ಮಂಗಳೂರು: ಉಳಾಯಿಬೆಟ್ಟು ಕಾಯರ್‌ಪದವು ನಿವಾಸಿ, ಪಿಡಬ್ಲುೃಡಿ ಗುತ್ತಿಗೆದಾರ ಪದ್ಮನಾಭ ಕೋಟ್ಯಾನ್ ಅವರ ಮನೆ ದರೋಡೆ ಹಾಗೂ ಮಾರಣಾಂತಿಕ ಹಲ್ಲೆ ಪ್ರಕರಣಕ್ಕೆ ಸಂಬಧಿಸಿ ಮಂಗಳೂರು ಗ್ರಾಮಾಂತರ ಪೊಲೀಸರು ಮತ್ತೆ ಮೂವರು ಆರೋಪಿಗಳನ್ನು ಬಂಧಿಸಿದ್ದು, ಈ ಮೂಲಕ ಬಂಧಿತರ ಸಂಖ್ಯೆ 13ಕ್ಕೆ ಏರಿಕೆಯಾಗಿದೆ.
ಕೇರಳ ತ್ರಿಶೂರ್ ನಿವಾಸಿಗಳಾದ ಡೆವಿನ್, ಗಾಡ್ವಿನ್, ಅಮಲ್‌ಕೃಷ್ಣ ಬಂಧಿತ ಆರೋಪಿಗಳು. ಈ ಪ್ರಕರಣದಲ್ಲಿ ಉಪ್ಪಳ ಬಾಲಕೃಷ್ಣ ಶೆಟ್ಟಿ, ಪೆರುವಾಯಿ ರೇಮಂಡ್ ಡಿಸೋಜ, ನೀರುಮಾರ್ಗ ನಿವಾಸಿಗಳಾದ ರಮೇಶ್, ವಸಂತ್ ಕುಮಾರ್, ತಿರುವನಂತಪುರ ಜಾನ್‌ಬಾಸ್ಕೋ, ತ್ರಿಶೂರ್ ಶಿಜೋ ದೇವಸಿ, ಸತೀಶ್ ಬಾಬು, ಶಾಕೀರ್ ಹುಸೇನ್, ಸಜೀಶ್ ಎಂ., ವಿನೋಜ್ ಪಿ.ಕೆ., ಕಾರು ಚಾಲಕ ಬಿಪಿನ್‌ರಾಜ್ ಎಂಬವರನ್ನು ಈ ಹಿಂದೆಯೇ ಬಂಧಿಸಲಾಗಿತ್ತು. ಬಂಧಿತ ಆರೋಪಿಗಳಲ್ಲಿ ಮೂವರು ದ.ಕ. ಜಿಲ್ಲೆಯವರಾದರೆ, ಉಳಿದ 11ಮಂದಿ ಕೇರಳದವರಾಗಿದ್ದಾರೆ.
ಚಿನ್ನಾಭರಣ, ನಗದು ವಶಕ್ಕೆ: ಕೇರಳ ತ್ರಿಶೂರ್‌ನಿಂದ ಬಂಧಿಸಲಾದ ಮೂವರು ಆರೋಪಿಗಳಿಂದ ಚಿನ್ನಾಭರಣ, ನಗದು ವಶಪಡಿಸಿಕೊಳ್ಳಲಾಗಿದೆ. ಇನ್ನು ಮೂವರು ಆರೋಪಿಗಳ ಬಂಧನ ಬಾಕಿಯಿದ್ದು, ಅವರಿಂದ ಹೆಚ್ಚುವರಿ ಸೊತ್ತು, ನಗದು ವಶಪಡಿಸಲು ಬಾಕಿಯಿದೆ.
ಪ್ರಕರಣದ ಹಿನ್ನೆಲೆ: ಜೂನ್ 21ರಂದು ರಾತ್ರಿ 8 ಗಂಟೆ ಸುಮಾರಿಗೆ ಪದ್ಮನಾಭ ಕೋಟ್ಯಾನ್ ಅವರ ಮನೆಗೆ ಮುಸುಕುಧಾರಿಗಳ ತಂಡ ಏಕಾಏಕಿ ನುಗ್ಗಿ, ಪದ್ಮನಾಭ ಕೋಟ್ಯಾನ್ ಅವರಿಗೆ ಹಲ್ಲೆ ನಡೆಸಿ, ಮನೆಯವರನ್ನು ಹೆದರಿಸಿ ನಗದು, ಚಿನ್ನಾಭರಣ ದರೋಡೆ ಮಾಡಿ ತೆರಳಿತ್ತು. ಗಾಯಗೊಂಡಿದ್ದ ಪದ್ಮನಾಭ ಕೋಟ್ಯಾನ್ ಅವರು ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದಿದ್ದರು. ಪೊಲೀಸರು ವಿವಿಧ ಆಯಾಮಗಳಿಂದ ತನಿಖೆ ನಡೆಸಿ, ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದರು.