ರೇವತಗಾಂವ ಸಮೀಪದ ಉಮರಜ ಗ್ರಾಮದಲ್ಲಿ ನವರಾತ್ರಿ ಉತ್ಸವದ ನಿಮಿತ್ತ ಪ್ರಭಾತಪೇರಿ ಸಂಪನ್ನ ಕಾರ್ಯಕ್ರಮದಲ್ಲಿ ಭಾಗಿಯಾದ ಗಣ್ಯರು, ಮಕ್ಕಳು. 
ಜಿಲ್ಲೆ

ಉಮರಜದಲ್ಲಿ ಕನ್ನಡ ಭಾಷಾಭಿಮಾನದ ಪ್ರಭಾತಪೇರಿ ಸಂಪನ್ನ

Vijayapura - Desk - Chinnayya Chinnayyanamath

ರೇವತಗಾಂವ: ಗಡಿಗ್ರಾಮ ಉಮರಜದಲ್ಲಿ ನವರಾತ್ರಿ ಉತ್ಸವ ನಿಮಿತ್ತ ಕಳೆದ 68 ವರ್ಷಗಳಿಂದಲೂ ಕನ್ನಡ ಭಾಷಾಭಿಮಾನದ ಪ್ರಭಾತಪೇರಿಯನ್ನು ಅತ್ಯಂತ ವೈಭವದಿಂದ ಸದ್ದಿಲ್ಲದೇ ಆಚರಿಸಲಾಗುತ್ತಿದ್ದು, ಶನಿವಾರ ಸಂಪನ್ನವಾಯಿತು.

ನವರಾತ್ರಿಯ ಒಂಬತ್ತು ದಿನ ಉಮರಜ ಗ್ರಾಮದಲ್ಲಿ ನಾಡು-ನುಡಿಯ ಹಬ್ಬದ ಸಂಭ್ರಮ ಮನೆ ಮಾಡಿತ್ತು.
1956 ರಿಂದ ಪ್ರತಿವರ್ಷ ಈ ವಿಶಿಷ್ಟ ಕಾರ್ಯಕ್ರಮ ಸಂಘಟಿಸಲಾಗುತ್ತಿದೆ. ರಾಷ್ಟ್ರಧ್ವಜ, ಭಾರತಮಾತೆಯ ಭಾವಚಿತ್ರದೊಂದಿಗೆ ಗ್ರಾಮಸ್ಥರು, ಮಕ್ಕಳೆಲ್ಲರೂ ಸೇರಿ ಒಂಬತ್ತು ದಿನ ಗ್ರಾಮದ ಪ್ರಮುಖ ಬೀದಿಗಳಲ್ಲಿ ನಾಡದೇವಿಯ ಪ್ರಭಾತ ಪೇರಿಯಲ್ಲಿ ಪಾಲ್ಗೊಂಡಿದ್ದರು.

ನಡೆಯಿರಿ ಸಾಗಿರಿ ಕನ್ನಡದ ವೀರರೇ, ಹಿಡಿಯಿರಿ ಭಾರತಾಂಬೆಯ ಧ್ವಜವ, ಹೊಡೆಯಿರಿ ಜಯ ಘೋಷವ, ಮುತ್ಯಾ ಗಾಂಧಿ ಮುತ್ಯಾ ನಮ್ಮೆಲ್ಲರ ಪ್ರೀತಿಯ ಮುತ್ಯಾ ನೀನು ಸ್ವಾತಂತ್ರೃ ತಂದು ಕೊಟ್ಟೆ ನೀನು, ಝಣ ಝಣ ಕಾಂಚನದಲ್ಲಿ ಅಮೇರಿಕಾದ ಲಾಂಛನದಲ್ಲಿ ಸೇರಿ ಹತ್ತು ಹಲವು ಹಾಡುಗಳನ್ನು ಹಾಡುತ್ತ, ಜಯ ಘೋಷಗಳನ್ನು ಮೊಳಗಿಸುತ್ತ ಪ್ರಭಾತಪೇರಿ ನಡೆಯಿತು.

ಗ್ರಾಮದ ಮಹಿಳೆಯರು ದೇವಿಯ ಭಾವಚಿತ್ರಕ್ಕೆ ಆರತಿ ಬೆಳಗಿ, ವಿಶೇಷ ಪೂಜೆ ಸಲ್ಲಿಸಿದರು. ಪ್ರಭಾತಪೇರಿ ನಂತರ ಎಲ್ಲರೂ ರಾಷ್ಟ್ರಗೀತೆ ಹಾಡಿದರು. ರಾಷ್ಟ್ರ ನಿರ್ಮಾಣ ಕಾರ್ಯದಲ್ಲಿ ಪ್ರತಿಯೊಬ್ಬರೂ ಭಾಗಿಯಾಗೋಣವೆಂದು ಪ್ರತಿಜ್ಞೆ ಕೈಗೊಂಡರು. ಮಕ್ಕಳಿಗೆ ನೋಟ್‌ಬುಕ್, ಪೆನ್ ವಿತರಣೆ ಮಾಡಲಾಯಿತು.