ಅನ್ಸಾರ್ ಇನೋಳಿ ಉಳ್ಳಾಲ
ಅಭಿವೃದ್ಧಿ ಹೊಂದುತ್ತಿರುವ ಮುಡಿಪುವಿನಲ್ಲಿ ಗ್ರಾಪಂಗೆ ಆದಾಯ ನೀಡಬಲ್ಲ ವಾಣಿಜ್ಯ ಕಟ್ಟಡಕ್ಕೆ ಎಂಟು ತಿಂಗಳ ಹಿಂದೆ ಶಿಲಾನ್ಯಾಸ ನಡೆದರೂ ಆರಂಭಿಕ ಹಂತದ ಕಾಮಗಾರಿ ಇನ್ನೂ ಆರಂಭಗೊಂಡಿಲ್ಲ. ಇದರಿಂದಾಗಿ ಕಟ್ಟಡದಲ್ಲಿದ್ದ ವ್ಯಾಪಾರಸ್ಥರು ಕಾದು ಸುಸ್ತಾಗಿದ್ದು ಶೀಘ್ರ ಅನುದಾನ ಬಿಡುಗಡೆಗೆ ಭರವಸೆ ಸ್ಪೀಕರ್ ನೀಡಿದ್ದಾರೆ.
ಕುರ್ನಾಡು ಗ್ರಾಪಂ ವ್ಯಾಪ್ತಿಯ ಮುಡಿಪು ಪರಿಸರದ ಆಸುಪಾಸಿನಲ್ಲಿ ಐಟಿ ಕಂಪನಿ, ಜ್ಞಾನ ಮಂದಿರ, ಇತಿಹಾಸ ಪ್ರಸಿದ್ಧ ಚರ್ಚ್, ಕೈಗಾರಿಕಾ ವಲಯ ಇರುವುದರಿಂದ ಈ ಪ್ರದೇಶ ಅಭಿವೃದ್ಧಿಯ ನಾಗಾಲೋಟದಲ್ಲಿ ಮುಂದುವರಿಯುತ್ತಿದೆ. ಐಷಾರಾಮಿ ಕಟ್ಟಡಗಳೂ ಎದ್ದು ನಿಲ್ಲುತ್ತಿವೆ. ಅಭಿವೃದ್ಧಿಗೆ ಪೂರಕ ಎನ್ನುವಂತೆ ಇಲ್ಲಿನ ರಸ್ತೆಯೂ ಚತುಷ್ಪಥಗೊಂಡಿದೆ. ಕುರ್ನಾಡು ಗ್ರಾಪಂ ಕಚೇರಿ ಮುಡಿಪುವಿನಲ್ಲೇ ಇದ್ದು, ಆವರಣದಲ್ಲೇ ಇದ್ದ ಹಳೇ ಕಟ್ಟಡದಲ್ಲಿ ಗ್ರಂಥಾಲಯ, ಗ್ರಾಮಕರಣಿಕರ ಕಚೇರಿ ಮತ್ತು ಮೆಸ್ಕಾಂ ಬಿಲ್ ಪಾವತಿ ಕೇಂದ್ರವೂ ಇತ್ತು. ಸಮೀಪದಲ್ಲೇ ಐದು ಅಂಗಡಿ ಕೋಣೆಗಳಿದ್ದು ಇದರಿಂದ ಪಂಚಾಯಿತಿಗೆ ಆದಾಯವೂ ಬರುತ್ತಿತ್ತು. ಸಾರ್ವಜನಿಕ ಶೌಚಗೃಹವೂ ಇತ್ತು.
ಜಂಕ್ಷನ್‌ನಲ್ಲೇ ಇವೆಲ್ಲ ಇರುವುದರಿಂದ ಅಭಿವೃದ್ಧಿಗೆ ತಕ್ಕಂತೆ ಸುಸಜ್ಜಿತಗೊಳಿಸಬೇಕೆನ್ನುವ ಗ್ರಾಪಂ ಬೇಡಿಕೆಯಂತೆ ಎಂಟು ತಿಂಗಳ ಹಿಂದೆ ಕಟ್ಟಡ ಸಹಿತ ಸಾರ್ವಜನಿಕರ ಶೌಚಗೃಹಕ್ಕೆ ಕಳೆದ ವರ್ಷ ನ.17ರಂದು ಶಿಲಾನ್ಯಾಸ ನೆರವೇರಿಸಲಾಗಿತ್ತು. ಈ ಸಂದರ್ಭ ವರ್ತಕರಿಂದ ಆಕ್ಷೇಪ ವ್ಯಕ್ತವಾದರೂ ಸುಸಜ್ಜಿತ ಕಟ್ಟಡ ನಿರ್ಮಾಣದ ಬಳಿಕ ಇದುವರೆಗೆ ಬಾಡಿಗೆಯಲ್ಲಿದ್ದವರಿಗೂ ಕೊಡುವ ಭರವಸೆ ನೀಡಿ ಮನವೊಲಿಸಲಾಗಿತ್ತು. ಗ್ರಂಥಾಲಯ, ಗ್ರಾಮಕರಣಿಕರ ಮತ್ತು ಮೆಸ್ಕಾಂ ಬಿಲ್ ಪಾವತಿ ಕೇಂದ್ರವನ್ನು ಪಂಚಾಯಿತಿ ಕಚೇರಿಯಿದ್ದ ಕಟ್ಟಡದ ಮೇಲ್ಭಾಗಕ್ಕೆ ವರ್ಗಾಯಿಸಲಾಗಿತ್ತು.
ನಕ್ಷೆ ರೆಡಿ, ಕಾಮಗಾರಿ ಡಿಲೇ!
ಶೀಘ್ರ ಕಟ್ಟಡ ನಿರ್ಮಾಣ ನಿಟ್ಟಿನಲ್ಲಿ ಪಂಚಾಯಿತಿಯ ಮಾಜಿ ಅಧ್ಯಕ್ಷ ದೇವದಾಸ್ ಭಂಡಾರಿ ನೇತೃತ್ವದ ಸಮಿತಿಯನ್ನೂ ರಚಿಸಲಾಗಿತ್ತು. ಗ್ರಾಪಂ ಪ್ರತಿನಿಧಿಗಳ ಜತೆ ಸೇರಿ ನೂತನ ಕಟ್ಟಡದ ನಕ್ಷೆಯನ್ನೂ ತಯಾರಿಸಲಾಯಿತು. ಆದರೆ ಅನುದಾನ ಬಿಡುಗಡೆ ವಿಳಂಬದಿಂದಾಗಿ ಕಾಮಗಾರಿ ಇದುವರೆಗೂ ಆರಂಭಗೊಂಡಿಲ್ಲ. ಇದರಿಂದಾಗಿ ಹಿಂದಿನ ಕಟ್ಟಡದಲ್ಲಿದ್ದ ವರ್ತಕರು ಸಂಕಷ್ಟಕ್ಕೀಡಾಗಿದ್ದಾರೆ. ಗ್ರಂಥಾಲಯ, ವಿದ್ಯುತ್ ಬಿಲ್ ಪಾವತಿ ಮತ್ತು ಗ್ರಾಮ ಕರಣಿಕರ ಕಚೇರಿಗೆ ಬರುವ ವೃದ್ಧರು ಪಂಚಾಯಿತಿ ಕಟ್ಟಡದ ಮೇಲ್ಭಾಗಕ್ಕೆ ಹೋಗಲು ಪರದಾಡುವ ಪರಿಸ್ಥಿತಿ ನಿರ್ಮಾಣಗೊಂಡಿದ್ದು ಇದ್ದ ಕಟ್ಟಡ ಕೆಡವಿ ನೂತನ ಕಟ್ಟಡ ನಿರ್ಮಾಣ ಆಗದ ಬಗ್ಗೆ ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ.
ಮುಡಿಪು ಪರಿಸರದ ಅಭಿವೃದ್ಧಿಗೆ ತಕ್ಕಂತೆ ಗ್ರಾ.ಪಂ.ಗೆ ಹೆಚ್ಚಿನ ಆದಾಯ ತರುವ ನಿಟ್ಟಿನಲ್ಲಿ ಸುಸಜ್ಜಿತ ವಾಣಿಜ್ಯ ಕಟ್ಟಡ ನಿರ್ಮಾಣಕ್ಕೆ ಈಗಿನ ಆಡಳಿತಗಾರರು ಆಸಕ್ತಿ ತೋರಿದ್ದರಿಂದ ವಾಣಿಜ್ಯ ಕಟ್ಟಡ ಕೆಡವಲಾಗಿದೆಯೇ ಹೊರತು ಪಂಚಾಯಿತಿ ಕಟ್ಟಡಕ್ಕೆ ಹಾನಿ ಮಾಡಿಲ್ಲ. ಮೊದಲ ಹಂತದ ಕಾಮಗಾರಿಗೆ ಶೀಘ್ರ 50 ಲಕ್ಷ ರೂ.ಅನುದಾನ ಬಿಡುಗಡೆಗೊಳಿಸಲಾಗುವುದು. ಬಳಿಕ ಮಾಜಿ ಅಧ್ಯಕ್ಷರ ನೇತೃತ್ವದಲ್ಲಿ ಕಟ್ಟಡ ನಿರ್ಮಾಣ ಆಗಲಿದೆ. ಯು.ಟಿ.ಖಾದರ್, ವಿಧಾನಸಭಾಧ್ಯಕ್ಷ ಕಟ್ಟಡದ ವಿನ್ಯಾಸ ಸಿದ್ಧಪಡಿಸಲಾಗಿದೆ, ತಾಂತ್ರಿಕ ಕಾರಣಗಳಿಂದಾಗಿ ನಿರ್ಮಾಣ ಕಾಮಗಾರಿ ಒಂದಷ್ಟು ವಿಳಂಬವಾಗಿದ್ದು, ಈ ಬಗ್ಗೆ ಸ್ಪೀಕರ್ ಬಳಿ ಮಾತುಕತೆ ನಡೆಸಿ ಶೀಘ್ರ ಕಾಮಗಾರಿ ಆರಂಭಿಸಲಾಗುವುದು. ದೇವದಾಸ್ ಭಂಡಾರಿ, ಕಟ್ಟಡ ನಿರ್ಮಾಣ ಸಮಿತಿ ಸಂಚಾಲಕ ಅನುದಾನ ಬಿಡುಗಡೆ ಆಗುವ ಮೊದಲೇ ಶೀಘ್ರ ಕಟ್ಟಡ ನಿರ್ಮಾಣ ಆಗಲಿದೆ ಎಂದು ಭರವಸೆ ನೀಡಿ ಕಟ್ಟಡ ಕೆಡವಲಾಗಿದೆ. ಅಲ್ಲದೆ ಸಾರ್ವಜನಿಕ ಶೌಚಗೃಹವನ್ನೂ ಕೆಡವಲಾಗಿದ್ದು ಎಂಟು ತಿಂಗಳಾದರೂ ನಿರ್ಮಾಣ ಕೆಲಸ ಆರಂಭವಾಗದ ಕಾರಣ ಒಂದೆಡೆ ವರ್ತಕರು, ಮತ್ತೊಂದೆಡೆ ಸಾರ್ವಜನಿಕರೂ ಸಮಸ್ಯೆ ಎದುರಿಸುವಂತಾಗಿದೆ. ದಾರಿದೀಪವೂ ಇಲ್ಲದೆ ಮುಡಿಪು ಕತ್ತಲ ಕೂಪವಾಗಿದೆ. ವಿಕಾಸ್ ಮುಡಿಪು, ವರ್ತಕರ ಸಂಘ ಕೋಶಾಧಿಕಾರಿ