ಜಿಲ್ಲೆ

ಕೊಡಗಿನಲ್ಲಿ ನಿಲ್ಲದ ಬಾಲ್ಯವಿವಾಹ

ಸುನಿಲ್ ಪೊನ್ನೇಟಿ

ಮಡಿಕೇರಿ:

ಸರ್ಕಾರದ ಜಾಗೃತಿ ಕಾರ್ಯಕ್ರಮಗಳು, ಹೆಚ್ಚುತ್ತಿರುವ ವಿದ್ಯಾವಂತರ ಸಂಖ್ಯೆ ಮಧ್ಯೆ ಬಾಲ್ಯ ವಿವಾಹ ಪದ್ಧತಿ ಇನ್ನೂ ಜೀವಂತವಾಗಿರುವುದು ಪ್ರಜ್ಞಾವಂತರ ಆತಂಕಕ್ಕೆ ಕಾರಣವಾಗಿದೆ. ಹೆಚ್ಚು ಸುಶಿಕ್ಷಿತರು ಮತ್ತು ಕಾನೂನಿಗೆ ಗೌರವ ಕೊಡುವ ಶಿಸ್ತನ್ನು ರೂಢಿಸಿಕೊಂಡಿರುವವರನ್ನು ಹೊಂದಿರುವ ಜಿಲ್ಲೆ ಹೆಗ್ಗಳಿಕೆಯ ಕೊಡಗಿನಲ್ಲೂ ಈ ಅನಿಷ್ಟ ನಡೆದಿರುವುದು ಕಳವಳಕಾರಿಯಾಗಿದೆ. ಸರ್ಕಾರದ ಅಧಿಕೃತ ಮಾಹಿತಿ ಪ್ರಕಾರ ಜಿಲ್ಲೆಯಲ್ಲಿ ಕಳೆದ ೩ ವರ್ಷಗಳಲ್ಲಿ ಒಟ್ಟು ೭ ಬಾಲ್ಯ ವಿವಾಹ ಪ್ರಕರಣಗಳು ದಾಖಲಾಗಿವೆ.

ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದ ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆ -೫ ಪ್ರಕಾರ ರಾಜ್ಯದ ಗ್ರಾಮೀಣ ಪ್ರದೇಶಗಳಲ್ಲಿ ಬಾಲಕಿಯರ ಬಾಲ್ಯವಿವಾಹ ಪ್ರಕರಣಗಳು ಶೇ.೨೪.೭ರಷ್ಟು ಇದ್ದರೆ, ಬಾಲಕರ ಬಾಲ್ಯವಿವಾಹ ಪ್ರಕರಣಗಳು ಶೇ. ೭.೨ರಷ್ಟಿದೆ. ಪಟ್ಟಣ ಮತ್ತು ನಗರ ಪ್ರದೇಶಗಳಲ್ಲಿ ಬಾಲಕಿಯರ ಬಾಲ್ಯ ವಿವಾಹ ಪ್ರಮಾಣ ಶೇ.೧೬.೧ರಷ್ಟಿದ್ದು, ಬಾಲಕರ ಬಾಲ್ಯವಿವಾಹ ಪ್ರಮಾಣ ಶೇ. ೪.೫ರಷ್ಟಿದೆ. ೨೦೧೯-೨೦ರಲ್ಲಿ ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆ - ೫ ನಡೆದಿತ್ತು.

೨೦೨೦ -೨೧ರಲ್ಲಿ ೨೯೬, ೨೦೨೧-೨೨ ರಲ್ಲಿ ೪೧೮ ಹಾಗೂ ೨೦೨೨-೨೩ರಲ್ಲಿ ೪೨೮ ಸೇರಿದಂತೆ ರಾಜ್ಯದಲ್ಲಿ ಕಳೆದ ೩ ವರ್ಷಗಳಲ್ಲಿ ಒಟ್ಟು ೧೦೪೨ ಬಾಲ್ಯ ವಿವಾಹ ಪ್ರಕರಣಗಳು ದಾಖಲಾಗಿವೆ. ಕೊಡಗಿನಲ್ಲಿ ೨೦೨೦ -೨೧ರಲ್ಲಿ ೨, ೨೦೨೧-೨೨ ರಲ್ಲಿ ೩ ಹಾಗೂ ೨೦೨೨-೨೩ರಲ್ಲಿ ೨ ಸೇರಿದಂತೆ ಒಟ್ಟು ೭ ಬಾಲ್ಯ ವಿವಾಹ ಪ್ರಕರಣಗಳು ನಡೆದಿವೆ. ರಾಜ್ಯದಲ್ಲಿ ನಡೆದಿರುವ ಪ್ರಕರಣಗಳಿಗೆ ಹೋಲಿಸಿದರೆ ಕೊಡಗಿನಲ್ಲಿ ದಾಖಲಾಗಿರುವ ಬಾಲ್ಯ ವಿವಾಹ ಪ್ರಕರಣಗಳ ಸಂಖ್ಯೆ ಕಡಿಮೆ ಅನ್ನಿಸಿದರೂ ಸುಶಿಕ್ಷಿತರ ಜಿಲ್ಲೆಯಲ್ಲೂ ಈ ಪಿಡುಗು ಇನ್ನೂ ಜೀವಂತವಾಗಿರುವುದು ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿದೆ.

ಕೊಡಗಿನಲ್ಲಿ ನಡೆದಿರುವ ಇಷ್ಟೂ ಪ್ರಕರಣಗಳು ಗಿರಿಜನ ಹಾಡಿಗಳಲ್ಲಿ ದಾಖಲಾಗಿರುವುದು ವಿಶೇಷ. ಸರ್ಕಾರದ ಗಮನಕ್ಕೆ ಬಂದಿರುವ ಪ್ರಕರಣಗಳು ಇಷ್ಟಾದರೆ, ಅಧಿಕಾರಿಗಳ ಕಣ್ಣು ತಪ್ಪಿಸಿ ಆಗಾಗ್ಗೆ ಬಾಲ್ಯ ವಿವಾಹಗಳು ನಡೆಯುತ್ತಿರುತ್ತದೆ ಎನ್ನುತ್ತಾರೆ ಈ ಸಂಬಂಧ ಜಾಗೃತಿ ಕಾರ್ಯಕ್ರಮ ನಡೆಸುತ್ತಿರುವ ಸ್ವಯಂ ಸೇವಾ ಸಂಸ್ಥೆಯೊಂದರ ಕಾರ್ಯಕರ್ತೆ. ಇಂಥ ಪ್ರಕರಣಗಳು ತಮ್ಮ ಗಮನಕ್ಕೆ ಬಂದರೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಗೆ ತಿಳಿಸುವ ಮೂಲಕ ಇಂತಹ ಅನಿಷ್ಟದ ಹೆಸರಲ್ಲಿ ಎಳೆವೆಯಲ್ಲೇ ಸಂಸಾರ ಬಂಧನಕ್ಕೆ ಒಳಗಾಗುವುದನ್ನು ತಪ್ಪಿಸಲಾಗಿದೆ ಎಂದು ಹೇಳುತ್ತಾರೆ.

ಬಾಲ್ಯ ವಿವಾಹ ನಿಷೇಧ ಕಾನೂನನ್ನು ಸಮರ್ಪಪಕವಾಗಿ ಜಾರಿಗೆ ತರುವಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ನೋಡಲ್ ಇಲಾಖೆಯಾಗಿದ್ದು, ಕಂದಾಯ, ಕಾರ್ಮಿಕ, ಶಿಕ್ಷಣ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ, ಪೊಲೀಸ್, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್, ಸಮಾಜ ಕಲ್ಯಾಣ, ಹಿಂದುಳಿದ ವರ್ಗಗಳ ಕಲ್ಯಾಣ ಹಾಗೂ ಬುಡಕಟ್ಟು ಕಲ್ಯಾಣ ಇಲಾಖೆಗಳು ಮಾತ್ರವಲ್ಲದೆ ಸ್ಥಳೀಯ ಸಂಸ್ಥೆ ಅಧಿಕಾರಿ, ಸಿಬ್ಬಂದಿ, ಸ್ವಯಂ ಸೇವಾ ಸಂಸ್ಥೆಗಳ ಪ್ರತಿನಿಧಿಗಳನ್ನೂ ಇದರಲ್ಲಿ ಸೇರಿಸಿಕೊಳ್ಳಲಾಗಿದೆ. ಬಾಲ್ಯ ವಿವಾಹ ತಡೆಗಟ್ಟುವ ನಿಟ್ಟಿನಲ್ಲಿ ಈ ಎಲ್ಲಾ ಇಲಾಖೆಗಳಿಗೂ ವಿವಿಧ ಜವಾಬ್ದಾರಿಗಳನ್ನು ಹಂಚಿಕೆ ಮಾಡಲಾಗಿದ್ದು, ಸಂಘಟಿತ ಮತ್ತು ಸಮನ್ವಯತೆಯಿಂದ ಕೆಲಸ ಮಾಡಲು ಸರ್ಕಾರ ಸೂಚಿಸಿದೆ.

ಬಾಲ್ಯವಿವಾಹಕ್ಕೆ ಕಡಿವಾಣ ಹಾಕಲು ಸರ್ಕಾರ ಹಲವಾರು ಕ್ರಮಗಳನ್ನು ತೆಗೆದುಕೊಂಡಿದೆ. ಬಾಲ್ಯವಿವಾಹ ನಡೆಯುತ್ತಿರುವ ಮಾಹಿತಿ ದೊರೆತ ಕೂಡಲೇ ಬಾಲ್ಯವಿವಾಹವನ್ನು ತಡೆಗಟ್ಟಲು ಆಯಾಯ ಜಿಲ್ಲೆ, ತಾಲೂಕಿಗೆ ಸಂಬಂಧಿಸಿದ ವಿವಿಧ ಭಾಗೀದಾರ ಇಲಾಖೆಗಳ ಬಾಲ್ಯವಿವಾಹ ನಿಷೇಧಾಧಿಕಾರಿಗಳು, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ತಾಲೂಕು ಮತ್ತು ಜಿಲ್ಲಾ ಮಟ್ಟದ ಅಧಿಕಾರಿ, ಸಿಬ್ಬಂದಿಗಳ ಜತೆಗೂಡಿ ಬಾಲ್ಯವಿವಾಹಗಳನ್ನು ತಡೆಗಟ್ಟಲಾಗುತ್ತಿದೆ.

ಬಾಲ್ಯವಿವಾಹವನ್ನು ತಡೆಗಟ್ಟಿದ ಪ್ರಕರಣಗಳಲ್ಲಿ ಬಾಲಕ ಅಥವಾ ಬಾಲಕಿಯರು ಬಾಲ್ಯವಿವಾಹವಾಗದಂತೆ ೧೮ ವರ್ಷದವರೆಗೆ ಅವರನ್ನು ಗಮನಿಸಲಾಗುತ್ತಿರುತ್ತದೆ. ಬಾಲ್ಯವಿವಾಹ ಕುರಿತು ದೂರು ಸಲ್ಲಿಸಲು ಸಹಾಯವಾಣಿ ಸಂಖ್ಯೆ ೧೦೯೮ ದಿನದ ಎಲ್ಲಾ ಸಮಯದಲ್ಲಿ ಕಾರ್ಯನಿರ್ವಹಿಸುತ್ತಿರುತ್ತದೆ. ಬಾಲ್ಯವಿವಾಹ ಶಿಕ್ಷಾರ್ಹ ಅಪರಾಧ ಎನ್ನುವ ಬಗ್ಗೆ ಸಾರ್ವಜನಿಕರಲ್ಲಿ ಅರಿವು ಮೂಡಿಸಲು ವ್ಯಾಪಕ ಪ್ರಚಾರ ಕೈಗೊಳ್ಳಲಾಗಿದೆ. ಬಾಲ್ಯವಿವಾಹ ನಿಷೇಧ ಕಾಯ್ದೆ ಮತ್ತು ಜವಾಬ್ದಾರಿ ಹಾಗೂ ಕರ್ತವ್ಯಗಳ ಕುರಿತು ಬಾಲ್ಯವಿವಾಹ ನಿಷೇಧಾಧಿಕಾರಿಗಳಿಗೆ ಆಗಾಗ್ಗೆ ತರಬೇತಿ ಕಾರ್ಯಕ್ರಮಗಳನ್ನೂ ಆಯೋಜಿಸಲಾಗುತ್ತಿರುತ್ತದೆ.

ಸರ್ಕಾರದ ಎಲ್ಲಾ ಕಾಳಜಿ ಮತ್ತು ಜಾಗೃತಿ ಕಾರ್ಯಕ್ರಮಗಳ ಮಧ್ಯೆಯೂ ಬಡತನ, ಅಜ್ಞಾನ, ಮೂಢನಂಬಿಕೆ, ಅರಿವಿನ ಕೊರತೆ, ಅನಕ್ಷರತೆ, ಕಾನೂನು ತಿಳುವಳಿಕೆ ಕೊರತೆ, ಹೆಣ್ಣು ಮಕ್ಕಳ ಶಿಕ್ಷಣದ ಬಗ್ಗೆ ನಿರ್ಲಕ್ಷ್ಯ, ಹೆಣ್ಣು ಮಕ್ಕಳು ಜವಾಬ್ದಾರಿ ಎನ್ನುವ ಮನೋಭಾವ, ಮನೆಯಲ್ಲಿರುವ ವೃದ್ಧರು ಹಾಗೂ ಅನಾರೋಗ್ಯ ಪೀಡಿತರ ಆಸೆ ಮತ್ತಿತರ ಕಾರಣಗಳಿಂದ ಬಾಲ್ಯ ವಿವಾಹಗಳು ಆಗಾಗ್ಗೆ ನಡೆಯುತ್ತಿರುತ್ತದೆ. ಅದರಲ್ಲೂ ಹಾಡಿಗಳಲ್ಲಿ ಬಾಲ್ಯ ವಿವಾಹ ಪ್ರಕರಣಗಳು ಹೆಚ್ಚಾಗಿದ್ದು, ಬಹುತೇಕರಿಗೆ ವಿದ್ಯಾಭ್ಯಾಸದ ಕೊರತೆ, ಹೊರ ಸಮಾಜದ ಸಂಪರ್ಕ ಇಲ್ಲದಿರುವುದು, ಸಂಪ್ರದಾಯ ಎನ್ನುವ ನಂಬಿಕೆ, ದೇವರ ಶಾಪದ ಭಯ ಹಾಗು ಅಪ್ರಾಪ್ತರಲ್ಲಿ ಪ್ರೇಮ ಪ್ರಕರಣಗಳು ಕೂಡ ಕಾರಣವಾಗಿದೆ ಎನ್ನುವುದು ಸ್ವಯಂ ಸೇವಾ ಸಂಸ್ಥೆಗಳ ಕಾರ್ಯಕರ್ತರ ಅಭಿಪ್ರಾಯ.