ಜಿಲ್ಲೆ

Ulavi Jatra ಫೆ.13 ರಂದು ಉಳವಿ ಮಹಾ ರಥೋತ್ಸವ, 4 ಲಕ್ಷ ಭಕ್ತರ ನಿರೀಕ್ಷೆ

Uttara Kannada - Subash Hegde

ಕಾರವಾರ: ಈ ಬಾರಿ ಉಳವಿ ಜಾತ್ರೆಗೆ (Ulavi Jatra) 4 ಲಕ್ಷಕ್ಕೂ ಹೆಚ್ಚಿನ ಜನ ಸೇರುವ ನಿರೀಕ್ಷೆ ಇದ್ದು, ಅದಕ್ಕಾಗಿ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ ಎಂದು ಉಳವಿ ಟ್ರಸ್ಟ್ ಕಮಿಟಿಯ ಅಧ್ಯಕ್ಷ ಸಂಜಯ ಬಸವರಾಜ ಕಿತ್ತೂರು ತಿಳಿಸಿದರು.

ಆಮಂತ್ರಣ ಪತ್ರಿಕೆ ಬಿಡುಗಡೆ ಮಾಡಿ, ಮಾತನಾಡಿದ ಅವರು, ರಥ ಮಹಾ ಪೂಜೆಯೊಂದಿಗೆ ಸೋಮವಾರದಿಂದ ಜಾತ್ರೆಗೆ ಚಾಲನೆ ದೊರಕಿದೆ.

ಫೆ.13 ರಂದು ಮಹಾ ರಥೋತ್ಸವ ನಡೆದು, 15 ರಂದು ಓಕುಳಿಯೊಂದಿಗೆ ಜಾತ್ರೆ ಮುಕ್ತಾಯಗೊಳ್ಳಲಿದೆ.

ಉತ್ತರ ಕರ್ನಾಟಕ ಭಾಗದಿಂದ ರೈತರು ತಮ್ಮ ಚಕ್ಕಡಿಯಲ್ಲಿ ಬರುವುದು ಜಾತ್ರೆಯ ವಿಶೇಷ. ಸುಮಾರು 2 ಸಾವಿರ ಚಕ್ಕಡಿ ಬರಬಹುದು ಎಂದು ಅಂದಾಜಿಸಲಾಗಿದೆ.

ಚಕ್ಕಡಿ ನಿಲ್ಲಿಸಲು ಶಾಸಕ ಆರ್.ವಿ.ದೇಶಪಾಂಡೆ, ಎಂಎಲ್‌ಸಿ ಗಣಪತಿ ಉಳ್ವೇಕರ್ ಅವರ ಸಹಕಾರದಲ್ಲಿ ಪಾರ್ಕಿಂಗ್ ವ್ಯವಸ್ಥೆ ಮಾಡಲಾಗಿದೆ. 1.5 ಕೋಟಿ ರೂ. ವೆಚ್ಚದಲ್ಲಿ ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಗಿದೆ. ಪಶು ವೈದ್ಯರ ನೇಮಕ ಮಾಡಲಾಗುತ್ತಿದೆ.

ಜಾನುವಾರುಗಳಿಗೆ ನೀರು, ಮೇವಿನ ವ್ಯವಸ್ಥೆ ಕಲ್ಪಿಸಲಾಗಿದೆ. ಎಸಿ ಅಧ್ಯಕ್ಷತೆಯಲ್ಲಿ 2 ಸಭೆಗಳನ್ನು ನಡೆಸಿ, ಪೊಲೀಸ್, ಅರಣ್ಯ, ಕಂದಾಯ ಸೇರಿ ಸಂಬಂಧಪಟ್ಟ ಇಲಾಖೆಗಳ ಸಹಕಾರ ಕೋರಲಾಗಿದೆ ಎಂದರು.

ಸ್ವಚ್ಛತೆಗೆ ಕ್ರಮ ವಹಿಸಲಾಗಿದ್ದು, ಸಂಚಾರಿ ಶೌಚಗೃಹಹಳನ್ನು ಒದಗಿಸಲಾಗಿದೆ. ಎಂಎಲ್‌ಸಿ ಗಣಪತಿ ಉಳ್ವೇಕರ್, ಸದಸ್ಯ ವೀರೇಶ ಕಂಬಳಿ, ಉಳವಿ ಗ್ರಾಪಂ ಅಧ್ಯಕ್ಷ ಮಂಜುನಾಥ ಮುಕಾಶಿ ಇದ್ದರು.

Ulavi Jatra ಕುದುರೆ ಗಾಡಿ ತರಬೇಡಿ

ಕರೋನಾ ಕಾಲದಲ್ಲಿ ಜನಸಂಖ್ಯೆ ಕಡಿಮೆಯಾಗಿತ್ತು. ಕಳೆದ ವರ್ಷ ಜಾನುವಾರುಗಳ ಗಂಟು ರೋಗದಿಂದ ಗಾಡಿಗಳ ಸಂಖ್ಯೆ ಕಡಿಮೆ ಬಂದಿತ್ತು. ಈ ವರ್ಷ ಮತ್ತೆ ಹೆಚ್ಚಿನ ಸಂಖ್ಯೆಯಲ್ಲಿ ಎತ್ತಿನ ಗಾಡಿಗಳು ಬರುವ ನಿರೀಕ್ಷೆ ಇದೆ.

ಮೊದಲಿನಿಂದಲೂ ಎತ್ತಿನ ಗಾಡಿ ತರುವುದು ಸಂಪ್ರದಾಯ. ಕುದುರೆ ಗಾಡಿಗಳನ್ನು ತರುವುದನ್ನು ನಿಷೇಧಿಸಲಾಗಿದೆ. ಗಾಡಿಗೆ ರೇಡಿಯಂ ಹಚ್ಚಿಕೊಂಡು ಬರುವುದನ್ನು ಕಡ್ಡಾಯಗೊಳಿಸಲಾಗಿದೆ ಎಂದು ದೇವಸ್ಥಾನದ ಪ್ರಧಾನ ಅರ್ಚಕ ಶಂಕ್ರಯ್ಯ ಕಲ್ಮಠ ತಿಳಿಸಿದರು.

Ulavi Jatra ಜಾತ್ರಾ ಕಾರ್ಯಕ್ರಮಗಳು

  • *ಫೆ.5 ಅಷ್ಟಮಿ ಪಲ್ಲಕ್ಕಿ ಉತ್ಸವ
  • *ಫೆ.6 ಸಾಯಂಕಾಲ ಭೂಮಿ ಪೂಜೆ, ನವಧಾನ್ಯ ಹಾಕುವುದು
  • *ಫೆ.7 ಹುಂಡಿಗಳ ಪೂಜೆ, ಉತ್ಸವ ಮೂರ್ತಿ ಪ್ರತಿಷ್ಠಾಪನೆ
  • *ಫೆ.8 ರಕ್ಷಾ ದೇವಿ ಸಣ್ಣ ರಥೋತ್ಸವ
  • *ಫೆ.9 ವೀರಭದ್ರೇಶ್ವರ ಸಣ್ಣ ರಥೋತ್ಸವ
  • *ಫೆ.10 ಎತ್ತಿಕಾಯಿ ಬಸಣ್ಣ ರಥೋತ್ಸವ
  • *ಫೆ.11 ದೇವಾನು ದೇವತೆಗಳ ಸಣ್ಣ ರಥೋತ್ಸವ
  • *ಫೆ 12 ರ ರಾತ್ರಿ ಚೆನ್ನ ಬಸವೇಶ್ವರ ರಥೋತ್ಸವ
  • *ಫೆ.13 ರ ಸಂಜೆ 4 ಗಂಟೆಗೆ ಮಹಾ ರಥೋತ್ಸವ
  • *ಫೆ.15 ಓಕುಳಿ ಸಣ್ಣ ರಥೋತ್ಸವ