ಜಿಲ್ಲೆ

ನಾಳೆಯಿಂದ ಪುನಃಪ್ರತಿಷ್ಠಾಪನೆ ಬ್ರಹ್ಮಕಲಶೋತ್ಸವ : ಮುಲ್ಕಾಜೆಮಾಡ ಶ್ರೀ ಉಳ್ಳಾಲ್ತಿ ಉಳ್ಳಾಕ್ಲು ಕೊಡಮಣಿತ್ತಾಯ ದೈವಸ್ಥಾನ

ಸೌಮ್ಯ ಆರ್

ಬಂಟ್ವಾಳ: ಅನಾದಿಕಾಲದಿಂದ ಪಾಳುಬಿದ್ದ ಸ್ಥಿತಿಯಲ್ಲಿದ್ದು ಇದೀಗ ಜೀಣೋದ್ಧಾರಗೊಳ್ಳುತ್ತಿರುವ ತಾಲೂಕಿನ ಮಣಿನಾಲ್ಕೂರು ಗ್ರಾಮದ ಮುಲ್ಕಾಜೆಮಾಡ ಶ್ರೀ ಉಳ್ಳಾಲ್ತಿ ಉಳ್ಳಾಕ್ಲು ಕೊಡಮಣಿತ್ತಾಯ ಪರಿವಾರ ದೈವಸ್ಥಾನದಲ್ಲಿ ಮಾ.28ರಿಂದ ಎ.1ರವರೆಗ ಪುನಃಪ್ರತಿಷ್ಠಾಪನೆ ಬ್ರಹ್ಮಕಲಶೋತ್ಸವ ಹಾಗೂ ನೇಮೋತ್ಸವ ನಡೆಯಲಿದೆ ಎಂದು ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ, ಮಾಜಿ ಸಚಿವ ಬಿ.ರಮಾನಾಥ ರೈ ಹೇಳಿದರು.

ಬುಧವಾರ ದೈವಸ್ಥಾನದಲ್ಲಿ ಸುದ್ದಿಗೋಷ್ಟಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿ, ದೇವಸ್ಯಮೂಡೂರು, ದೇವಸ್ಯಪಡೂರು, ಮಣಿನಾಲ್ಕೂರು, ಕಾವಳಮೂಡೂರು, ಕಾವಳಪಡೂರು ಈ ಐದು ಗ್ರಾಮ ವ್ಯಾಪ್ತಿಗೆ ಒಳಪಟ್ಟಿದ್ದು ಗ್ರಾಮಸ್ಥರು ಸೇರಿಕೊಂಡು ದೈವಸ್ಥಾನದ ಪುನರುತ್ಥಾನ ಮಾಡಬೇಕೆಂದು ಜೀರ್ಣೋದ್ಧಾರಕ್ಕೆ ಮುಂದಾಗಿದ್ದಾರೆ. ಕೆಲಸ ಕಾರ್ಯಗಳು ಪ್ರಗತಿಯಲ್ಲಿವೆ. ನೀಲೇಶ್ವರ ಉಚ್ಚಿಲತ್ತಾಯ ಪದ್ಮನಾಭ ತಂತ್ರಿಗಳ ಮಾರ್ಗದರ್ಶನದಲ್ಲಿ ಕಾವಳಮಾಗಣೆ ತಂತ್ರಿಗಳಾದ ಗಣಪತಿ ಮುಚ್ಚಿನ್ನಾಯ್ಯರವರ ನೇತೃತ್ವದಲ್ಲಿ ಬ್ರಹ್ಮಕಲಶೋತ್ಸವಕ್ಕೆ ಸಕಲ ಸಿದ್ಧತೆಗಳು ನಡೆದಿವೆ ಎಂದು ತಿಳಿಸಿದರು.

30ರಂದು ಬೆಳಗ್ಗೆ 9.09ರಿಂದ 11.12ರವರೆಗಿನ ಸುಮುಹೂರ್ತದಲ್ಲಿ ದೈವಗಳ ಪ್ರತಿಷ್ಠಾಪನೆ, ಹೋಮ, ಕಲಶಾಭಿಷೇಕ, ಶಿಖರ ಪ್ರತಿಷ್ಠೆ, ಪರಿಕಲಶಾಭಿಷೇಕ, ಬ್ರಹ್ಮಕಲಶಾಭಿಷೇಕ ನಡೆಯಲಿದೆ. ಆ ದಿನ ಸಂಜೆ ಭಂಡಾರ ತೆಗೆದು ಮೈಸಂದಾಯ, ಕಿನ್ನಿಮಾಣಿ, ಪೂಮಾಣಿ, ಕೊಡಮಣಿತ್ತಾಯ ದೈವಕ್ಕೆ ನೇಮ ನಡೆಯಲಿದೆ, ಮಾ.31ರಂದು ಬೆಳಗ್ಗೆ ಒರ್ಮೂಲತ್ತಾಯ, ಉಳ್ಳಾಲ್ತಿ, ಸಂಜೆ 6ಕ್ಕೆ ರಕ್ತೇಶ್ವರಿ ಬಳಿಕ ಕಲ್ಲುರ್ಟಿ, ಕಲ್ಕುಡ ಹಾಗೂ ಗುಳಿಗ ದೈವದ ನೇಮ ನಡೆಯಲಿದೆ ಎಂದು ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಅಧ್ಯಕ್ಷ ಪದ್ಮಶೇಖರ ಜೈನ್ ಬಲ್ಲೋಡಿಗುತ್ತು, ಕೋಶಾಧ್ಯಕ್ಷ ಆನಂದ ಆಳ್ವ, ಉಪಾಧ್ಯಕ್ಷ ನಾರಾಯಣ ಮಯ್ಯ ದೇವಸ್ಯ, ಮೋನಪ್ಪ ಪೂಜಾರಿ, ಪ್ರಧಾನ ಕಾರ್ಯದರ್ಶಿ ದಯಾನಂದ ಶೆಟ್ಟಿ ಅಮೈ, ಬ್ರಹ್ಮಕಲಶೋತ್ಸವ ಸಮಿತಿ ಸಂಚಾಲಕ ಸಂಜೀವ ಪೂಜಾರಿ, ಬೂಡ ಅಧ್ಯಕ್ಷ ಬೇಬಿ ಕುಂದರ್ ಬ್ರಹ್ಮಕಲಶೋತ್ಸವ ಸಮಿತಿ ಉಪಾಧ್ಯಕ್ಷ ಸದಾಶಿವ ಪೂಜಾರಿ, ಪ್ರಧಾನ ಕಾರ್ಯದರ್ಶಿ ಶಿವರಾಮ ಶೆಟ್ಟಿ ದೋಟ, ಬಂಟ್ವಾಳ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಾಲಕೃಷ್ಣ ಅಂಚನ್ ಮತ್ತಿತರರು ಭಾಗವಹಿಸಿದ್ದರು.