ಬೈಂದೂರು ತಾಲೂಕು ಆಡಳಿತ ಸೌಧ 
ಜಿಲ್ಲೆ

ಅನಧಿಕೃತ ಭೂಕಬಳಿಕೆ ಅವ್ಯಾಹತ, ಅಕ್ರಮ ಕೃತ್ಯದ ಹಿಂದೆ ಅಧಿಕಾರಿಗಳೇ ಶಾಮೀಲು! ಸಾರ್ವಜನಿಕರ ಆರೋಪ

ಇಂದಿರಾ ಎನ್ ಕೆ

ವಿಜಯವಾಣಿ ಸುದ್ದಿಜಾಲ ಬೈಂದೂರು

ಬೈಂದೂರಿನಲ್ಲಿ ನಕಲಿ ದಾಖಲೆ ಸೃಷ್ಟಿಸಿ ಕೋಟ್ಯಂತರ ರೂ. ಮೌಲ್ಯದ ಭೂಕಬಳಿಕೆ ವ್ಯವಹಾರ ಅವ್ಯಾಹತವಾಗಿ ನಡೆಯುತ್ತಿದೆ. ಇಂಥ ಪ್ರಕರಣಗಳ ಕುರಿತು ಸಚಿವರು, ಸಂಸದರೂ ಗಂಭೀರವಾಗಿ ಪರಿಗಣಿಸಲು ಜಿಲ್ಲಾಡಳಿತಕ್ಕೆ ತಿಳಿಸಿದ್ದರು. ಆದರೆ ಬೈಂದೂರು ತಾಲೂಕು ವ್ಯಾಪ್ತಿಯಲ್ಲಿ ನಕಲಿ ದಾಖಲೆ ಮತ್ತು ಅನಧಿಕೃತ ಭೂಕಬಳಿಕೆ ನಿರಂತರವಾಗಿ ಮುಂದುವರಿದಿದೆ. ಈ ಅಕ್ರಮ ಕೃತ್ಯದ ಹಿಂದೆ ಕೆಲವು ಅಧಿಕಾರಿಗಳು ಶಾಮೀಲಾಗಿದ್ದಾರೆ ಎನ್ನುವುದು ಸಾರ್ವಜನಿಕರ ಆರೋಪ.

ಇತ್ತೀಚೆಗೆ ವಿದೇಶದಲ್ಲಿರುವವರು ಹಾಗೂ ಪರ ಊರಿನಲ್ಲಿರುವ ಹೆಸರಿನಲ್ಲಿ ನಕಲಿ ಜಿಪಿಎ ಮಾಡಿ ನೋಂದಣಿ ಮೂಲಕ ಪಹಣಿ ಬದಲಾವಣೆ ನಡೆಯುತ್ತಿದೆ. ಈ ಕುರಿತು ದೂರು ಬಂದ ಹಿನ್ನೆಲೆಯಲ್ಲಿ ಬೈಂದೂರು ತಾಲೂಕು ಆಡಳಿತ ಸೌಧ ನೋಂದಣಿಗೆ ಕೆಲವು ಭೂ ದಾಖಲೆ ಬದಲಾವಣೆ ಮಾಡುತ್ತಿದ್ದು, ಈ ಕುರಿತು ಸಾರ್ವಜನಿಕರು ಜಾಗೃತರಾಗಬೇಕೆಂದು ನೋಟಿಸ್ ಅಂಟಿಸಲಾಗಿದೆ. ಜತೆಗೆ ಶಿರೂರು ವ್ಯಾಪ್ತಿಯಲ್ಲಿ ಸ.ನಂ 153/2, 153/22, 153/23ರಲ್ಲಿ ನಕಲಿ ದಾಖಲೆ ಸೃಷ್ಟಿಸಿರುವ ಕುರಿತು ಬೈಂದೂರು ಆರಕ್ಷಕ ಠಾಣೆಯಲ್ಲಿ ಮತ್ತು ಬೈಂದೂರು ತಹಸೀಲ್ದಾರರಿಗೆ ದೂರು ನೀಡಲಾಗಿದೆ.

ಸರ್ಕಾರಿ ಅಧಿಕಾರಿಗಳು ಶಾಮೀಲು?

ಬೈಂದೂರಿನ ಕೆಲವು ಕಡೆ ಭೂಕಬಳಿಕೆ ವ್ಯವಹಾರದಲ್ಲಿ ಸರ್ಕಾರಿ ನೌಕರರು ಕೂಡ ಭಾಗಿಯಾಗಿರುವುದು ಬಹಿರಂಗಗೊಂಡಿದೆ. ಶಿರೂರು ಹಾಗೂ ಬೈಂದೂರು ಭಾಗದಲ್ಲಿ ಒಂದು ಎಕರೆಗೂ ಹೆಚ್ಚು ಭೂಮಿಯನ್ನು ಕೆಲವು ಸರ್ಕಾರಿ ನೌಕರರು ತಮ್ಮ ಕುಂಟುಂಬ, ಬೇನಾಮಿ ಹಾಗೂ ಹಣವಂತರ ಹೆಸರಲ್ಲಿ ನೋಂದಣಿ ಮಾಡಿಕೊಂಡಿದ್ದಾರೆ. ಸರ್ಕಾರಿ ನೌಕರರು ಭೂಮಿ ವಿಕ್ರಯ ಮಾಡಬೇಕಾದಾಗ ಜಿಲ್ಲಾಡಳಿತದ ಅನುಮತಿ ಮತ್ತು ಸೂಕ್ತ ದಾಖಲೆ ನೀಡಬೇಕು. ಆದರೆ ಇವುಗಳಲ್ಲಿ ಸರ್ಕಾರದ ಯಾವ ನಿಯಮಗಳೂ ಪಾಲನೆಯಾಗಿಲ್ಲ. ಹೀಗಾಗಿ ಲೋಕಾಯುಕ್ತ ಇಲಾಖೆ, ಜಿಲ್ಲಾಡಳಿತ ಬಡವರ ಭೂಮಿ ಉಳಿಸಿಕೊಳ್ಳಲು ಸಹಕರಿಸಬೇಕು ಎಂದು ಸಂತ್ರಸ್ತ ಶಿರೂರು ನಾರಾಯಣ ಪೂಜಾರಿ ಹೇಳಿದ್ದಾರೆ. ನೋಂದಣಿ ಇಲಾಖೆ, ಜಿಲ್ಲಾಡಳಿತ ಮತ್ತು ತಾಲೂಕು ಆಡಳಿತ ಪರಿಶೀಲನೆ ನಡೆಸಬೇಕು, ನಕಲಿ ದಾಖಲೆ ಸೃಷ್ಟಿಸಿ ನಡೆಯುವ ಪಹಣಿ ದಾಖಲೆ ಬದಲಾವಣೆಗೆ ತಡೆ ಹಿಡಿಯಬೇಕು ಎನ್ನುವುದು ಸಾರ್ವಜನಿಕರ ಆಗ್ರಹ.

ತಾಲೂಕು ಆಡಳಿತ ಜಾಗಕ್ಕೆ ಕನ್ನ

ಬೈಂದೂರು ಗ್ರಾಮಾಂತರದ ಭಾಗಗಳಲ್ಲಿ ಭೂಕಬಳಿಕೆ ಒಂದೆಡೆಯಾದರೆ, ಇನ್ನೊಂದೆಡೆ ತಾಲೂಕು ಆಡಳಿತ ಸೌಧದ ಜಾಗವೂ ಒತ್ತುವರಿಯಾಗಿದೆ. ಹಲವು ವರ್ಷದಿಂದ ಬೇಡಿಕೆಯಿದ್ದರೂ, ತಾಲೂಕು ಕಚೇರಿ ಜಾಗಕ್ಕೆ ಇನ್ನೂ ಆವರಣ ಗೋಡೆ ನಿರ್ಮಾಣವಾಗಿಲ್ಲ. ಹೀಗಾಗಿ ಸರ್ವೇ ನಂ.265/1, 334/3ರಲ್ಲಿ ಒಟ್ಟು ಎರಡು ಎಕರೆಗೂ ಅಧಿಕ ಸರ್ಕಾರಿ ಜಾಗ ಇದೆ. ಆದರೆ ರಾಜಕೀಯ ಹಸ್ತಕ್ಷೇಪದಿಂದ ಇಂದಿರಾ ಕ್ಯಾಂಟಿನ್ ನಿರ್ಮಾಣದ ಹೆಸರಿನಲ್ಲಿ ಸರ್ಕಾರಿ ಜಾಗ ಕಬಳಿಕೆಯಾಗುತ್ತಿದೆ. ಕುಂಜಳ್ಳಿಯಲ್ಲಿ ಗೋಮಾಳ ಸೇರಿದಂತೆ ಕಿಂಡಿ ಅಣೆಕಟ್ಟಿನ ಪಕ್ಕದ ಜಾಗ ಅತಿಕ್ರಮಿಸಿಕೊಂಡಿರುವುದು ಕೂಡ ಇತ್ತೀಚೆಗೆ ಬೆಳಕಿಗೆ ಬಂದಿದೆ. ಹೀಗಾಗಿ ತಾಲೂಕು ಆಡಳಿತ ಶೀಘ್ರ ಕ್ರಮ ಕೈಗೊಳ್ಳಬೇಕೆನ್ನುವುದು ಸಾರ್ವಜನಿಕರ ಅಭಿಪ್ರಾಯ.

ಮೇಲ್ನೋಟಕ್ಕೆ ಇದೊಂದು ದೊಡ್ಡ ಮಟ್ಟದ ಹಗರಣ. ಕಳೆದ ಹಲವು ವರ್ಷಗಳಿಂದ ಇದು ನಡೆದುಕೊಂಡು ಬರುತ್ತಿರುವುದು ಈಗಷ್ಟೇ ಗಮನಕ್ಕೆ ಬಂದಿದೆ. ಸಾರ್ವಜನಿಕರ ಆಸ್ತಿಯನ್ನು ಈ ರೀತಿಯಾಗಿ ದುರುಪಯೋಗ ಪಡಿಸುತ್ತಿರುವ ಇಲಾಖೆಯ ಕೆಲವು ಅಧಿಕಾರಿಗಳ ವಿರುದ್ಧ ಜಿಲ್ಲಾಡಳಿತ ಹಿಂದೆಯೇ ಕಠಿಣ ಕ್ರಮ ಕೈಗೊಳ್ಳಬೇಕಿತ್ತು. ಪ್ರಸ್ತುತ ಸಂತ್ರಸ್ತರು ನನಗೆ ಲಿಖಿತ ದೂರು ನೀಡಿದರೆ ತಕ್ಷಣ ತನಿಖೆಗೆ ಆದೇಶಿಸಲಾಗುವುದು.-ಗುರುರಾಜ್ ಗಂಟಿಹೊಳೆ, ಶಾಸಕ
ಬೈಂದೂರು ತಾಲೂಕು ಆಡಳಿತ ಸೌಧದ ಸರ್ಕಾರಿ ಸ್ಥಳದ ಆವರಣ ಗೋಡೆ ನಿರ್ಮಾಣ ಸಂಬಂಧ ಜಿಲ್ಲಾಡಳಿತಕ್ಕೆ ವರದಿ ಕಳುಹಿಸಲಾಗಿದೆ. ಸರ್ಕಾರದಿಂದ ಇದುವರೆಗೆ ಅನುದಾನ, ಆದೇಶ ಬಂದಿಲ್ಲ. ಸರ್ಕಾರಿ ಜಾಗ ಒತ್ತುವರಿ ಪ್ರಕರಣ ಗಂಭೀರ. ಪರಿಗಣಿಸಲಾಗುವುದು. ನಕಲಿ ದಾಖಲೆ ಕಂಡುಬಂದಲ್ಲಿ ಕಾನೂನು ಕ್ರಮ ಕೈಗೊಳ್ಳಲಾಗುವುದು.-ಪ್ರದೀಪ್ ಆರ್, ತಹಸೀಲ್ದಾರರು, ಬೈಂದೂರು