ಕಾರವಾರ: ಸರ್ಕಾರಿ ಶಾಲೆಗಳ ದುಸ್ಥಿತಿಯ ಬಗ್ಗೆ ಆಗಾಗ ಸುದ್ದಿ ಬರುತ್ತಲೇ ಇರುತ್ತದೆ. ಆದರೆ, ಅಂಥ ಶಾಲೆಗಳಿಗೆ ಅನುದಾನ ಕೊಡಿಸಬೇಕಾದ ಡಿಡಿಪಿಐ ಕಚೇರಿಯೇ ದುಸ್ಥಿತಿಯಲ್ಲಿದೆ.
ನಗರದ ಕೋಣೆವಾಡದಲ್ಲಿ ರಾಷ್ಟ್ರೀಯ ಹೆದ್ದಾರಿ 66 ವಿಸ್ತರಣೆಗಾಗಿ ಡಿಡಿಪಿಐ ಕಚೇರಿ ಅರ್ಧ ಭಾಗವನ್ನು ಕೆಡವಿ 6 ವರ್ಷಗಳು ಕಳೆದಿವೆ. ಭೂ ಸ್ವಾಧೀನಕ್ಕಾಗಿ ಶಿಕ್ಷಣ ಇಲಾಖೆಗೆ ಭೂ ಪರಿಹಾರವೂ ದೊರೆತಿದೆ. ಆದರೆ, ಇನ್ನೊಂದಿಷ್ಟು ಹಣ ಹಾಕಿ ಹೊಸ ಕಟ್ಟಡ ನಿರ್ಮಾಣಕ್ಕೆ ಇಲಾಖೆ ಮೀನಮೇಷ ಎಣಿಸುತ್ತಿದೆ. ಇದರಿಂದ ಹಳೆಯ ಶೆಡ್‌ನಂಥ ಕಟ್ಟಡದಲ್ಲಿ ಡಿಡಿಪಿಐ ಕಚೇರಿ ಅಧಿಕಾರಿ, ಸಿಬ್ಬಂದಿ ಕಾಲ ಕಳೆಯುವಂತಾಗಿದೆ.
ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿ ಸುಮಾರು 150 ವರ್ಷ ಕಳೆಯದಾದ ಕಪು÷್ಪ ಕಲ್ಲು, ಗಾರೆ, ಹಾಗೂ ಮರದಿಂದ ನಿರ್ಮಾಣ ಮಾಡಲಾದ ಮಜಬೂತಾದ ಬ್ರಿಟಿಷರ ಕಾಲದ ಕಟ್ಟಡದಲ್ಲಿ ಡಿಡಿಪಿಐ ಕಚೇರಿ ಮೊದಲಿನಿಂದಲೂ ನಡೆದು ಬಂದಿದೆ. ಕಟ್ಟಡ ಹಾಗೇ ಇದ್ದರೆ ತೊಂದರೆ ಇರಲಿಲ್ಲ. ಆದರೆ, ಅರ್ಧ ಭಾಗವನ್ನು ಕೆಡವಿದ ನಂತರ ಎದುರಿನ ಅಂದ ಹಾಳಾಗಿ ಹೋಗಿದೆ. ತುಂಡಾದ ಭಾಗವನ್ನು ಹಳೆಯ ಹಲಗೆಗಳು, ಪ್ಲಾಸ್ಟಿಕ್ ಟಾರ್ಪಲ್‌ಗಳನ್ನು ಜೋಡಿಸಿ ಮುಚ್ಚಿಡಲಾಗಿದೆ. ಅದನ್ನು ಜಿಲ್ಲಾ ಮಟ್ಟದ ಸರ್ಕಾರಿ ಕಚೇರಿ ಎಂದು ಹೇಳುವ ಪರಿಸ್ಥಿತಿ ಇಲ್ಲ. ವಿವಿಧೆಡೆ ಕಚೇರಿಯ ಮೇಲ್ಛಾವಣಿಯ ಸ್ಲ್ಯಾಬ್‌ಗಳು ಕಿತ್ತು ಬೀಳುತ್ತಿದೆ. ಸರ್ವ ಶಿಕ್ಷಣ ಅಭಿಯಾನದ ವಿಭಾಗವನ್ನು ಗೋಡೌನ್ ಒಂದರಲ್ಲಿ ನಡೆಸಲಾಗುತ್ತಿದೆ. ಆಗಾಗ ನಡೆಯುವ ಶಿಕ್ಷಕರ ಕೌನ್ಸೆಲಿಂಗ್‌ಗೆ ಅನುದಾನಿತ ಶಾಲೆಗಳನ್ನು ಹುಡುಕಿಕೊಂಡು ಹೋಗಬೇಕಾದ ದುಸ್ಥಿತಿ ಡಿಡಿಪಿಐ ಕಚೇರಿಗೆ ಇದೆ. ತಮ್ಮ ವ್ಯಾಪ್ತಿಯ ಆರೆಂಟು ಬಿಇಒಗಳ ಸಭೆ ಕರೆಯಲು ಸರಿಯಾದ ಕೊಠಡಿಯಿಲ್ಲ. ಕಾರ್ಯಕ್ರಮ ನಡೆಸಲು ಸಭಾಭವನವಿಲ್ಲ. ಅಽಕಾರಿಗಳಿಗೆ ಪ್ರತ್ಯೇಕ ಕೊಠಡಿಗಳಿಲ್ಲ. ಮಳೆಗಾಲ ಬಂದರೆ ನೀರು ಸೋರಿ ಕಚೇರಿಯೆಲ್ಲ ವಾಸನೆ ಪ್ರಾರಂಭವಾಗುತ್ತವೆ. ಫೈಲ್‌ಗಳು ಹಾಳಾಗುತ್ತಿವೆ.
ಡೆಪ್ಯೂಟಿ ಎಜುಕೇಶನ್ ಇನ್ಸ್ಪೆಕ್ಟರ್ ಹೆಸರಿನಲ್ಲಿ 31 ಗುಂಟೆ ಜಾಗ ಹೆದ್ದಾರಿ ಪಕ್ಕದಲ್ಲಿದೆ. ಅದರಲ್ಲಿ ಸುಮಾರು 7 ಗುಂಟೆ ಜಾಗವನ್ನು ಹೆದ್ದಾರಿಗಾಗಿ ಬಿಟ್ಟುಕೊಡಲಾಗಿದೆ. ರಾಷ್ಟ್ರೀಯ ಹೆದ್ದಾರಿ ವಿಶೇಷ ಭೂ ಸ್ವಾಧೀನಾಧಿಕಾರಿ ಕಚೇರಿಯಿಂದ 51.55 ಲಕ್ಷ ರೂ. ಪರಿಹಾರ 20218 ರಲ್ಲೇ ಪಾವತಿಸಲಾಗಿದೆ. 2023 ರವರೆಗೆ ಜಿಲ್ಲಾ ಪಂಚಾಯಿತಿ ಸಿಇಒ ಹೆಸರಿನ ಖಾತೆಯಲ್ಲಿ ಆ ಹಣ ಕೊಳೆಯುತ್ತಿತ್ತು. 2023 ರಲ್ಲಿ ಅದನ್ನು ಸರ್ಕಾರಕ್ಕೆ ಭರಣ ಮಾಡಲಾಗಿದೆ.
ಹಾಲಿ ಇರುವ ಸುಮಾರು 25 ಗುಂಟೆ ಜಾಗದಲ್ಲೇ ಜಿಪ್ಲಸ್ 2 ಹೊಸ ಕಟ್ಟಡ ನಿರ್ಮಾಣ ಮಾಡಬಹುದಾಗಿದೆ. ಅದಕ್ಕಾಗಿ 3 ಕೋಟಿ ರೂ.ಗಳ ಯೋಜನೆಯನ್ನು ರೂಪಿಸಿ ಸರ್ಕಾರಕ್ಕೆ ಪ್ರತಿ ವರ್ಷ ಪ್ರಸ್ತಾವನೆ ಸಲ್ಲಿಸಲಾಗುತ್ತಿದೆ. ಆದರೆ, ಶಿಕ್ಷಣ ಇಲಾಖೆ ಅದಕ್ಕೆಲ್ಲ ಹಣವಿಲ್ಲ ಎಂದು ಇದುವರೆಗೂ ಹೊಸ ಕಚೇರಿ ಕಟ್ಟಡಕ್ಕೆ ಅವಕಾಶ ನೀಡಿಲ್ಲ.
ಜಿಲ್ಲಾ ಪಂಚಾಯಿತಿ ಕಚೇರಿಯ ಪಕ್ಕ ಸ್ಕೂಲ್ ಬೋರ್ಡ್ ಹೆಸರಿನಲ್ಲಿ 1 ಎಕರೆ ಜಾಗವಿದೆ. ಮಾತ್ರವಲ್ಲ ಬ್ರಿಟಿಷರ ಕಾಲದ ಕಟ್ಟಡವೂ ಇದೆ. ಆದರೆ, ಅಲ್ಲಿ ತಹಸೀಲ್ದಾರ್ ಕಚೇರಿ ನಡೆಸಲಾಗುತ್ತಿದೆ. ಶಿಕ್ಷಣ ಇಲಾಖೆಗೆ ಯಾವುದೇ ಬಾಡಿಗೆ ಕೂಡ ಬರುತ್ತಿಲ್ಲ ಎನ್ನುತ್ತಾರೆ ಡಿಡಿಪಿಐ ಕಚೇರಿಯ ಅಽಕಾರಿಗಳು.
ಹೊಸ ಕಟ್ಟಡ ನಿರ್ಮಾಣಕ್ಕೆ ಹಳೆಯ ಕ್ವಾಟ್ರಸ್‌ಗಳನ್ನು ತೆರವು ಮಾಡಿ ಜಾಗ ಸಿದ್ಧ ಮಾಡಿ ಇಡಲಾಗಿದೆ. ಜಿಪಂ ಇಂಜಿನಿಯರಿಂಗ್ ವಿಭಾಗದಿಂದ ಯೋಜನೆ ಸಿದ್ಧಪಡಿಸಿ ಆಯುಕ್ತರ ಕಚೇರಿಗೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಆದರೆ, ಇದುವರೆಗೂ ಸರ್ಕಾರದಿಂದ ಅನುದಾನ ಮಂಜೂರಾಗಿಲ್ಲ. ಕನಿಷ್ಠ ಒಂದು ಮಹಡಿಯ ಕಟ್ಟಡ ನಿರ್ಮಾಣಕ್ಕೆ ಅನುಮೋದನೆ ದೊರೆತರೆ, ನಾವು ಕಟ್ಟಡ ಕಾಮಗಾರಿ ಪ್ರಾರಂಭಿಸುತ್ತೇವೆ.ಲತಾ ನಾಯಕಡಿಡಿಪಿಐ, ಕಾರವಾರ