ಜಿಲ್ಲೆ

ಬೆಂಗಳೂರಿನಂತೆ ಪ್ರವಾಹ ಭೀತಿ : ಸ್ಪೀಕರ್ ಯು.ಟಿ.ಖಾದರ್ ಕಳವಳ

ವಿಜಯವಾಣಿ ಸುದ್ದಿಜಾಲ ಉಳ್ಳಾಲ

ಮುಂದಿನ 15 ವರ್ಷಗಳಲ್ಲಿ ಬೆಂಗಳೂರು ಮಾದರಿಯಲ್ಲಿ ಉಳ್ಳಾಲವೂ ಮುಳುಗಡೆಯಾಗುವ ಆತಂಕ ಇದೆ. ಅದನ್ನು ತಪ್ಪಿಸಬೇಕಾದರೆ ಈಗಲೇ ರಾಜಕಾಲುವೆ ಒತ್ತುವರಿ ಮಾಡಿದವರಿಗೆ ನೋಟಿಸ್ ಕೊಡಿ ಎಂದು ಸ್ಪೀಕರ್ ಯು.ಟಿ.ಖಾದರ್ ಸೂಚಿಸಿದರು.

ಕಲ್ಲಾಪು ಖಾಸಗಿ ಸಭಾಂಗಣದಲ್ಲಿ ಶುಕ್ರವಾರ ಉಳ್ಳಾಲ ತಾಲೂಕು ಪ್ರಥಮ ತ್ರೈಮಾಸಿಕ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಸುಂದರ ರಸ್ತೆ ನಿರ್ಮಿಸಿ ವರ್ಷದಲ್ಲೇ ನೀರು ಹರಿದು ಹಾಳಾದರೆ ಆಗಾಗ ಅನುದಾನ ಯಾರು ಕೊಡುತ್ತಾರೆ? ಲೇಔಟ್ ಮಾಡುವಾಗ ಚರಂಡಿಗೆ ಒಂದು ಅಡಿ ಜಾಗ ಕೂಡಾ ಬಿಡುವುದಿಲ್ಲ. ಕಲ್ಲಾಪು, ಉಳ್ಳಾಲಬೈಲ್, ಅಲೇಕಳದಲ್ಲಿ ಒಂದು ಅಡಿ ಜಾಗ ಬಿಡದೆ ಮನೆಯೊಳಗೇ ನೀರು ಬರುತ್ತಿದೆ. ಸ್ಥಳೀಯಾಡಳಿತ ಅನುಮತಿ ನೀಡುವುದೇಕೆ?. ನೀವೇಕೆ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಲೋಕೋಪಯೋಗಿ ಅಧಿಕಾರಿಗಳನ್ನು ಖಾದರ್ ಪ್ರಶ್ನಿಸಿದರು.

ಸರ್ಕಾರಿ ಶಾಲೆಯಲ್ಲೇ ಅಂಗನವಾಡಿ

132 ಅಂಗನವಾಡಿಗಳಿದ್ದು, 101 ಸ್ವಂತ ಕಟ್ಟಡಗಳಿವೆ. ಒಂದು ಅಂಗನವಾಡಿ ಬಾಡಿಗೆಯಲ್ಲಿ ಹಾಗೂ 30 ವಿವಿಧ ಕಟ್ಟಡದಲ್ಲಿ ಕಾರ್ಯಾಚರಿಸುತ್ತಿವೆ. 29ಕ್ಕೆ ನಿವೇಶನ ಬೇಕು ಎಂದು ಅಧಿಕಾರಿ ತಿಳಿಸಿದರು. ಗ್ರಾಪಂಗಳು ಈಗಲೇ ಅಂಗನವಾಡಿಗೆ ನಿವೇಶನ ಒದಗಿಸದಿದ್ದರೆ ಐದು ವರ್ಷ ಬಳಿಕ ಸಿಗದು. ಅಂಗನವಾಡಿಗಳು ಸರ್ಕಾರಿ ಶಾಲೆ ಹತ್ತಿರ ಇರುವ ವ್ಯವಸ್ಥೆ ಮಾಡಿ. ಎಂಟು ಲಕ್ಷ ರೂ. ನರೇಗಾದಿಂದ ಸಿಗುತ್ತದೆ. ಐದು ಲಕ್ಷ ರೂ. ನನ್ನ ಅನುದಾನ ಕೊಡುತ್ತೇನೆ. ಮಕ್ಕಳಿಗೆ ಎಲ್ಲ ಸೌಲಭ್ಯ ಕೊಡಲಾಗುತ್ತದೆಯೇ ಎನ್ನುವುದನ್ನು ಗ್ರಾಪಂ ಪರಿಶೀಲಿಸಬೇಕು ಎಂದು ಖಾದರ್ ಹೇಳಿದರು.

ಮೊಟ್ಟೆ ದರ ಟೆನ್ಷನ್!

ಮೊಟ್ಟೆಗೆ ಅಂಗಡಿಯಲ್ಲಿ 6.80 ರೂ. ಇದೆ. ಇಲಾಖೆಯಿಂದ ಆರು ರೂ. ಮಾತ್ರ ಬರುತ್ತಿದ್ದು ಬಾಕಿ ಹಣ ಅಂಗನವಾಡಿ ಕಾರ್ಯಕರ್ತೆಯರು ಭರಿಸುತ್ತಿದ್ದು ನಮ್ಮ ಬಳಿ ದೂರು ನೀಡುತ್ತಿದ್ದಾರೆಂದು ನರಿಂಗಾನ ಗ್ರಾ.ಪಂ. ಸದಸ್ಯ ಮುರಳೀಧರ ಶೆಟ್ಟಿ ಮಾಹಿತಿ ನೀಡಿದರು. ಟೆಂಡರ್ ಕೊಡಲು ಆಗುವುದಿಲ್ಲ. ದರ ಕಡಿಮೆಯಾದರೆ ನಾವು ಕೇಳೋದಿಲ್ಲ ಎಂದು ಅಧಿಕಾರಿ ತಿಳಿಸಿದರು. ಮೊಟ್ಟೆಗೆ ಐದು ರೂ. ಮಾತ್ರ ಸಿಗುತ್ತಿದೆ ಎಂದು ಅಕ್ಷರ ದಾಸೋಹ ಅಧಿಕಾರಿ ದೂರಿದರು. ಈ ವಿಚಾರದಲ್ಲಿ ಮೂವರು ಸಲಹೆ ನೀಡಿದರೂ ಮತ್ತೆ ಚರ್ಚಿಸೋಣ ಎಂದು ಖಾದರ್ ಚರ್ಚೆ ಮುಗಿಸಿದರು.

ಎಸ್ಸೆಸ್ಸೆಲ್ಸಿ ಫಲಿತಾಂಶ ಸಂಕಷ್ಟ

ಎಸ್ಸೆಸ್ಸೆಲ್ಸಿಯಲ್ಲಿ ದೇರಳಕಟ್ಟೆ ಪಬ್ಲಿಕ್ ಸ್ಕೂಲ್ ಎನ್ನುವ ಖಾಸಗಿ ಶಾಲೆಯಲ್ಲಿ ಮತ್ತು ಮಂಜನಾಡಿ ಮುರಾರ್ಜಿ ದೇಸಾಯಿ ಶಾಲೆಯಲ್ಲಿ ಕಡಿಮೆ ಫಲಿತಾಂಶ ಬಂದಿದೆ. ಮಂಜನಾಡಿಯಲ್ಲಿ ಮಕ್ಕಳಿದ್ದಾರೆ. ಶಿಕ್ಷಕರು ಇಲ್ಲದ ಕಾರಣ ಫಲಿತಾಂಶಕ್ಕೆ ತೊಂದರೆಯಾಗಿದೆ. ಅಸೈಗೋಳಿ, ತಲಪಾಡಿ ಮುರಾರ್ಜಿ ದೇಸಾಯಿ ಶಾಲೆಯಲ್ಲಿ ಮಕ್ಕಳಿದ್ದಾರೆ. ಶಿಕ್ಷಕರ ನೇಮಕ ಆದರೆ ಫಲಿತಾಂಶ ತರಲು ಸಾಧ್ಯ ಎಂದು ಬಿಇಒ ಈಶ್ವರ್ ಮಾಹಿತಿ ನೀಡಿದರು. ಮಂಜನಾಡಿ ಪರಿಶಿಷ್ಟ ಜಾತಿ, ಪಂಗಡದ ಸ್ನಾತಕೋತ್ತರ ಹಾಸ್ಟೆಲ್‌ನಲ್ಲಿ 51 ವಿದ್ಯಾರ್ಥಿಗಳಿದ್ದಾರೆ. ನೀರಿನ ಸಮಸ್ಯೆ ಇದ್ದು, ಮಳೆಗಾಲದಲ್ಲೂ ಟ್ಯಾಂಕರ್ ನೀರು ತರಿಸಲಾಗುತ್ತಿದೆ. ನೀರಿಗೇ ಹೆಚ್ಚು ಹಣ ಖರ್ಚು ಮಾಡಬೇಕಾಗುತ್ತದೆ ಅಧಿಕಾರಿ ಅಳಲು ತೋಡಿಕೊಂಡರು.

ಫಲಾನುಭವಿಗಳ ಕೊರತೆ

ಕೃಷಿ ಇಲಾಖೆಯಲ್ಲಿ ಸಾಕಷ್ಟು ಯೋಜನೆಗಳಿದ್ದು ಮಂಗಳೂರು ಬಿ. ಹೋಬಳಿಯಲ್ಲಿ ಫಲಾನುಭವಿಗಳ ಕೊರತೆ ಇದೆ. ಈ ಬಾರಿ ತೆಂಗಿಗೆ ಕಾಯಿಲೆ ಕಂಡುಬಂದಿಲ್ಲ. ಹಿಂದೆ ಬಂದಿದ್ದ ರೋಗಕ್ಕೆ ಸಿಪಿಸಿಆರ್ ಜತೆ ಸೇರಿ ಪರಿಹಾರ ಕಂಡುಕೊಳ್ಳಲಾಗಿದೆ. ಮೈಲುತುತ್ತು ನಾವು ನೀಡುತ್ತಿಲ್ಲ. ಖರೀದಿಸಿದ ಬಿಲ್ ನೀಡಿದರೆ ಹಣ ಖಾತೆಗೆ ಜಮೆ ಮಾಡಲಾಗುತ್ತಿದೆ. ಒಂದು ಎಕರೆಗೆ ಹತ್ತು ಕೆ.ಜಿ. ಬೇಕಾಗುತ್ತಿದ್ದು ಹೆಕ್ಟೇರ್‌ಗೆ 1500 ರೂ. ನೀಡಲಾಗುತ್ತದೆ. ತಾಲೂಕಿನಲ್ಲಿ ಮುಳ್ಳುಹಂದಿ ಕಚ್ಚಿದ ಪ್ರಕರಣಕ್ಕೆ ಸಂಬಂಧಿಸಿ 2 ಲಕ್ಷ ರೂ. ಪರಿಹಾರ ನೀಡಲಾಗಿದೆ ಎಂದು ಕೃಷಿ ಇಲಾಖೆಯ ಅಧಿಕಾರಿ ಹೇಳಿದರು.

ಕ್ರಿಮಿನಲ್ ಕೇಸ್‌ಗೆ ಸೂಚನೆ 

ಹರೇಕಳ ರಾಜಗುಡ್ಡೆ ಬಳಿ ಕೆವಿಆರ್‌ನವರು ಮಾಡಿದ ಟ್ಯಾಂಕ್ ಈಗಲೇ ಸುತ್ತಲೂ ಸೋರುತ್ತಿದೆ ಎಂದು ಗ್ರಾ.ಪಂ. ಮಾಜಿ ಸದಸ್ಯ ಬಶೀರ್ ಉಂಬುದ ದೂರಿದ್ದು, ಕೆವಿಆರ್ ವಿರುದ್ಧ ವಂಚನೆ ಕೇಸ್ ಹಾಕುವಂತೆ ಅಧಿಕಾರಿಗೆ ಖಾದರ್ ಸೂಚಿಸಿದರು. ಒಂದು ಮೀಟರ್ ಗುಂಡಿ ತೋಡಿ ಪೈಪ್ ಅಳವಡಿಸಬೇಕು. ಮೊದಲೇ ನೋಡಿ. ಆಗದಿದ್ದರೆ ನಮಗೆ ದೂರು ನೀಡಿ. ಮನೆಗೆ ಮೀಟರ್ ಮತ್ತು ಟ್ಯಾಪ್ ಹಾಕಿದ್ದು ನಯಾಪೈಸೆ ಕೊಡಬೇಡಿ. ಕೆಲವು ಕಡೆ ಉಪಗುತ್ತಿಗೆ ನೀಡಲಾಗಿದ್ದು ಹಣ ವಸೂಲಿ ಮಾಡುವ ಬಗ್ಗೆ ದೂರುಗಳು ಬರುತ್ತಿವೆ. ಹಣ ಕೇಳಿದರೆ ಅವರ ಬಗ್ಗೆ ದೂರು ನೀಡಿ ಎಂದು ಖಾದರ್ ತಿಳಿಸಿದರು.

11 ಇ ವಿಲೇ ಆಗುತ್ತಿಲ್ಲ 

ದರ್ಖಾಸು, ಪೋಡಿ ನೆಪದಲ್ಲಿ 11ಇ ಅರ್ಜಿಗಳನ್ನೇ ವಿಲೇವಾರಿ ಮಾಡಿಲ್ಲ ಎಂದು ಜಿಲ್ಲಾ ಕೆಡಿಪಿ ಸದಸ್ಯ ಹಮೀದ್ ಕಿನ್ಯ ಆರೋಪಿಸಿದರು. ನಾವು 400 ದರ್ಖಾಸ್ ಪೋಡಿ ಮಾಡಿದ್ದಾಗಿ ಸರ್ವೇಯರ್ ತಿಳಿಸಿದರು. ಜಿಲ್ಲೆಯಲ್ಲಿ ಹತ್ತು ಸಾವಿರ ಮಾಡಿದ್ದಾರೆ. ನೀವು 400ರಲ್ಲೇ ಇದ್ದೀರಿ ಎಂದು ಖಾದರ್ ಅಸಮಾಧಾನ ವ್ಯಕ್ತಪಡಿಸಿದರು. 11ಇಯ 600 ಅರ್ಜಿಗಳು ಬಾಕಿಯಿವೆ. ತಹಸೀಲ್ದಾರ್ ಮಂಜೂರು ಮಾಡಿದ 100 ಪೋಡಿ ಕಡತ ಬಾಕಿಯಿದೆ ಎಂದು ಸರ್ವೇಯರ್ ತಿಳಿಸಿದರು. ಮುನ್ನೂರು ಸ.ನಂ.55ರಲ್ಲಿ ಒಂದು ಎಕರೆ ಖಬರಸ್ತಾನದ ಜಾಗ ಸರ್ವೇ ಮಾಡುವಾಗ ಅಡ್ಡಿಪಡಿಸಲಾಗುತ್ತಿದೆ. ಈ ನಿಟ್ಟಿನಲ್ಲಿ ಪೊಲೀಸರನ್ನಿಟ್ಟು ಸರ್ವೇ ಮಾಡಿಸಿ ಎಂದು ಗ್ರಾ.ಪಂ. ಮಾಜಿ ಅಧ್ಯಕ್ಷ ವಿಲ್ಫೆಡ್ ಮನವಿ ಮಾಡಿದರು.

ಸ್ವಚ್ಛತಾ ಚರ್ಚೆಗೆ ಮೊದಲ ಆದ್ಯತೆ ನೀಡಿ

ಉಳ್ಳಾಲ ತಾಲೂಕು ಕಸಮುಕ್ತ, ಸ್ವಚ್ಛ ಮಾದರಿ ತಾಲೂಕು ಮಾಡಲು ಅವಕಾಶ ಇದೆ. ಮುಂದಿನ ತ್ರೈಮಾಸಿಕ ಸಭೆಗೆ ಮೊದಲು ಬಯಲು ಕಸಮುಕ್ತಗೊಳಿಸಲು ಸರಳ ಉಪಾಯ ಇದೆ. ಮಣ್ಣು, ನೀರು, ಗಾಳಿ ವಿಷ ಆಗಿ ಕಿಡ್ನಿ, ಮೆದುಳಿಗೂ ಕಾಯಿಲೆ ಬಂದಿದೆ. ಈಗಲೂ ಎಚ್ಚೆತ್ತುಕೊಳ್ಳದಿದ್ದರೆ ಜಿಲ್ಲೆಗೆ ಕ್ಯಾನ್ಸರ್ ಹರಡುವ ಭೀತಿ ಇದೆ. ಚರಂಡಿಯಲ್ಲಿ ಪ್ಯಾಡ್, ಕಸ ತುಂಬಿ ಕೃತಕ ನೆರೆ ಬರುತ್ತಿದೆ. ಜೀವಸಂಕುಲ, ಪರಿಸರ ಸಂರಕ್ಷಣೆ ವಿಷಯ ಆಗಿರುವುದರಿಂದ ಮುಂದಿನ ಕೆಡಿಪಿ ಸಭೆಯಲ್ಲಿ ಸ್ವಚ್ಛತೆ ವಿಷಯದ ಚರ್ಚೆಗೆ ಮೊದಲ ಆದ್ಯತೆ ನೀಡಬೇಕು ಎಂದು ಜಿಲ್ಲಾ ಸ್ವಚ್ಛತಾ ರಾಯಭಾರಿ ಶೀನ ಶೆಟ್ಟಿ ಮನವಿ ಮಾಡಿದರು.

ಫಲಾನುಭವಿಗಳಿಗೆ ಹಕ್ಕುಪತ್ರ ವಿತರಿಸಲಾಯಿತು. ಮೂಡಾ ಅಧ್ಯಕ್ಷ ಸದಾಶಿವ ಉಳ್ಳಾಲ್, ನಗರಭಾಧ್ಯಕ್ಷೆ ಶಶಿಕಲಾ, ತಹಸೀಲ್ದಾರ್ ಪುಟ್ಟರಾಜು ಡಿ.ಎ, ತಾಲೂಕು ಮುಖ್ಯಕಾರ್ಯನಿರ್ವಹಣಾಧಿಕಾರಿ ಗುರುದತ್, ಮಂಗಳೂರು ಸಹಾಯಕ ಆಯುಕ್ತ ಹರ್ಷವರ್ಧನ್, ಕೆಡಿಪಿ ಜಿಲ್ಲಾ ಸದಸ್ಯ ಹಮೀದ್ ಕಿನ್ಯ, ಗ್ಯಾರಂಟಿ ಸಮಿತಿ ಅಧ್ಯಕ್ಷ ರಫೀಕ್ ಅಂಬ್ಲಮೊಗರು, ಜಿಲ್ಲಾ ಉಪಾಧ್ಯಕ್ಷೆ ಸುರೇಖಾ ಚಂದ್ರಹಾಸ, ವಿವಿಧ ಇಲಾಖೆಯ ಅಧಿಕಾರಿಗಳು, ಜನಪ್ರತಿನಿಧಿಗಳು ಉಪಸ್ಥಿತರಿದ್ದರು.

ಡ್ರಗ್ಸ್ ಆರೋಪಿಗಳ ಬಾಯ್ಬಿಡಿಸಿ

ಡ್ರಗ್ಸ್ ಪ್ರಕರಣದಲ್ಲಿ ಬಂಧಿತರಾದವರನ್ನು ತನಿಖೆ ಮಾಡಿ ಅವರಿಗೆ ಡ್ರಗ್ಸ್ ಎಲ್ಲಿಂದ ಬಂತು? ಯಾರೆಲ್ಲಾ ವಿದ್ಯಾರ್ಥಿಗಳಿಗೆ ಮಾರಾಟ ಮಾಡಿದ್ದಾರೆ ಎನ್ನುವುದನ್ನು ಬಾಯ್ಬಿಡಿಸಿ. ಕೇವಲ ಪೊಲೀಸಿಂಗ್ ಮಾತ್ರ ಸಾಲದು. ಪಾಲಕರನ್ನು ಕರೆಸಿ ಜಾಗೃತಿ ಮೂಡಿಸಿ. ಹಳೇವಾರಂಟ್‌ಗಳಿಗೆ ಸಂಬಂಧಿಸಿ ಪಕ್ಕಾ ರೌಡಿಗಳು, ಕ್ರಿಮಿನಲ್‌ಗಳನ್ನು ಬಂಧಿಸಿ. ಸಣ್ಣಪುಟ್ಟ ಕೇಸುಗಳ ವಾರಂಟ್ ಇದ್ದರೆ ಮನೆಗೆ ಹೋಗುವ ಬದಲು ಮಾಹಿತಿ ನೀಡಿ. ಕಳ್ಳರು ಮತ್ತು ಒಳ್ಳೆಯವರನ್ನು ಒಂದೇ ಕಡೆ ಕೂರಿಸಬೇಡಿ ಎಂದು ಖಾದರ್ ಪೊಲೀಸ್ ಇಲಾಖೆಗೆ ಸಲಹೆ ನೀಡಿದರು.

ಲೈನ್‌ಮನ್ ಹೊಡೆಯಲು ಬರ್ತಾರೆ?

ನಡುಪದವಿನಲ್ಲಿರುವ ಲೈನ್‌ಮನ್ ರೋಹಿತ್ ಎಂಬುವರ ಉಲ್ಟಾ ಮಾತನಾಡುತ್ತಾರೆ. ಹೊಡೆಯಲೂ ಬರುತ್ತಾರೆ. ಇತ್ತೀಚೆಗೆ ಮಹಿಳೆಯರ ಬಳಿ ಬಂದು ಬೊಬ್ಬೆ ಹಾಕಿದ್ದು ಬಳಿಕ ನಾವೇ ಕಳಿಸಿಕೊಟ್ಟಿದ್ದೇವೆಂದು ಬಾಳೆಪುಣಿ ಗ್ರಾ.ಪಂ. ಉಪಾಧ್ಯಕ್ಷ ಶರೀಫ್ ನಡುಪದವು ಆರೋಪಿಸಿದರು. ಮೆಸ್ಕಾಂನವರು ರಾತ್ರಿ ಹೊತ್ತು ಕರೆ ಸ್ವೀಕರಿಸದಿರುವ ಕಾರಣ ಏನು? ಹಲವರು ಕೆಲವು ಬಾರಿ ಕರೆ ಮಾಡಿದರೂ ಸ್ವೀಕರಿಸದ ಕಾರಣ ಕಚೇರಿಗೆ ಹೋಗಿದ್ದಾರೆ. ಮಳೆಗಾಲದಲ್ಲಿ ಕರೆಯನ್ನೇಕೆ ಸ್ವೀಕರಿಸುವುದಿಲ್ಲ ಎಂದು ನಗರಸಭಾಧ್ಯಕ್ಷೆ ಶಶಿಕಲಾ ದೂರಿದರು.