ವಿಜಯಪುರ: ರಾಜ್ಯಾದ್ಯಂತ ಸದ್ದು ಮಾಡುತ್ತಿರುವ ಮೈಕ್ರೋಫೈನಾನ್ಸ್ ಹಾವಳಿ ಗುಮ್ಮಟ ನಗರಿಗೂ ಲಗ್ಗೆ ಇಟ್ಟಿದ್ದು, ಈಗಾಗಲೇ ಕಂಡು ಬಂದ ಹಲವು ಪ್ರಕರಣಗಳ ಸಾಲಿಗೆ ಇದೀಗ ಎಲ್ ಆಂಡ್ ಟಿ ಮೈಕ್ರೋಫೈನಾನ್ಸ್ ಕಂಪನಿಯ ಹಾವಳಿಯೊಂದು ಹೊಸದಾಗಿ ಸೇರ್ಪಡೆಯಾಗಿದೆ.
ಸಾಲದ ಮಧ್ಯಸ್ಥಿಕೆ ವಹಿಸಿದ್ದ ಮಹಿಳೆಯರಿಗೆ ಕಾಲ ಕಾಲಕ್ಕೆ ಸಾಲದ ಹಣ ಪಾವಿತಿಸಿದರೂ ಕಂಪನಿಯ ಸಿಬ್ಬಂದಿ ಮಾತ್ರ ಬೆಂಬಿಡದೇ ಕಾಡುತ್ತಿದ್ದು, ಮಾನಸಿಕವಾಗಿ ನೊಂದ ಮಹಿಳೆ ಇದೀಗ ಪೊಲೀಸ್ ಠಾಣೆಯ ಮೆಟ್ಟಿಲೇರಿದ್ದಾರೆ. ವೃತ್ತಿಯಿಂದ ಸ್ವೀಪರ್ ಆಗಿರುವ ಬಂಬಳ ಅಗಸಿಯ ನಿವಾಸಿ ಅಮೃತಾ ಆನಂದ ಸಾಳುಂಕೆ ಎಂಬುವವರು ನೊಂದ ಮಹಿಳೆ. ಕಿರುಕುಳ ನೀಡಿದ ಎಲ್ ಆಂಡ್ ಟಿ ಮೈಕ್ರೋಫೈನಾನ್ಸ್ ಕಂಪೆನಿಯ ಹೈದರ್ ಎಂಬಾತನೇ ಕಿರುಕುಳ ನೀಡಿದ್ದು, ಈ ಬಗ್ಗೆ ಎಪಿಎಂಸಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸೀಕ್ ಆಸ್ಪತ್ರೆಯಲ್ಲಿ ಸ್ವೀಪರ್ ಕೆಲಸ ಮಾಡಿಕೊಂಡಿರುವ ಅಮೃತಾ ಎರಡು ವರ್ಷಗಳ ಹಿಂದೆ ಓಣಿಯ ಶಿಲ್ಪಾ ಬಲಭೀಮ ಪವಾರ, ಕಾವೇರಿ ಪ್ರೇಮ್ ಪವಾರ, ಶಾಂತಾಬಾಯಿ ಹೀಗೆ ಹಲವು ಹೆಣ್ಣುಮಕ್ಕಳೊಂದಿಗೆ ಎಲ್ ಆಂಡ್ ಟಿ ಮೈಕ್ರೋಫೈನಾನ್ಸ್ ಎಂಬ ಸಂಸ್ಥೆ ಹುಟ್ಟು ಹಾಕಿದ್ದರು. ಹೈದರ್ ಎಂಬಾತ ಸಂಘದ ಮುಖ್ಯಸ್ಥರಾಗಿ ಕೆಲಸ ಮಾಡುತ್ತಿದ್ದರು. ಆಗಾ ಸಭೆ ನಡೆಸುತ್ತಿದ್ದ ಸಂಘದ ಸದಸ್ಯರೆಲ್ಲರೂ ತಮಗೆ ತುರ್ತಾಗಿ ಹಣ ಬೇಕಾದಾಗ ಸಾಲ ಪಡೆಯುತ್ತಿದ್ದರು. ಅದೇ ರೀತಿ ಅಮೃತಾ ಕೂಡ 40 ಸಾವಿರ ರೂಪಾಯಿ ಸಾಲ ಪಡೆದಿದ್ದರು. ಬಳಿಕ ಪ್ರತಿ ತಿಂಗಳು 2300 ರೂಪಾಯಿ ಪಾವತಿಸುತ್ತಾ ಸಾಲ ಮುಕ್ತಾಯಗೊಳಿಸಿದ್ದರು. ಆದರೆ, ಸಾಲದ ಹಣ ಪಡೆದ ಶಿಲ್ಪಾ ಬಲಭೀಮ ಪವಾರ, ಕಾವೇರಿ ಪ್ರೇಮ್ ಪವಾರ ಹಾಗೂ ಇತರರು ಮರಳಿ ಫೈನಾನ್ಸ್‌ಗೆ ಕಟ್ಟದೇ ಇರುವುದರಿಂದ ಮತ್ತು ಅವರು ಮನೆಯಲ್ಲಿರದೇ ಇರುವ ಕಾರಣಕ್ಕೆ ಹೈದರ್ ಬಂದು ಹಣ ಕೊಡಿ ಎಂದು ಪೀಡಿಸುತ್ತಿದ್ದಾರೆ.
ಸಾಲದ ಹಣ ಕೊಟ್ಟಿರುವುದಾಗಿ ಹೇಳಿದರೂ ಕೇಳದೇ ಆ ಹಣ ಪಡೆದ ಮಹಿಳೆಯರು ಎಲ್ಲಿದ್ದಾರೆ ತೋರಿಸು, ಇಲ್ಲವಾದಲ್ಲಿ ಸಾಲದ ಹಣ ಪಾವತಿಸು ಎಂದು ಕಿರುಕುಳ ನೀಡುತ್ತಿದ್ದಾರೆಂದು ಅಮೃತಾ ಫೆ. 9 ರಂದು ನೀಡಿದ ದೂರಿನಲ್ಲಿ ವಿವರಿಸಿದ್ದಾರೆ.