ಜಿಲ್ಲೆ

ಅನಧಿಕೃತ ಕ್ಲಿನಿಕ್‌ಗೆ ಬೀಗ

ಎನ್.ವೆಂಕಟೇಶ್

ಕೆಂಚಾರ್ಲಹಳ್ಳಿಯಲ್ಲಿ ಟಿಎಚ್‌ಒ ನೇತೃತ್ವದಲ್ಲಿ ದಾಳಿ ಔಷಧ, ವೈದ್ಯಕೀಯ ಉಪಕರಣಗಳು ವಶ

ಚಿಂತಾಮಣಿ: ತಾಲೂಕಿನ ಕೆಂಚಾರ್ಲಹಳ್ಳಿಯಲ್ಲಿ ದಾಖಲೆಯಿಲ್ಲದೆ, ನಾಮಫಲಕವಿಲ್ಲದೆ ಕಾರ್ಯನಿರ್ವಹಿಸುತ್ತಿದ್ದ ಕ್ಲಿನಿಕ್ ಮೇಲೆ ತಾಲೂಕು ಆರೋಗ್ಯಾಧಿಕಾರಿ ಡಾ.ರಾಮಚಂದ್ರಾರೆಡ್ಡಿ ಮತ್ತು ಆರೋಗ್ಯ ನಿರೀಕ್ಷಕ ಶ್ರೀನಿವಾಸ ರೆಡ್ಡಿ ಮತ್ತು ತಂಡ ದಾಳಿ ನಡೆಸಿ ಕ್ಲಿನಿಕ್‌ಗೆ ಬೀಗ ಜಡಿಸುವಲ್ಲಿ ಇಂದು ಯಶಸ್ವಿಯಾಗಿದೆ.

ಬಾಗೇಪಲ್ಲಿ ತಾಲೂಕಿನ ನಾರೇಮುದ್ದೇಪಲ್ಲಿ ಗ್ರಾಮದ ಮುನೀರ್(56) ತಾಲೂಕಿನ ಕೆಂಚಾರ‌್ಲಹಳ್ಳಿಯಲ್ಲಿ ಕೆಪಿಎಂಇಯಲ್ಲಿ ನೋಂದಣಿ ಮಾಡಿಸಿಕೊಳ್ಳದೆ ಕ್ಲಿನಿಕ್ ನಡೆಸುತ್ತಿದ್ದರು. ಈ ಸಂಬಂಧದ ದೂರು ಆಧಾರಿಸಿ ತಾಲೂಕು ಆರೋಗ್ಯಾಧಿಕಾರಿಗಳ ತಂಡ ಕ್ಲಿನಿಕ್‌ಗೆ ಮಂಗಳವಾರ ಭೇಟಿ ನೀಡಿ ಪರಿಶೀಲಿಸಿದಾಗ ಪರವಾನಗಿ ಇಲ್ಲದೆ ಕ್ಲಿನಿಕ್ ನಡೆಸುತ್ತಿರುವುದು ಖಚಿತವಾದ ಹಿನ್ನೆಲೆಯಲ್ಲಿ ಕ್ಲಿನಿಕ್‌ಗೆ ಬೀಗ ಹಾಕಿದರು.

ಟಿಎಚ್‌ಒ ಡಾ.ರಾಮಚಂದ್ರಾರೆಡ್ಡಿ ಮಾತನಾಡಿ, ಯಾವುದೇ ಕ್ಲಿನಿಕ್ ಆರಂಭಿಸಲು ವಿದ್ಯಾರ್ಹತೆಗೆ ಅನುಗುಣವಾಗಿ ಕೆಪಿಎಂಇಯಲ್ಲಿ ಅರ್ಜಿ ಸಲ್ಲಿಸಿ, ಸ್ಥಳ ಪರಿಶೀಲನೆ ನಂತರ ಜಿಲ್ಲಾಧಿಕಾರಿ ಮತ್ತು ಜಿಲ್ಲಾ ಆರೋಗ್ಯ ಅಧಿಕಾರಿಯಿಂದ ನೋಂದಣಿ ಪ್ರಮಾಣಪತ್ರ ಪಡೆದುಕೊಳ್ಳಬೇಕು. ಬಯೋ ಮೆಡಿಕಲ್ ವೆಸ್ಟ್ ಬಗ್ಗೆ ಲೈಸೆನ್ಸ್ ಹೊಂದಿರಬೇಕು. ಮಾಲಿನ್ಯ ನಿಯಂತ್ರಣ ಮಂಡಳಿ ಪ್ರಮಾಣಪತ್ರ ಹೊಂದಿರಬೇಕು. ವಿದ್ಯಾರ್ಹತೆ ದಾಖಲೆ ಹಾಗೂ ಕೆಪಿಎಂಇ ನೋಂದಣಿ ಬಗ್ಗೆ ಪರಿಶೀಲಿಸಿದಾಗ ಯಾವುದೇ ದಾಖಲೆಗಳು ಇರಲಿಲ್ಲ. ಆದ್ದರಿಂದ ಕ್ಲಿನಿಕ್‌ನಲ್ಲಿದ್ದ ಔಷಧ, ಇಂಜೆಕ್ಷನ್ ಮತ್ತಿತರ ವೈದ್ಯಕೀಯ ಸಾಧನಗಳನ್ನು ವಶಕ್ಕೆ ಬಾಗಿಲು ಮುಚ್ಚಿಸಲಾಯಿತು ಎಂದು ತಿಳಿಸಿದರು.