ಭಾಗ್ಯವಾನ್ ಸನಿಲ್ ಮೂಲ್ಕಿ
ತಾಲೂಕು ಕೇಂದ್ರವಾಗಿ ಅಭಿವೃದ್ಧಿಗೊಳ್ಳುತ್ತಿರುವ ಮೂಲ್ಕಿಯ ಗ್ರಂಥಾಲಯಕ್ಕೆ ತೆರಳಲು ಎರಡು ಮಹಡಿ ಹತ್ತುವ ಅನಿವಾರ್ಯತೆ ಇದ್ದು, ವಯೋವೃದ್ಧರು ಮಹಡಿ ಏರಲಾಗದೆ ಪರದಾಟುವ ಸ್ಥಿತಿ ನಿರ್ಮಾಣವಾಗಿದೆ. ಇದರಿಂದಾಗಿ ಈ ಭಾಗದ ಹಿರಿಯ ನಾಗರಿಕರಿಗೆ ಗ್ರಂಥಾಲಯ ವ್ಯವಸ್ಥೆ ಊಟಕ್ಕಿಲ್ಲದ ಉಪ್ಪಿನಕಾಯಿಯಂತಾಗಿದೆ.
ಮೂಲ್ಕಿ ಬಿಲ್ಲವ ಸಮಾಜ ಸೇವಾ ಸಂಘ ಕಟ್ಟಡದಲ್ಲಿ 50 ವರ್ಷಗಳಿಂದ ಕಾರ್ಯಾಚರಿಸುತ್ತಿರುವ ಜಿಲ್ಲಾ ಕೇಂದ್ರ ಗ್ರಂಥಾಲಯದ ಮೂಲ್ಕಿ ಶಾಖೆಗೆ ತೆರಳಲು ಎರಡು ಮಹಡಿ ಹತ್ತ ಬೇಕಾಗಿದೆ. ಅತಿ ಹೆಚ್ಚು ಓದುವ ಹವ್ಯಾಸ ಇರುವ ಪುಸ್ತಕ ಪ್ರಿಯ ಹಿರಿಯ ನಾಗರಿಕರಿಗೆ ಓದುವ ಹವ್ಯಾಸವಿದ್ದರೂ ಸೌಕರ್ಯದಿಂದ ವಂಚಿಸಲಾಗಿದೆ.
ಜಾಗ ಮಂಜೂರಾದರೂ ಪ್ರಯೋಜನ ಶೂನ್ಯ
ಸಾರ್ವಜನಿಕ ಬೇಡಿಕೆಗೆ ಸ್ಪಂದಿಸಿ 4 ವರ್ಷಗಳ ಹಿಂದೆ ಮೂಲ್ಕಿ ನಗರಾಡಳಿತವು ಮೂಲ್ಕಿ ಗಾಂಧಿ ಮೈದಾನ ಬಳಿ ಕಾರ್ನಾಡು ಗ್ರಾಮದ ಸರ್ವೇ ನಂ.: 571ಎ 1ರಲ್ಲಿ 10 ಸೆಂಟ್ಸ್ ಜಾಗ ನೀಡಲು ಅನುಮೋದನೆ ನೀಡಿತ್ತು. ಅದರಂತೆ ಕಂದಾಯ ಇಲಾಖೆಯು ಮೂಲ್ಕಿ ತಾಲೂಕು ಆಡಳಿತ ಕಚೇರಿ ಸಮೀಪ ಖಾಲಿ ಇದ್ದ 10 ಸೆಂಟ್ಸ್ ಜಾಗವನ್ನು ಗ್ರಂಥಾಲಯ ಕಟ್ಟಡಕ್ಕಾಗಿ ಮೀಸಲಿರಿಸಿ ಆದೇಶ ಹೊರಡಿಸಿತ್ತು. ಆದರೆ ತಾಂತ್ರಿಕ ಕಾರಣಗಳಿಂದ ಕಟ್ಟಡ ನಿರ್ಮಾಣವಾಗದೆ ಹಿರಿಯ ನಾಗರಿಕರು ಸಮಸ್ಯೆಗೀಡಾಗಿದ್ದಾರೆ.
ಬಿಲ್ಲವ ಸಂಘ ನಿರಂತರ ಪ್ರೋತ್ಸಾಹ
ಸಾರ್ವಜನಿಕ ಗ್ರಂಥಾಲಯ ಸ್ಥಾಪನೆಗಾಗಿ ಜಾಗ ಹುಡುಕುತ್ತಿದ್ದ ಸಂದರ್ಭ ಯಾವುದೇ ಸಾರ್ವಜನಿಕ ಕಾರ್ಯಕ್ರಮಕ್ಕೆ ಉಚಿತವಾಗಿ ಸ್ಥಳ ನೀಡಿ ಸಹಕರಿಸುತ್ತಿದ್ದ ಮೂಲ್ಕಿ ಬಿಲ್ಲವ ಸಮಾಜ ಸೇವಾ ಸಂಘವು 50 ವರ್ಷಗಳ ಹಿಂದೆ ತನ್ನ ಕಟ್ಟಡದ ನೆಲ ಅಂತಸ್ತಿನಲ್ಲಿ ಅವಶ್ಯವಿರುವಷ್ಟು ಸಭಾಂಗಣವೊಂದನ್ನು ಉಚಿತವಾಗಿ ನೀಡಿ ಸಹಕರಿಸಿತ್ತು. ಬಳಿಕ ಓದುಗರ ಸಂಖ್ಯೆ ಹೆಚ್ಚಾದಂತೆ ಹೆಚ್ಚುವರಿ ಸ್ಥಳದ ಅವಶ್ಯಕತೆ ಎದುರಾದಾಗ ಗ್ರಂಥಾಲಯವನ್ನು ಎರಡನೇ ಮಹಡಿಗೆ ಸ್ಥಳಾಂತರಿಸಿ ನಿರಂತರವಾಗಿ ಓದಿಗೆ ಪ್ರೋತ್ಸಾಹ ನೀಡಿತ್ತು. ಗ್ರಂಥಾಲಯ ಈಗಲೂ ಅಲ್ಲಿಯೇ ಉಚಿತವಾಗಿ ಕಾರ್ಯಾಚರಿಸುತ್ತಿದೆ.
ಬರೋಬ್ಬರಿ 3,800ಕ್ಕೂ ಅಧಿಕ ಸದಸ್ಯತ್ವ!
ಮೂಲ್ಕಿ ಸಾರ್ವಜನಿಕ ಗ್ರಂಥಾಲಯದಲ್ಲಿ ಬರೋಬ್ಬರಿ 3,800ಕ್ಕೂ ಅಧಿಕ ಮಂದಿ ಸದಸ್ಯತ್ವ ಪಡೆದವರಿದ್ದಾರೆ. ಕನ್ನಡ, ತುಳು, ಇಂಗ್ಲಿಷ್, ಹಿಂದಿ, ತಮಿಳು, ಮಲೆಯಾಳಂ, ತೆಲುಗು, ಉರ್ದು ಸಹಿತ ಹಲವು ಭಾಷೆಗಳ ಪುಸ್ತಕಗಳೂ ಇಲ್ಲಿವೆ. 50 ಸಾವಿರಕ್ಕೂ ಅಧಿಕ ಪುಸ್ತಕಗಳು, ದಿನ ಪತ್ರಿಕೆ- ಮಾಸಪತ್ರಿಕೆಗಳು, ವಿದ್ಯಾರ್ಜನೆಗೆ ಪೂರಕ ಪುಸ್ತಕಗಳು, ಐಎಎಸ್, ಐಪಿಎಸ್, ಎಫ್‌ಡಿಎ, ಕೆಎಎಸ್, ರೈಲ್ವೆ, ಆರ್‌ಬಿಐ, ಪೊಲೀಸ್, ಪಿಡಿಒ ಸಹಿತ ಎಲ್ಲ ಸ್ಪರ್ಧಾತ್ಮಕ ಪರೀಕ್ಷಾ ಪುಸ್ತಕಗಳು ಹಾಗೂ ದಾನಿಗಳು ನೀಡಿದ ಪುಸ್ತಕಗಳ ಭಂಡಾರವೇ ಇಲ್ಲಿದೆ.
50ಕ್ಕಿಳಿದ ಓದುಗರ ಸಂಖ್ಯೆ
ಹಿಂದೆ ಇಲ್ಲಿ ದಿನ ಒಂದರಲ್ಲಿ 300ಕ್ಕೂ ಅಧಿಕ ಪುಸ್ತಕ ಪ್ರಿಯರು ಆಗಮಿಸುತ್ತಿದ್ದರು. ಆದರೆ 2ನೇ ಮಹಡಿ ಹತ್ತಲು ಕಷ್ಟಪಡುವ ಕಾರಣ ಓದುಗರ ಸಂಖ್ಯೆ ತೀರಾ ವಿರಳವಾಗಿದೆ. ಸದ್ಯ ದಿನಕ್ಕೆ 50ಕ್ಕೂ ಅಧಿಕ ಓದುಗರಷ್ಟೇ ಭೇಟಿ ನೀಡುತ್ತಿದ್ದಾರೆ. ಅವರೆಲ್ಲರೂ ನೂತನ ಕಟ್ಟಡ ನಿರ್ಮಾಣದ ಬೇಡಿಕೆ ಇಡುತ್ತಲೇ ಬಂದಿದ್ದಾರೆ. ಮಂಗಳೂರು ನಗರದಲ್ಲಿ ಹವಾ ನಿಯಂತ್ರಿತ ಗ್ರಂಥಾಲಯ ನೀಡಿದ ಸರ್ಕಾರ ಮೂಲ್ಕಿಯಲ್ಲಿ ಒಂದು ಪೂರ್ಣ ಸಜ್ಜಿತ ಗ್ರಂಥಾಲಯ ನಿರ್ಮಿಸಬೇಕು ಎನ್ನುವುದು ಸಾರ್ವಜನಿಕರ ಆಗ್ರಹವಾಗಿದೆ.
ಮೂಲ್ಕಿ ಸಾರ್ವಜನಿಕ ಗ್ರಂಥಾಲಯದ ಸಮಸ್ಯೆ ಬಗ್ಗೆ ತಿಳಿದಿದೆ. ತಾಂತ್ರಿಕ ಕಾರಣಗಳಿಂದ ಹಿನ್ನಡೆಯಾಗಿದೆ. ಸರ್ಕಾರ ಮೀಸಲಿರಿಸಿದ ಜಾಗದಲ್ಲಿ ಶೀಘ್ರ ಗ್ರಂಥಾಲಯ ಕಟ್ಟಡ ನಿರ್ಮಾಣವಾಗಬೇಕು ಎನ್ನುವುದು ಮೂಲ್ಕಿಯ ನಗರದ ಹಿರಿಯ ನಾಗರಿಕರ ಬಹುದಿನದ ಬೇಡಿಕೆಯಾಗಿದೆ. ಗ್ರಂಥಾಲಯಕ್ಕಾಗಿ ಕಾದಿರಿಸಿದ ಜಾಗದಲ್ಲಿಯೇ ಸುಸಜ್ಜಿತ ಕಟ್ಟಡ ನಿರ್ಮಾಣಗೊಳಿಸಲು ಕ್ರಮ ಕೈಗೊಳ್ಳಲಾಗುವುದು. ಉಮಾನಾಥ ಎ.ಕೋಟ್ಯಾನ್ ಮೂಲ್ಕಿ-ಮೂಡುಬಿದಿರೆ ಶಾಸಕರು https://www.vijayavani.net/%e0%b2%b6%e0%b3%81%e0%b2%ad%e0%b2%a8%e0%b3%81%e0%b2%a1%e0%b2%bf-laying-foundation-stone-for-vedapatha-school-building https://www.vijayavani.net/dr-sujata-dineshs-ph-d