ಜಿಲ್ಲೆ

ತಲದುಮ್ಮನಹಳ್ಳಿ ನಲ್ಲಿಗಳಲ್ಲಿ ಅಶುದ್ಧ ನೀರು ಪೂರೈಕೆ

ಎನ್.ವೆಂಕಟೇಶ್

ನಿತ್ಯ ಬಳಕೆಗೆ ತೊಂದರೆ  ಗ್ರಾಮ ಪಂಚಾಯಿತಿ ಸದಸ್ಯರಿಗೆ ದೂರು ನೀಡಿದ್ದರೂ ಪ್ರಯೋಜವಿಲ್ಲ

ವಿಜಯವಾಣಿ ಸುದ್ದಿಜಾಲ ಶಿಡ್ಲಘಟ್ಟ

ತಾಲೂಕಿನ ತಲದುಮ್ಮನಹಳ್ಳಿಯ ಊರ ಹೊರಗೆ ಕೊಳವೆಬಾವಿಯಿದ್ದು ಅದರ ಪಕ್ಕದಲ್ಲೇ ಕಾಲುವೆ, ಹಳ್ಳ ಇದೆ. ಮಳೆಗಾಲದಲ್ಲಿ ಹಳ್ಳ ತುಂಬಿದ ನೀರು ಮತ್ತು ಕಾಲುವೆಯ ನೀರು ಕೊಳವೆ ಬಾವಿಯ ಇಂಗುಗುಂಡಿ ಮೂಲಕ ಕೊಳವೆ ಬಾವಿಗೆ ಸೇರಿ ನೀರಲ್ಲಿ ಮಿಶ್ರವಾಗುತ್ತಿದೆ. ಹೊಸ ಮಣ್ಣು ಸೇರಿ ನೀರು ಹಳದಿ ಬಣ್ಣಕ್ಕೆ ತಿರುಗಿದ್ದು ನೀರಲ್ಲಿ ಸಣ್ಣ ಪುಟ್ಟ ಹುಳು ಹುಪ್ಪಟೆಗಳು ಕೂಡ ಉತ್ಪತ್ತಿಯಾಗಿ ನಲ್ಲಿಗಳಲ್ಲಿ ಬರುತ್ತಿದೆ.

ರೇಷ್ಮೆ ಕೃಷಿ, ಹೈನುಗಾರಿಕೆ ಮಾಡುತ್ತಿರುವ ಕುಟುಂಬಗಳೇ ಹೆಚ್ಚಿರುವ ಗ್ರಾಮದಲ್ಲಿ ಅಶುದ್ಧ ನೀರನ್ನು ದಿನನಿತ್ಯದ ಕೆಲಸಗಳಿಗೆ ಬಳಸಲಾಗುತ್ತಿಲ್ಲ. ನಲ್ಲಿಗಳಲ್ಲಿ ಪೂರೈಕೆಯಾಗುತ್ತಿರುವ ನೀರಲ್ಲಿ ಮಣ್ಣು ಹುಳು ಹುಪ್ಪಟೆಗಳು ಬರುತ್ತಿದ್ದು, ಗ್ರಾಮಸ್ಥರು ಅಶುದ್ಧ ನೀರನ್ನು ಬಳಸಲೂ ಆಗದೆ ನೀರಿಗಾಗಿ ಪರದಾಡುವಂತಾಗಿದೆ. 700 ರೂಪಾಯಿ ಕೊಟ್ಟು ಟ್ಯಾಂಕರ್​ ನೀರು ಹಾಕಿಸಿಕೊಳ್ಳುವಂತಾಗಿದೆ.

ಕುಡಿಯುವ ನೀರಿಗಾಗಿ ಶುದ್ಧ ಕುಡಿಯುವ ನೀರಿನ ಘಟಕವಿದ್ದು, ಕುಡಿಯಲು ಬಳಸುವುದಿಲ್ಲ. ಆದರೆ ಹಾಲು ನೀಡುವ ಎಮ್ಮೆ, ಸೀಮೆ ಹಸು, ಕುರಿಗೆ ನೀರು ಬಳಸಲಾಗುತ್ತಿದೆ. 20&25 ದಿನಗಳಿಂದಲೂ ಅಶುದ್ಧ ನೀರು ಪೂರೈಕೆಯಾಗುತ್ತಿದ್ದು, ಗ್ರಾಪಂ ಸದಸ್ಯರಿಗೆ ದೂರು ನೀಡಿದ್ದರೂ ಪ್ರಯೋಜನವಾಗಿಲ್ಲ.

ವಿದ್ಯುತ್​ ಸಂಪರ್ಕ ನೀಡಿಲ್ಲ

ಗ್ರಾಮದಲ್ಲಿ 4 ಕೊಳವೆಬಾವಿಗಳಿದ್ದು ಹೊಸದಾಗಿ ಜಲ ಜೀವನ್​ ಮಿಷನ್​ ಅಡಿ 1 ಕೊಳವೆಬಾವಿ ಕೊರೆಸಿದ್ದು ಅದರಲ್ಲೂ ನೀರು ಇವೆ. ಮನೆ ಮನೆಗೂ ನಲ್ಲಿ ಅಳವಡಿಸಿದೆ. ಪೈಪ್​ ಸಂಪರ್ಕ ನೀಡಿದೆ. ಕೊಳವೆಬಾವಿ ಕೊರೆಸಿ ಒಂದೂವರೆ ವರ್ಷ ಆದರೂ ಬೆಸ್ಕಾಂನಿಂದ ವಿದ್ಯುತ್​ ಸಂಪರ್ಕ ನೀಡಿಲ್ಲ. ವಿದ್ಯುತ್​ ಸಂಪರ್ಕ ಕೊಟ್ಟರೆ ಆ ಕೊಳವೆಬಾವಿಯಿಂದ ನೀರು ಪೂರೈಸಬಹುದು.

ನಿಲ್ಲದ ಗ್ರಾಮಸ್ಥರ ಗೋಳು

ಗ್ರಾಮದ ಮಧ್ಯೆ ಹೆದ್ದಾರಿ 234 ರಸ್ತೆ ಹಾದು ಹೋಗಿದ್ದು, ರಸ್ತೆಯ ಮೇಲ್ಭಾಗದ ಮನೆಗಳಿಗೆ ಸಮಸ್ಯೆ ಕಾಡುತ್ತಿದೆ. ಅಶುದ್ಧ ನೀರು ಪೂರೈಕೆಯಾಗುತ್ತಿರುವ ಕೊಳವೆಬಾವಿಯಿಂದ ಈ ಭಾಗದ ಮನೆಗಳಿಗೆ ನೀರು ಪೂರೈಕೆಯಾಗುತ್ತಿದೆ. ರಸ್ತೆ ಕೆಳಭಾಗದ ಮನೆಗಳಿಗೆ ಬೇರೆ ಕೊಳವೆ ಬಾವಿಗಳಿಂದ ನೀರು ಪೂರೈಕೆಯಾಗುತ್ತಿದ್ದು ಸಮಸ್ಯೆ ಇಲ್ಲ. 25 ದಿನಗಳಿಂದಲೂ ಅಶುದ್ಧ ನೀರು ಪೂರೈಕೆ ನಿಂತಿಲ್ಲ. ಗ್ರಾಮಸ್ಥರ ಗೋಳು ಸದ್ಯಕ್ಕೆ ನಿಂತಿಲ್ಲ.

ಇಂಗುಗುಂಡಿಯ ಕೇಸಿಂಗ್​ ಪೈಪ್​ ಲೀಕೇಜ್​ನಿಂದ ಸಮಸ್ಯೆ ಉಂಟಾಗಿದೆ. ದುರಸ್ತಿ ಮಾಡಿಸುವವರೆಗೂ ಕೊಳವೆಬಾವಿ ಮೋಟರ್​ನ್ನು ಆನ್​ ಮಾಡದೇ ಆಫ್​ ಮಾಡಿ ಇಡಲಾಗಿತ್ತು. ಗ್ರಾಮಸ್ಥರಾರೋ ಮೋಟರ್​ ಆನ್​ ಮಾಡಿದ್ದರಿಂದ ಮಣ್ಣು ಮಿಶ್ರಿತ ನೀರು ನಲ್ಲಿಗಳಲ್ಲಿ ಪೂರೈಕೆಯಾಗಿದೆ. ಇತ್ತೀಚೆಗೆ ಪ್ರತಿ ನಿತ್ಯ ಮಳೆ ಸುರಿಯುತ್ತಿರುವುದರಿಂದ ಕೇಸಿಂಗ್​ ತೆಗೆಯುವ ವಾಹನ ಅಲ್ಲಿಗೆ ಹೋಗಲಾಗುತ್ತಿಲ್ಲ. ಮಳೆ ನಿಂತ ತಕ್ಷಣ ಕೇಸಿಂಗ್​ ತೆಗೆದು ದುರಸ್ತಿಗೆ ಕ್ರಮ ಜರುಗಿಸಲಾಗುವುದು.

| ಪವಿತ್ರಾ ದೇವರಾಜ್​ ಗ್ರಾಪಂ ಅಧ್ಯಕ್ಷೆ, ದೇವರಮಳ್ಳೂರು