ಜಿಲ್ಲೆ

ನಡೆಯದ ನಗರದ ತಮಿಳು ಕಾಲನಿ ಸರ್ವೇ: ಅಧಿಕಾರಿಗಳು, ನಿವಾಸಿಗಳ ನಡುವೆ ಜಟಾಪಟಿ

ಕೆ.ಎನ್.ರಾಘವೇಂದ್ರ

ಮಂಡ್ಯ: ವಿವಾದದ ಕೇಂದ್ರ ಬಿಂದುವಾಗಿರುವ ನಗರದ ಮಿಮ್ಸ್ ಪಕ್ಕದ ತಮಿಳುಕಾಲನಿ ಜಾಗದ ಸರ್ವೇಗೆ ಸ್ಥಳೀಯ ನಿವಾಸಿಗಳು ಅಡ್ಡಿಪಡಿಸಿದ ಹಿನ್ನೆಲೆಯಲ್ಲಿ ಅಧಿಕಾರಿಗಳು ಹಿಂದಿರುಗಿದ್ದಾರೆ.

ತಮಿಳು ಕಾಲನಿ ಜಾಗವನ್ನು ತೆರವುಗೊಳಿಸುವಂತೆ ಹೈಕೋರ್ಟ್ ಈಗಾಗಲೇ ಆದೇಶ ಹೊರಡಿಸಿದೆ. ಒಂದು ವೇಳೆ ಆದೇಶ ಪಾಲನೆಯಾಗದಿದ್ದರೆ ಜಿಲ್ಲಾಧಿಕಾರಿ ನ್ಯಾಯಾಂಗ ನಿಂದನೆಗೆ ಗುರಿಯಾಗಲಿದ್ದಾರೆ. ಆ ಹಿನ್ನೆಲೆಯಲ್ಲಿ ತಹಸೀಲ್ದಾರ್ ಶಿವಕುಮಾರ ಬಿರಾದಾರ್ ಅವರ ನೇತೃತ್ವದಲ್ಲಿ ಕೊಳಗೇರಿ ಅಭಿವೃದ್ಧಿ ಮಂಡಳಿ ಅಧಿಕಾರಿಗಳು, ಕಂದಾಯ ಇಲಾಖೆ ಸಿಬ್ಬಂದಿ ಸ್ಥಳಕ್ಕೆ ತೆರಳಿ ಸರ್ವೆ ಕಾರ್ಯಕ್ಕೆ ಮುಂದಾದರು. ಈ ವೇಳೆ ಅಧಿಕಾರಿಗಳನ್ನು ಕಂಡ ಕೂಡಲೇ ನಿವಾಸಿಗಳು ಗುಂಪುಗೂಡಿ ಸರ್ವೇ ಕಾರ್ಯ ನಡೆಸದಂತೆ ಪಟ್ಟು ಹಿಡಿದರು. ತಹಸೀಲ್ದಾರ್ ನಿವಾಸಿಗಳ ಮನವೊಲಿಸುವ ಪ್ರಯತ್ನ ನಡೆಸಿದರೂ ಸಫಲವಾಗಲಿಲ್ಲ. ಕೊನೆಗೆ ಅಪರ ಜಿಲ್ಲಾಧಿಕಾರಿ ಡಾ. ಎಚ್.ಎಲ್.ನಾಗರಾಜು ಅವರಿಗೆ ದೂರವಾಣಿ ಕರೆ ಮಾಡಿ ವಿಷಯ ಮುಟ್ಟಿಸಿದರು.

ಸ್ಥಳಕ್ಕೆ ಆಗಮಿಸಿದ ಡಾ.ಎಚ್.ಎಲ್.ನಾಗರಾಜು, ನ್ಯಾಯಾಲಯದ ಸೂಚನೆಯಂತೆ ಜಾಗ ತೆರವುಗೊಳಿಸುವುದು ಅವಶ್ಯಕವಾಗಿದೆ. ಸ್ಥಳೀಯ ನಿವಾಸಿಗಳಿಗೆ ಈಗಾಗಲೇ ಕೆರೆಯಂಗಳದಲ್ಲಿ ಮನೆಗಳನ್ನು ನಿರ್ಮಿಸಿಕೊಡಲಾಗಿದೆ. ಸೌಲಭ್ಯಗಳನ್ನು ದೊರಕಿಸಿಕೊಟ್ಟಿದ್ದೇವೆ. ಅಲ್ಲಿಗೆ ತೆರಳಲು ಎಲ್ಲರೂ ಸಹಕಾರ ನೀಡುವಂತೆ ಮನವಿ ಮಾಡಿದರು. ಆದರೆ ಇದಕ್ಕೆ ಒಪ್ಪದ ಸ್ಥಳೀಯ ನಿವಾಸಿಗಳು, ನಾವು ಕೆರೆಯಂಗಳದಲ್ಲಿ ನಿರ್ಮಿಸಿರುವ ಮನೆಗಳಿಗೆ ತೆರಳುವುದಕ್ಕೆ ಆಕ್ಷೇಪಣೆ ಇಲ್ಲ. ಮನೆಗಳ ಜತೆಗೆ ನಮಗೆ ಮಂಡ್ಯ ಸುತ್ತಮುತ್ತ ಪರ್ಯಾಯ ಜಾಗ ಕೊಡುವುದಾಗಿಯೂ ಸಭೆಯಲ್ಲಿ ತೀರ್ಮಾನವಾಗಿದೆ. ಆ ಜಾಗವನ್ನು ಎಲ್ಲಿ ಗುರುತಿಸಿದ್ದೀರಿ. ಅದಕ್ಕೆ ಸಂಬಂಧಿಸಿದ ಹಕ್ಕುಪತ್ರವನ್ನು ಕೊಡಿ. ನಾವು ಅಲ್ಲಿಗೆ ತೆರಳುತ್ತೇವೆ. ನಮಗೂ ಜಿಲ್ಲಾಧಿಕಾರಿ ಬಗ್ಗೆ ಗೌರವವಿದ್ದು, ಅವರು ನ್ಯಾಯಾಂಗ ನಿಂದನೆಗೆ ಒಳಗಾಗಲು ಬಿಡುವುದಿಲ್ಲ. ಮನೆಯ ಜತೆಗೆ ಪರ್ಯಾಯ ಜಾಗವನ್ನಷ್ಟೇ ಕೋರುತ್ತಿದ್ದೇವೆ. ಈ ಸಂಬಂಧ ಶಾಸಕರು ಮತ್ತು ಜಿಲ್ಲಾಧಿಕಾರಿ ಸಮ್ಮುಖದಲ್ಲಿ ಸಭೆ ಕರೆದು ತೀರ್ಮಾನ ಕೈಗೊಳ್ಲಬೇಕೆಂಬ ಬೇಡಿಕೆಯನ್ನು ಮುಂದಿಟ್ಟರು.

ಎಡಿಸಿ ಮಾತನಾಡಿ, ಈಗಾಗಲೇ ಸ್ಥಳೀಯ ಮುಖಂಡರ ನೇತೃತ್ವದಲ್ಲಿ ಎರಡು ಸಭೆ ನಡೆಸಲಾಗಿದೆ. ಆ ಸಭೆಯಲ್ಲಿ ತೆರವು ಮಾಡುವ ಸಂಬಂಧ ಸಕಾರಾತ್ಮಕ ಪ್ರತಿಕ್ರಿಯೆ ವ್ಯಕ್ತವಾಗಿದೆ. ಮನೆಗಳ ಜತೆಗೆ ಪ್ರತ್ಯೇಕ ಜಾಗವನ್ನೂ ಕೊಡುತ್ತೇವೆ. ಯಾರನ್ನೂ ಕೈಬಿಡುವ ಪ್ರಶ್ನೆಯೇ ಇಲ್ಲ. ಅದಕ್ಕಾಗಿ ಇಲ್ಲಿ ಎಷ್ಟು ಜನರು ವಾಸವಿದ್ದೀರಿ, ವಸತಿ ಇಲ್ಲದವರು ಎಷ್ಟು ಜನರಿದ್ದಾರೆ ಎಂಬ ಬಗ್ಗೆ ಸರ್ವೇ ನಡೆಯಬೇಕಲ್ಲವೇ?. ಹಿಂದೆ ನಡೆದ ಸಭೆಗಳಲ್ಲಿ ಸರ್ವೇ ಕಾರ್ಯಕ್ಕೆ ಅಡ್ಡಿಪಡಿಸುವುದಿಲ್ಲವೆಂದು ಹೇಳಿದ್ದೀರಿ. ಈಗ ಯಾರ ಮಾತನ್ನೋ ಕೇಳಿಕೊಂಡು ಅಡ್ಡಿಪಡಿಸುವುದು ಸರಿಯಲ್ಲ. ಕಾನೂನಾತ್ಮಕವಾಗಿ ನಡೆಯುವ ಸರ್ವೇ ಕಾರ್ಯಕ್ಕೆ ಯಾರೂ ಅಡ್ಡಿಪಡಿಸಬಾರದು ಎಂದು ಮನವೊಲಿಸಲು ಮುಂದಾದರು.

ಆದರೂ ಪಟ್ಟು ಸಡಿಲಿಸದ ನಿವಾಸಿಗಳು, ಕೆಆರ್‌ಎಸ್ ಅಣೆಕಟ್ಟು, ಜಿಲ್ಲಾಧಿಕಾರಿ ಕಾರ್ಯಾಲಯ, ಆಸ್ಪತ್ರೆ ಕಟ್ಟಡ ಕಟ್ಟಲು ನಮ್ಮ ಹಿರಿಯರು ಬಂದಿದ್ದರು. 60-70 ವರ್ಷದಿಂದ ನಾವು ಇಲ್ಲೇ ನೆಲೆಸಿದ್ದೇವೆ. 2013ರಲ್ಲೇ ಕೊಳಚೆ ಪ್ರದೇಶವೆಂದು ಘೋಷಿಸಿ ಹಕ್ಕುಪತ್ರ ನೀಡಲು ಮುಂದಾಗಿದ್ದೀರಿ. ಆನಂತರ ಯಾವುದೋ ಕಾರಣಗಳಿಂದ ಅದು ನನೆಗುದಿಗೆ ಬಿದ್ದಿತು. ಈಗ ನಮ್ಮನ್ನು ಇಲ್ಲಿಂದ ಜಾಗ ಖಾಲಿ ಮಾಡಿಸಲು ಬಂದಿದ್ದೀರಿ. ಇದೇ ಸ್ಥಳದಲ್ಲೇ ಜಾಗ ಕೊಟ್ಟು ಹಕ್ಕುಪತ್ರ ವಿತರಿಸಿ. ನಮಗೆ ಮನೆಗಳೇ ಬೇಡ ಎಂದೂ ಪಟ್ಟು ಹಿಡಿದರು. ಬೀಡಿ ಕಾರ್ಮಿಕರಿಗೆ, ಹಮಾಲಿಗಳಿಗೆಲ್ಲ ಜಾಗವನ್ನು ಕೊಟ್ಟಿದ್ದೀರಿ. ಅವರ ರೀತಿಯಲ್ಲೇ ನಮಗೂ ಮನೆಗಳನ್ನು ಕೊಡಿ ಎಂದು ಪಟ್ಟು ಹಿಡಿದರು.

ಸಂಧಾನ ವಿಫಲ: ನಮ್ಮನ್ನು ಸ್ಥಳಾಂತರ ಮಾಡಬಾರದು. ಹಕ್ಕುಪತ್ರ ದೊರಕಿಸಿಕೊಟ್ಟು ಇಲ್ಲೇ ಇರುವುದಕ್ಕೆ ಅವಕಾಶ ಮಾಡಿಕೊಡಬೇಕು. ಈ ಸಂಬಂಧ ಜಿಲ್ಲಾಧಿಕಾರಿ ಅಧ್ಯಕ್ಷತೆಯಲ್ಲಿ ಸಭೆ ನಡೆಸಿ ತೀರ್ಮಾನ ಕೈಗೊಂಡ ಬಳಿಕ ಸರ್ವೇ ಕಾರ್ಯ ನಡೆಸುವಂತೆ ಬಿಗಿಪಟ್ಟು ಹಿಡಿದರು. ಇವರಿಗೆ ಕೆಲ ಸಂಘಟನೆಗಳ ಮುಖಂಡರು, ನಗರಸಭೆ ಮಾಜಿ ಸದಸ್ಯರು ಒತ್ತಡ ಹಾಕಿದರು. ಮನವೊಲಿಕೆ ಯತ್ನ ವಿಫಲವಾದ ಹಿನ್ನೆಲೆಯಲ್ಲಿ ಮತ್ತೊಂದು ಸುತ್ತಿನ ಸಭೆಯನ್ನು ಕರೆಯುವ ಕುರಿತಂತೆ ಜಿಲ್ಲಾಧಿಕಾರಿ ಜತೆ ಚರ್ಚಿಸಿ ತೀರ್ಮಾನ ಕೈಗೊಳ್ಳಲಾಗುವುದು ಎಂದು ಎಡಿಸಿ ಹೇಳಿದರು. ಇದರಿಂದ ಸಂತಸಗೊಂಡ ನಿವಾಸಿಗಳು ಚಪ್ಪಾಳೆ ತಟ್ಟಿ ಸಂತಸಪಟ್ಟರು. ಅಂಎಯೇ ಅಧಿಕಾರಿಗಳು ಸರ್ವೇ ಕಾರ್ಯ ಕೈಬಿಟ್ಟು ವಾಪಸಾದರು. ಕೊಳಗೇರಿ ಅಭಿವೃದ್ಧಿ ಮಂಡಳಿಯ ಮುಖ್ಯ ಇಂಜಿನಿಯರ್ ಹರೀಶ್, ನಗರಸಭೆ ಅಧಿಕಾರಿಗಳು ಇದ್ದರು. ಸರ್ವೇ ಕಾರ್ಯದ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕೆಯಾಗಿ ಪೊಲೀಸರನ್ನು ನಿಯೋಜಿಸಲಾಗಿತ್ತು.