ಜಿಲ್ಲೆ

ನ.2ರಂದು ನಗರದಲ್ಲಿ ಅಭಿನಂದನಾ ಸಮಾರಂಭ: ಸಮಿತಿ ಅಧ್ಯಕ್ಷ ಎಸ್.ಸಿ.ಬಸವರಾಜು ಮಾಹಿತಿ

ಮಂಡ್ಯ: ಕರ್ನಾಟಕ ಜಾನಪದ ಪರಿಷತ್, ಉಮಾಶಂಕರ್-50 ಅಭಿನಂದನಾ ಸಮಿತಿಯ ವತಿಯಿಂದ ನ.2ರಂದು ನಗರದ ಕರ್ನಾಟಕ ಸಂಘದ ಕೆ.ವಿ.ಶಂಕರಗೌಡ ಶತಮಾನೋತ್ಸವ ಭವನದಲ್ಲಿ ಜಾನಪದ ಕಲಾವಿದ ಉಮಾಶಂಕರ್ ಅವರಿಗೆ ಅಭಿನಂದನಾ ಸಮಾರಂಭ ಹಮ್ಮಿಕೊಳ್ಳಲಾಗಿದೆ ಎಂದು ಸಮಿತಿಯ ಅಧ್ಯಕ್ಷ ಎಸ್.ಸಿ.ಬಸವರಾಜು ತಿಳಿಸಿದರು.

ಅಂದು ಬೆಳಿಗ್ಗೆ 10.30ಕ್ಕೆ ಕಾರ್ಯಕ್ರಮವನ್ನು ಕರ್ನಾಟಕ ಸಂಘದ ಅಧ್ಯಕ್ಷ ಪ್ರೊ.ಬಿ.ಜಯಪ್ರಕಾಶಗೌಡ ಉದ್ಘಾಟಿಸುವರು, ಅಧ್ಯಕ್ಷತೆಯನ್ನು ಸಮಿತಿಯ ಅಧ್ಯಕ್ಷ ಎಸ್.ಸಿ.ಬಸವರಾಜು ಸಂಪಹಳ್ಳಿ ವಹಿಸುವರು. ಕಸಾಪ ಜಿಲ್ಲಾ ಸಂಚಾಲಕಿ ಡಾ.ಮೀರಾ ಶಿವಲಿಂಗಯ್ಯ ಅವರು ಉಮಾಶಂಕರ್ ದಂಪತಿಯನ್ನು ಅಭಿನಂದಿಸುವರು. ಪತ್ರಕರ್ತ ಚಂದ್ರಶೇಖರ್ ದ.ಕೋ.ಹಳ್ಳಿ ಅಭಿನಂದನಾ ನುಡಿಗಳನ್ನಾಡಲಿದ್ದು, ಮುಖ್ಯ ಅತಿಥಿಗಳಾಗಿ ಎಂ.ಶ್ರೀನಿವಾಸ್ ಪ್ರತಿಷ್ಠಾನದ ಅಧ್ಯಕ್ಷ ಡಿ.ಶಿವರಾಜು, ಜಾನಪದ ಪರಿಷತ್ ಜಿಲ್ಲಾಧ್ಯಕ್ಷ ಡಿ.ಪಿ.ಸ್ವಾಮಿ, ಜಿಲ್ಲಾ ಕಸಾಪ ಕೋಶಾಧ್ಯಕ್ಷ ಬಿ.ಎಂ.ಅಪ್ಪಾಜಪ್ಪ ಭಾಗವಹಿಸುವರು ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ವಿವರಿಸಿದರು.

ಅಂದು ಕರ್ನಾಟಕ ಜಾನಪದ ವಿಶ್ವವಿದ್ಯಾಲಯದ ಸಿಂಡಿಕೇಟ್ ಸದಸ್ಯ ಗೊರವಾಲೆ ಚಂದ್ರಶೇಖರ್, ತಬಲವಾದಕ ಜಿ.ವೆಂಕಟೇಶ್, ಜಾನಪದ ಕಲಾವಿದೆ ನಂಜಮ್ಮ ಬೇವಿನಹಳ್ಳಿ ಅವರನ್ನು ಸನ್ಮಾನಿಸಲಾಗುವುದು ಎಂದು ಹೇಳಿದರು.

ಪರಿಷತ್ತಿನ ತಾಲೂಕು ಅಧ್ಯಕ್ಷ ಕಾರಸವಾಡಿ ಮಹದೇವು, ಉಪಾಧ್ಯಕ್ಷ ಡಿ.ದೇವರಾಜ್ ಕೊಪ್ಪ, ಪ್ರಧಾನ ಕಾರ್ಯದರ್ಶಿ ಎನ್.ಶೇಖರ್, ಸಮಿತಿಯ ಉಪಾಧ್ಯಕ್ಷ ಶಿವಣ್ಣ ಇದ್ದರು.