ಜಿಲ್ಲೆ

ಮನೆ ಬಾಗಿಲಿಗೆ ಆಡಳಿತ ವ್ಯವಸ್ಥೆ, ಉಳ್ಳಾಲ ನಗರಸಭೆ ಕ್ರಾಂತಿಕಾರಿ ಯೋಜನೆ

Dakshina Kannada

ಉಳ್ಳಾಲ: ಇನ್ಮುಂದೆ ಉಳ್ಳಾಲ ನಗರಸಭೆ ವ್ಯಾಪ್ತಿಯ ಜನ ಕಚೇರಿ ಕೆಲಸಗಳಿಗೆ ಅಲೆದಾಡಬೇಕಿಲ್ಲ. ಏನಿದ್ದರೂ ಸ್ಥಳದಲ್ಲೇ ಎಲ್ಲ ಕೆಲಸ ಆಗಲಿಕ್ಕಿದೆ. ಇದಕ್ಕಾಗಿ ಅಧಿಕಾರಿಗಳ ತಂಡವೇ ನಿಗದಿತ ಸ್ಥಳಕ್ಕೆ ಬರಲಿದೆ. ಇದು ಉಳ್ಳಾಲ ನಗರಸಭೆ ಜಾರಿಗೆ ತಂದಿರುವ ಯೋಜನೆ.

ನಗರಸಭೆಗೆ ಚುನಾವಣೆ ನಡೆದರೂ ಎರಡು ವರ್ಷ ಆಡಳಿತ ವ್ಯವಸ್ಥೆ ಇಲ್ಲದೆ, ಸಮರ್ಪಕ ಯೋಜನೆಯೂ ಇಲ್ಲದೆ ಆದಾಯಕ್ಕೆ ಕುತ್ತು ಬಂದಿತ್ತು. ಇತ್ತೀಚೆಗಷ್ಟೇ ಅಧ್ಯಕ್ಷ-ಉಪಾಧ್ಯಕ್ಷರ ಆಯ್ಕೆ ನಡೆದು ನೂತನ ಆಡಳಿತ ವ್ಯವಸ್ಥೆ ಜಾರಿಗೆ ಬಂದಿದ್ದು, ಎರಡು ಸಾಮಾನ್ಯ ಸಭೆಗಳೂ ನಡೆದಿವೆ. ಅದಕ್ಕಿಂತ ಮೊದಲೇ ಪೌರಾಯುಕ್ತರ ನೇತೃತ್ವದಲ್ಲಿ ಬಾಡಿಗೆ ಬಾಕಿಯಿರುವ ಅಂಗಡಿಗಳು, ವಾಣಿಜ್ಯ ಸಂಕೀರ್ಣಗಳಿಗೆ ದಾಳಿಯೂ ನಡೆದಿದೆ. ನಿರೀಕ್ಷಿತ ಪ್ರಯೋಜನ ಸಿಗದ ಕಾರಣ ಆಡಳಿತ ಮತ್ತು ಅಧಿಕಾರಿ ವರ್ಗ ನೂತನ ಪ್ರಯೋಗಕ್ಕೆ ಮುಂದಾಗಿದೆ. ಈ ಬಗ್ಗೆ ಗುರುವಾರ ನಗರಸಭಾ ಕಚೇರಿಯಲ್ಲಿ ಅಧ್ಯಕ್ಷೆ ಚಿತ್ರಕಲಾ ಚಂದ್ರಕಾಂತ, ಉಪಾಧ್ಯಕ್ಷ ಯು.ಪಿ.ಅಯೂಬ್ ಮಂಚಿಲ ಹಾಗೂ ಪೌರಾಯುಕ್ತ ರಾಯಪ್ಪ ಮಾಹಿತಿ ನೀಡಿದ್ದಾರೆ.

ಪ್ರತಿ ಗುರುವಾರ ಈ ಕಾರ್ಯಕ್ರಮ ನಡೆಯಲಿದೆ. ಮುಂದಿನ ಗುರುವಾರ(ಫೆ.11) ತೊಕ್ಕೊಟ್ಟು ಜಂಕ್ಷನ್‌ನಲ್ಲಿರುವ ವಾಣಿಜ್ಯ ಸಂಕೀರ್ಣದಲ್ಲಿ ಮೊದಲ ಕಾರ್ಯಕ್ರಮ ನಡೆಯಲಿದೆ. ಎರಡನೇ ಗುರುವಾರ ಧರ್ಮನಗರ ಸರ್ಕಾರಿ ಶಾಲೆ, ಮೂರನೇ ಗುರುವಾರ ತೊಕ್ಕೊಟ್ಟು ಒಳಪೇಟೆ ಅಂಬೇಡ್ಕರ್ ರಂಗಮಂದಿರ, ನಾಲ್ಕನೇ ಗುರುವಾರ ಕೋಟೆಪುರ ಟಿಪ್ಪು ಸುಲ್ತಾನ್ ಶಾಲೆ, ಐದನೇ ಗುರುವಾರ ಮೇಲಂಗಡಿ ಉರ್ದು ಶಾಲೆ, ಆರನೇ ಗುರುವಾರ ಅಲೇಕಳ ಮದನಿ ಜೂನಿಯರ್ ಕಾಲೇಜು, ಏಳನೇ ಗುರುವಾರ ಬಬ್ಬುಕಟ್ಟೆ ಸರ್ಕಾರಿ ಶಾಲೆ, ಎಂಟನೇ ಗುರುವಾರ ಪಟ್ಲ ಶಾಲೆ, ಒಂಬತ್ತನೆ ಗುರುವಾರ ಮಾಸ್ತಿಕಟ್ಟೆ ಆಜಾದ್ ನಗರ ಪ್ರೌಢಶಾಲೆಯಲ್ಲಿ ಕಾರ್ಯಕ್ರಮ ನಡೆಯಲಿದೆ.

274 ಫಲಾನುಭವಿಗಳಿಗೆ ಸಾಲ ಮಂಜೂರು: ನಗರಸಭೆಯಲ್ಲಿ ಮೂರು ವರ್ಷಗಳ ಹಿಂದೆ ಮೂವರು ಬಿಲ್ ಕಲೆಕ್ಟರ್‌ಗಳಿದ್ದರೆ, ಈಗ ಒಬ್ಬರೇ ಇದ್ದಾರೆ. ಸಿಬ್ಬಂದಿ ಕೊರತೆಯೂ ಇದೆ ಎಂದು ನಗರಸಭೆ ಅಧ್ಯಕ್ಷೆ ಚಿತ್ರಕಲಾ ಚಂದ್ರಕಾಂತ ತಿಳಿಸಿದ್ದಾರೆ. 538 ಮಂದಿ ಬೀದಿಬದಿ ವ್ಯಾಪಾರಿಗಳಿಗೆ ಸಾಲ ಪಡೆಯಲು ಅವಕಾಶವಿದ್ದು 468 ಅರ್ಜಿಗಳು ಬಂದಿದ್ದು, 274 ಫಲಾನುಭವಿಗಳಿಗೆ ಬ್ಯಾಂಕ್‌ನಲ್ಲಿ ಸಾಲ ಮಂಜೂರಾತಿ ಆಗಿದೆ. 206 ಫಲಾನುಭವಿಗಳಿಗೆ ಮಂಜೂರಾಗಿದ್ದು ಇನ್ನಷ್ಟೇ ವಿತರಣೆಯಾಗಬೇಕಿದೆ. ಇನ್ನೂ 70 ವ್ಯಾಪಾರಿಗಳಿಗೆ ಅರ್ಜಿ ಸಲ್ಲಿಸಲು ಅವಕಾಶ ಇದೆ.

ವಾರಕ್ಕೊಮ್ಮೆ ಅಧಿಕಾರಿಗಳೇ ಜನರ ಬಳಿಗೆ: ವಾಣಿಜ್ಯ, ವಸತಿ ಸಂಕೀರ್ಣ, ನೀರಿನ ಶುಲ್ಕದಲ್ಲಿ ಶೇ.50ರಷ್ಟು ಪಾವತಿ ಬಾಕಿಯಿದ್ದರೆ, ಶೇ.30ರಷ್ಟು ವ್ಯಾಪಾರಿಗಳು ಉದ್ದಿಮೆ ಪರವಾನಗಿ ಪಡೆದಿಲ್ಲ. ನಗರಸಭೆಗೆ ಆದಾಯ ತರುವ ಹಾಗೂ ಜನ ಕಚೇರಿಗಳಿಗೆ ಅಲೆದಾಡುವುದನ್ನು ತಪ್ಪಿಸುವ ನಿಟ್ಟಿನಲ್ಲಿ ಅಧಿಕಾರಿಗಳು ಜನರ ಬಳಿಗೆ ಹೋಗುವ ಯೋಜನೆ ರೂಪಿಸಲಾಗಿದೆ. ಪ್ರತಿ ಗುರುವಾರ ಅಧಿಕಾರಿಗಳು ನಿಗದಿತ ಸ್ಥಳಕ್ಕೆ ಭೇಟಿ ನೀಡಿ ಬೆಳಗ್ಗೆ 10ರಿಂದ ಸಾಯಂಕಾಲ 4ರವರೆಗೆ ಇದ್ದು, ಎಲ್ಲ ವ್ಯವಸ್ಥೆಗಳನ್ನು ಸ್ಥಳದಲ್ಲೇ ಮಾಡಿಕೊಡಲಿದ್ದಾರೆ ಎಂದು ನಗರಸಭೆ ಉಪಾಧ್ಯಕ್ಷ ಅಯೂಬ್ ಮಂಚಿಲ ಮಾಹಿತಿ ನೀಡಿದ್ದಾರೆ.

ನಗರಸಭೆ ವ್ಯಾಪ್ತಿಯ ನಿವಾಸಿಗಳು ಮೂರು ವರ್ಷಗಳಿಂದ ಆಸ್ತಿ ತೆರಿಗೆ ಕಟ್ಟಿಲ್ಲ. ಈ ಹಿನ್ನೆಲೆಯಲ್ಲಿ ಸುದೀರ್ಘವಾಗಿ ಚರ್ಚಿಸಿ ಜನರ ಬಳಿಯೇ ಹೋಗಲು ನಿರ್ಧರಿಸಲಾಗಿದೆ. ನಿಗದಿತ ದಿನದಂದು ಎಲ್ಲ ಅಧಿಕಾರಿಗಳು ಜನರ ಬಳಿ ಹೋಗಿ ಸ್ಥಳದಲ್ಲೇ ಹೊಸ ಅರ್ಜಿ, ನವೀಕರಣ ಇತ್ಯಾದಿ ಕೆಲಸ ಮಾಡಲಿದ್ದಾರೆ. ಈ ಬಗ್ಗೆ ಒಂದು ದಿನ ಮೊದಲು ಮೈಕ್ ಮೂಲಕ ಘೋಷಣೆ ಮಾಡಿ ಜನರಿಗೆ ಅರಿವು ಮೂಡಿಸುತ್ತೇವೆ. ಇದರಲ್ಲಿ ಯಶಸ್ವಿಯಾದರೆ ನಂತರ ವಿವಿಧ ಹಂತದಲ್ಲಿ ಸಕಾಲ ಅರ್ಜಿಗಳನ್ನೂ ಸ್ವೀಕರಿಸಲಾಗುವುದು. ಸಿಬ್ಬಂದಿ ಕೊರತೆಯಿರುವ ಕಾರಣಕ್ಕೆ ಜನರ ಬಳಿ ಹೋಗಿ ಸ್ಥಳದಲ್ಲೇ ಕೆಲಸ ಮಾಡಿಕೊಡುತ್ತೇವೆ. ರಾಯಪ್ಪ ಪೌರಾಯುಕ್ತ, ಉಳ್ಳಾಲ ನಗರಸಭೆ