ತುಮಕೂರು : ಯುದ್ಧದ ಕಾರ್ಮೋಡ ಸರಿದು, ನಮ್ಮ ಭವಿಷ್ಯ ಬೆಳಗುವಂತಾಗಲಿ..ಹೀಗೆಂದು ದೇವರಲ್ಲಿ ಪ್ರಾರ್ಥಿಸುವ ರೇಖಾಗೆ ತಾಯ್ನಡಿಗೆ ಸುರಕ್ಷಿತವಾಗಿ ಮರಳಿದ್ದಕ್ಕಿಂತ ಭವಿಷ್ಯದ ಚಿಂತೆಯೇ ಕಾಡಲಾರಂಭಿಸಿದೆ. ಯೂಕ್ರೇನ್ ಯುದ್ಧಪೀಡಿತ ಭೂಮಿಯಿಂದ ಭಾರತೀಯ ವಿದ್ಯಾರ್ಥಿಗಳ ತಂಡದಲ್ಲಿ ಜಿಲ್ಲೆಯ ರೇಖಾ ಸೇರಿ 13 ಕನ್ನಡಿಗ ವಿದ್ಯಾರ್ಥಿಗಳು ಸುರಕ್ಷಿತವಾಗಿ ಭಾನುವಾರ ದೆಹಲಿ ತಲುಪಿದ್ದರು. ಅಲ್ಲಿಂದ ಬೆಂಗಳೂರು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ರಾತ್ರಿ ಬಂದಿಳಿದಿದ್ದಾರೆ. ತುಮಕೂರಿನ ಅಶೋಕನಗರ ನಿವಾಸಿ ಧನರಾಜ್-ಧನಲಕ್ಷ್ಮೀ ದಂಪತಿ ಪುತ್ರಿ ರೇಖಾ ಮನೆ ತಲುಪುವ ಹೊತ್ತಿಗೆ ಮಧ್ಯರಾತ್ರಿಯಾಗಿತ್ತು.
ಯುದ್ಧದಿಂದ ಆತಂಕ ಎದುರಾಗಿತ್ತು. ಮಗಳು ಮನೆಗೆ ಹಿಂದಿರುಗಿದ ಬಳಿಕ ಖುಷಿ ಆಗಿದೆ. ಆದರೆ, ಮುಂದಿನ ವಿದ್ಯಾಭ್ಯಾಸದ ಬಗ್ಗೆ ಯೋಚನೆ ಶುರುವಾಗಿದೆ. ಆಕೆಯ ಭವಿಷ್ಯ ನಮ್ಮ ಕಣ್ಮುಂದೆ ಬಂದು ನಿಂತಿದೆ ಎನ್ನುತ್ತಾರೆ ರೇಖಾ ತಾಯಿ ಧನಲಕ್ಷ್ಮೀ.
ಯುದ್ಧದ ಕಾರ್ಮೋಡ ಸರಿಯಲಿ... : ಬುಕೋವಿನಿಯನ್ ಸ್ಟೇಟ್ ಮೆಡಿಕಲ್ ಯುನಿವರ್ಸಿಟಿ (ಬಿಎಸ್‌ಎಂಯು)ಯಲ್ಲಿ ದ್ವಿತೀಯ ಸೆಮಿಸ್ಟರ್ ಓದುತ್ತಿರುವ ರೇಖಾಗೆ ಯೂಕ್ರೇನ್ ವಿರುದ್ಧ ರಷ್ಯಾ ಯುದ್ಧ ಆರಂಭಿಸಿರುವುದು ಪಾಲಕರಿಂದ ತಿಳಿದಿದೆ. ರುಮೇನಿಯಾ ಗಡಿಭಾಗಕ್ಕೆ 35 ಕಿ.ಮೀ., ದೂರದ ಕಾಲೇಜಿನ ಹಾಸ್ಟೆಲ್‌ನಲ್ಲೇ ಇದ್ದ ರೇಖಾ ತನ್ನ ಸಹಪಾಠಿಗಳ ಜತೆಗೆ ಭಾರತೀಯ ರಾಯಭಾರ ಕಚೇರಿ ಆದೇಶದಂತೆ ಶುಕ್ರವಾರ ರಾತ್ರಿ ಬಸ್ ಮೂಲಕ ವಿಮಾನ ನಿಲ್ದಾಣ ತಲುಪಿ ಅಲ್ಲಿಂದ ದೆಹಲಿಗೆ ಸುರಕ್ಷಿತವಾಗಿ ಬಂದಿಳಿದಿದ್ದಾರೆ. ಯೂಕ್ರೇನ್‌ನಲ್ಲಿ ಯುದ್ಧ ಕಾರ್ಮೋಡ ಸರಿದು, ನಮ್ಮ ಭವಿಷ್ಯ ಬೆಳಗುವಂತಾಗಲಿ.. ಮಾರ್ಚ್ 11ರವರೆಗೆ ಕಾಲೇಜಿಗೆ ರಜೆ ಘೋಷಿಸಲಾಗಿದೆ. ಮತ್ತೆ ತರಗತಿಗಳು ಆರಂಭವಾಗಲಿ ಎಂದು ದೇವರಲ್ಲಿ ಪ್ರಾರ್ಥಿಸುವುದೊಂದೇ ನಮಗೆ ಉಳಿದಿರುವ ದಾರಿ ಎನ್ನುತ್ತಾರೆ ರೇಖಾ.