ಜಿಲ್ಲೆ

ಅಕ್ಕಪಕ್ಕದವರ ಕಿರುಕುಳ ತಾಳಲಾರದೆ ಆತ್ಮಹತ್ಯೆ

ತಿರುಗಾಡಲು ಸ್ಥಳ ನೀಡದ್ದಕ್ಕೆ ಮನನೊಂದು ನೇಣಿಗೆ ಶರಣಾದ ರಂಗಸ್ವಾಮಿ

ಯಳಂದೂರು : ತನ್ನ ಮನೆಯ ನೆರೆಹೊರೆಯವರು ನನ್ನ ವಾಸದ ಮನೆಯ ಬಳಿ ತಿರುಗಾಡಲು ಸ್ಥಳ ನೀಡುತ್ತಿಲ್ಲ ಎಂದು ಆರೋಪಿಸಿ ವ್ಯಕ್ತಿಯೊಬ್ಬರು ಡೆತ್‌ನೋಟ್ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ತಾಲೂಕಿನ ಅಗರ ಗ್ರಾಮದ ರಂಗಸ್ವಾಮಿ (40) ಎಂಬುವರೇ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡವರು. ಈ ಬಗ್ಗೆ ಪತ್ನಿ ಜ್ಯೋತಿ ಅಗರ-ಮಾಂಬಳ್ಳಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

ರಂಗಸ್ವಾಮಿ ತಮ್ಮ ಮನೆಯ ಬಳಿ ತಿರುಗಾಡಲು ತಮ್ಮ ನೆರಹೊರೆಯ ಲೋಕೇಶ ಹಾಗೂ ನರಸಿಂಹನಾಯಕ ಅವರು ತೊಂದರೆ ನೀಡುತ್ತಿದ್ದರು. ಇವರ ಕಿರುಕುಳ ತಾಳಲಾರದೆ ನಾನು ಆತ್ಮಹತ್ಯೆ ಮಾಡಿಕೊಂಡಿದ್ದೇನೆ ಎಂದು ಡೆತ್‌ನೋಟ್ ಬರೆದು ತಮ್ಮ ಮನೆಯ ಪಕ್ಕದಲ್ಲಿದ್ದ ಪ್ರಕಾಶ್ ಅವರ ಜಮೀನಿನಲ್ಲಿ ಮರಕ್ಕೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಸ್ಥಳಕ್ಕೆ ಡಿವೈಎಸ್‌ಪಿ ಧರ್ಮೇಂದ್ರ, ಸಿಪಿಐ ಕೆ.ಶ್ರೀಕಾಂತ್, ಪಿಎಸ್‌ಐ ಆಕಾಶ್, ಪೇದೆಗಳಾದ ಪರಶಿವ, ಚಿಕ್ಕಸ್ವಾಮಿ, ಬಸವರಾಜು ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿ ಮುಂದಿನ ಕ್ರಮ ವಹಿಸಿದ್ದಾರೆ. ಮೃತ ರಂಗಸ್ವಾಮಿ ಅವರಿಗೆ ಪತ್ನಿ ಹಾಗೂ ಒಬ್ಬ ಪುತ್ರ ಹಾಗೂ ಪುತ್ರಿ ಇದ್ದಾರೆ.