೆಯ ಮುಂಭಾಗದ ರಸ್ತೆಯಲ್ಲಿ ಹಳ್ಳ ಇದ್ದು, ಕೆರೆಯ ಎರಡು ಬದಿಯಲ್ಲಿ ಹಾಕಿರುವ ತಡೆಗೋಡೆಯನ್ನು ದಾಟಿ ಅಪಾರ ಪ್ರಮಾಣದ ಪೊದೆ, ಗಿಡಗಂಟಿಗಳು ತಡೆಗೋಡೆಗಳನ್ನು ಮರೆಮಾಚಿವೆ. ಚಾಮರಾಜನಗರ, ಗುಂಡ್ಲುಪೇಟೆ ಅಲ್ಲದೇ ನೆರೆಯ ಕೇರಳ, ತಮಿಳುನಾಡಿಗೆ ಪ್ರತಿನಿತ್ಯ ಸಾವಿರಾರು ವಾಹನಗಳು ಸಂಚರಿಸುತ್ತದೆ. ಗಿಡಗಂಟಿಗಳು ಚಾಚಿಕೊಂಡಿರುವುದರಿಂದ ರಸ್ತೆ ಬದಿ ಕಾಣುವುದೇ ಇಲ್ಲ. ವಾಹನ ಸವಾರರಿಗೆ ಅದರಲ್ಲೂ ದ್ವಿಚಕ್ರ ವಾಹನ ಸವಾರರಿಗೆ ಪಕ್ಕದಲ್ಲಿ ಭರ್ತಿಯಾದ ಕೆರೆ ಇದೆ ಎಂಬುದು ಗೋಚರಿಸುವುದಿಲ್ಲ. ಅಲ್ಲದೇ ಕೆರೆ ದಂಡೆಯಲ್ಲಿ ಯಾವುದೇ ರೀತಿಯ ಸೂಚನಾ ಫಲಕಗಳು ಕೂಡ ಇಲ್ಲ. ರಾತ್ರಿಯ ವೇಳೆ ಭಾರಿ ವಾಹನಗಳು ಸಂಚರಿಸುತ್ತಿದ್ದು, ಪ್ರಖರ ಹೆಡ್‌ಲೈಟ್‌ಗಳಿಂದ ಎದುರು ಬರುವ ವಾಹನ ಸವಾರರಿಗೆ ಮುಂದಿನ ರಸ್ತೆ ಕಾಣುವುದೇ ಇಲ್ಲ. ಇದರಿಂದ ಏನಾದರೂ ಅವಘಡ ನಡೆದರೆ ನೇರವಾಗಿ ವಾಹನಗಳು ಕೆರೆಗೆ ಬೀಳುವ ಸಂಭವವೇ ಹೆಚ್ಚು.

ಈ ಹಿಂದೆ ಕೆರೆಗೆ ಟೆಂಪೋ ಉರುಳಿ ಜನರನ್ನು ಬಲಿ ಪಡೆದ ಬಳಿಕ ಕಡಕೊಳ ಗ್ರಾಮಸ್ಥರು ರಸ್ತೆ ವಿಸ್ತರಣೆ ಮತ್ತು ತಡೆಗೋಡೆ ನಿರ್ಮಾಣಕ್ಕೆ ಆಗ್ರಹಿಸಿ ಪ್ರತಿಭಟನೆ ನಡೆದಾಗ ಪರಿಸ್ಥಿತಿ ವಿಕೋಪಕ್ಕೆ ತಿರುಗಿ ಲಾಠಿ ಚಾರ್ಜ್ ನಡೆದು ಅಶ್ರುವಾಯು ಪ್ರಯೋಗಿಸಲಾಗಿತ್ತು. ಈ ವೇಳೆ ವಿದ್ಯಾರ್ಥಿಗಳು, ಕೂಲಿಕಾರ್ಮಿಕರು, ಅಮಾಯಕರು ಸೇರಿದಂತೆ 10 ಜನರನ್ನು ಬಂಧಿಸಿ 75ಕ್ಕೂ ಹೆಚ್ಚಿನ ಜನರ ಮೇಲೆ ಪ್ರಕರಣ ದಾಖಲಾಗಿ ನ್ಯಾಯಾಲಯಕ್ಕೆ ಅಲೆಯುವಂತಾಗಿತ್ತು. ಸಂಘ, ಸಂಸ್ಥೆಗಳ ಆಗ್ರಹಕ್ಕೆ ಮಣಿದ ಸರ್ಕಾರ ವಾಸ್ತವ ಅರಿತು 7 ವರ್ಷಗಳ ನಂತರ ಪ್ರಕರಣವನ್ನು ಹಿಂಪಡೆದಿತ್ತು.

ಇದಾದ ನಂತರ ರಸ್ತೆ ವಿಸ್ತರಣೆಗೊಂಡು ಕೆರೆಯ ಬದಿಯಲ್ಲಿ ತಡೆಗೋಡೆಗಳನ್ನು ನಿರ್ಮಾಣ ಮಾಡಲಾಗಿತ್ತು. ಆದರೆ ಸೂಕ್ತ ನಿರ್ವಹಣೆ ಇಲ್ಲದೆ ರಾಷ್ಟ್ರೀಯ ಹೆದ್ದಾರಿ ಅಧಿಕಾರಿಗಳ ನಿರ್ಲಕ್ಷೃದಿಂದ ಕೆರೆ ಕಾಣದಂತೆ ಗಿಡಗಂಟಿಗಳು ಬೆಳೆದು ಅಪಘಾತಗಳಿಗೆ ಆಹ್ವಾನವನ್ನು ನೀಡುತ್ತಿದೆ. ಇದು ಅವರ ಕಾರ್ಯವೈಖರಿಗೆ ಹಿಡಿದ ಕೈಗನ್ನಡಿಯಾಗಿದೆ.

--------

ಬಾಕ್ಸ್..

ಅವ್ಯವಸ್ಥೆ ಕಣ್ಣಿಗೆ ಕಾಣದಿರುವುದು ಆಶ್ಚರ್ಯ

ಕೂಗಳತೆ ದೂರದಲ್ಲೇ ಟೋಲ್ ಸಂಗ್ರಹಿಸುವ ಕೇಂದ್ರವಿದ್ದು ದಿನಂಪ್ರತಿ ಲಕ್ಷಾಂತರ ರೂ. ಟೋಲ್ ಸಂಗ್ರಹಣೆ ಕೂಡ ನಡೆಯುತ್ತಿದೆ. ಪ್ರತಿದಿನ ಹಲವಾರು ಹಿರಿಯ ಅಧಿಕಾರಿಗಳು ಹಾಗೂ ಹಲವಾರು ಜನಪ್ರತಿನಿಧಿಗಳು ಈ ರಸ್ತೆಯಲ್ಲಿ ಸಂಚರಿಸುತ್ತಿದ್ದರೂ ಈ ಅವ್ಯವಸ್ಥೆ ಅವರ ಕಣ್ಣಿಗೆ ಕಾಣದಿರುವುದು ಆಶ್ಚರ್ಯವೇ ಸರಿ.

-------

ಬಾಕ್ಸ್...

ದೇಶಾದ್ಯಂತ ಸುದ್ದಿಯಾಗಿತ್ತು

2010ರ ಡಿಸೆಂಬರ್ 14ರಂದು ಬೀಗರ ಔತಣಕೂಟ ಮುಗಿಸಿ ನಂಜನಗೂಡಿನಿಂದ ಪಾಂಡವಪುರಕ್ಕೆ ಪ್ರಯಾಣಿಕರನ್ನು ತುಂಬಿಕೊಂಡ ಬಂದ ಮಿನಿ ಟೆಂಪೋ ಅಪಘಾತದಿಂದ ಕೆರೆಗೆ ಉರುಳಿತ್ತು. ಇದರಿಂದ 31 ಜನ ಜೀವಂತ ಸಮಾಧಿಯಾಗಿ ಐದು ಜನ ಗಾಯಗೊಂಡು ದೇಶಾದ್ಯಂತ ಸುದ್ದಿಯಾಗಿದ್ದನ್ನು ಕಾಣಬಹುದು. ಕೆರೆ ಭರ್ತಿಯಾದಾಗ ಇಂತಹ ಘಟನೆ ಸಾಮಾನ್ಯ ಎನ್ನುವ ಮಾತುಗಳು ಜನಜನಿತವಾಗಿದ್ದು, ಈ ಬಾರಿಯೂ ಕೆರೆ ಭರ್ತಿಯಾಗಿರುವುದರಿಂದ ಜನರಲ್ಲಿ ಆತಂಕ ತುಂಬಿದೆ. ಆದ್ದರಿಂದ ಅಧಿಕಾರಿಗಳು ಎಚ್ಚೆತ್ತು ರಸ್ತೆಗೆ ಚಾಚಿರುವ ಗಿಡಗಂಟಿ ತೆರವುಗೊಳಿಸಿ ಗುಂಡಿ ಮುಚ್ಚಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.

=========

ಕೋಟ್...

ಜನರ ಜೀವದ ಜತೆ ಚೆಲ್ಲಾಟವಾಡದೆ ದುರಂತವಾಗುವ ಮುನ್ನ ಕೂಡಲೇ ಅಧಿಕಾರಿಗಳು ಎಚ್ಚೆತ್ತು ಗಿಡಗಂಟಿಗಳನ್ನು ತೆರವುಗೊಳಿಸಿ ಸೂಚನಾ ಫಲಕಗಳನ್ನು ಅಳವಡಿಸಿ ತಡೆಗೊಡೆಯನ್ನು ಸುಸ್ಥಿತಿಯಲ್ಲಿ ನಿರ್ವಹಣೆ ಮಾಡಬೇಕು. ತಪ್ಪಿದಲ್ಲಿ ಕೆರೆ ಮುಂದೆ ಕಲ್ಪಿತ ಶವ ಪ್ರದರ್ಶನದ ಮೂಲಕ ಪ್ರತಿಭಟಿಸಬೇಕಾಗುತ್ತದೆ.

ಕಡಕೊಳ ಕುಮಾರಸ್ವಾಮಿ

ಸಾಮಾಜಿಕ ಹೋರಾಟಗಾರ