ಜಿಲ್ಲೆ

ಉತ್ತರ ಕರ್ನಾಟಕ ಅಭಿವೃದ್ಧಿ ಚಿಂತನ ಮಂಥನ ಸಭೆ, ಮುಖಂಡರಿಂದ ಅಭಿಪ್ರಾಯ ಸಂಗ್ರಹ

Dharwada - Basavaraj Idli

ಹುಬ್ಬಳ್ಳಿ: ಉತ್ತರ ಕರ್ನಾಟಕ ಅಭಿವೃದ್ಧಿ ಕುರಿತು ಅನೇಕ ಸಲಹೆ ಸೂಚನೆಗಳನ್ನು ಒಗ್ಗೂಡಿಸಲಾಗಿದೆ, ಅಭಿವೃದ್ಧಿ ದೃಷ್ಟಿಯಿಂದ ಬೆಂಗಳೂರು ದಕ್ಷಿಣ- ಉತ್ತರವೆಂದು ಹೇಗೆ ವಿಭಾಗ ಮಾಡಿದ್ದಾರೋ ಹಾಗೆಯೇ ಉತ್ತರ ಕರ್ನಾಟಕ ಯಾಕಾಗಬಾರದು? ಎಂಬ ಅಭಿಪ್ರಾಯಗಳು ವಿವಿಧ ಸಂಘ- ಸಂಸ್ಥೆಗಳ ಮುಖಂಡರಿಂದ ವ್ಯಕ್ತವಾದವು.

ಇಲ್ಲಿಯ ಖಾಸಗಿ ಹೋಟೆಲ್ ನಲ್ಲಿ ಭಾನುವಾರ ಉತ್ತರ ಕರ್ನಾಟಕ ಅಭಿವೃದ್ಧಿ ಸಲುವಾಗಿ ಏರ್ಪಡಿಸಿದ್ದ ವಿವಿಧ ಸಂಘ ಸಂಸ್ಥೆಗಳ ರಾಜ್ಯ ಮಟ್ಟದ ಚಿಂತನ ಮಂಥನ ಸಭೆಯಲ್ಲಿ ಮಾತನಾಡಿದ ಅನೇಕರು ಸಲಹೆ ಸೂಚನೆಗಳನ್ನು ನೀಡಿದರು.

ಸಂಘಟಕರ ಪರವಾಗಿ ಮಾತನಾಡಿದ ವೀರೇಶ ಬಿರಾದಾರ ಅವರು, ಮೊದಲಿನಂತೆ ಪ್ರತಿಭಟನೆ, ಹೋರಾಟಕ್ಕೆ ಇಳಿಯುವ ಬದಲು ಸ್ಮಾರ್ಟ್ ದಾರಿಯಲ್ಲಿ ನಮ್ಮ ಅಭಿಪ್ರಾಯ ಮಂಡಿಸೋಣ, ತಳಮಟ್ಟದಿಂದ ಸಂಘಟನೆ ಮಾಡಬೇಕಾಗಿದೆ. ಇದಕ್ಕಾಗಿ ಪ್ರತಿ ಹಳ್ಳಿಗೂ ಭೇಟಿ ನೀಡಿ ಒಟ್ಟಾಭಿಪ್ರಾಯ ಸಂಗ್ರಹಿಸೋಣ, ಉತ್ತರ ಕರ್ನಾಟಕಕ್ಕೆ ಆಗಿರುವ ಅನ್ಯಾಯದ ಬಗ್ಗೆ ಜಾಗೃತಿ ಮೂಡಿಸೋಣ, ನಂತರವೇ ಮುಂದಡಿ ಇಡೋಣ ಎಂದು ತಿಳಿಸಿದರು.

ಇದಕ್ಕೂ ಮೊದಲು ಅಭಿಪ್ರಾಯ ತಿಳಿಸಿದ ಅನೇಕರು, ಅಧಿಕಾರ ವಿಕೇಂದ್ರಿಕರಣಕ್ಕೆ ಆದ್ಯತೆ ನೀಡಬೇಕು. ಇಲ್ಲದೇ ಹೋದರೆ ಪ್ರತ್ಯೇಕ ರಾಜ್ಯದ ಕೂಗು ಬಲಗೊಳ್ಳುತ್ತದೆ. ರಾಜಕಾರಣಿಗಳಲ್ಲಿ ಇಚ್ಚಾಶಕ್ತಿಯ ಕೊರತೆಯಿಂದಾಗಿ ನಾವೆಲ್ಲ ತೊಂದರೆ ಅನುಭವಿಸಬೇಕಾಗಿದೆ. ಬಹು ಮುಖ್ಯವಾಗಿ ಸರ್ಕಾರಿ ಕಚೇರಿಗಳನ್ನು ಈ ಭಾಗಕ್ಕೆ ಸ್ಥಳಾಂತರ ಮಾಡಬೇಕು. ಉತ್ತರ ಕರ್ನಾಟಕಕ್ಕೆ ಬಜೆಟ್ ನಲ್ಲಿ ಪ್ರತ್ಯೇಕ ಪ್ಯಾಕೇಜ್ ಘೋಷಣೆ ಮಾಡಬೇಕು ಎಂದು ಆಗ್ರಹಿಸಿದರು.

ಮೆಕ್ಯಾನಿಕಲ್ ಇಂಜಿನಿಯರ್ ಗುರುದೇವ ಬಿ. ಮಾತನಾಡಿ, ಕರ್ನಾಟಕ ಏಕೀಕರಣಕ್ಕೆ ಮೌಲ್ಯ ಬರಬೇಕಾದರೆ ರಾಜ್ಯದ ಎಲ್ಲ ಕನ್ನಡಿಗರಿಗೆ ಸಮಾನ ಅವಕಾಶ ಸಿಗಬೇಕು. ಉತ್ತರ ಕರ್ನಾಟಕದವರನ್ನು ಮಲತಾಯಿ ಮಕ್ಕಳಂತೆ ಕಾಣಬಾರದು. ಇಲ್ಲಿನ ಜನರನ್ನು ಕೇವಲ ವೋಟ್ ಬ್ಯಾಂಕ್ ಆಗಿ ಬಳಸಬಾರದು ಎಂದರು.

ಕನ್ನಡ ಹೋರಾಟಗಾರ ಸಂಜೀವ ದುಮಕನಾಳ, ಹೋರಾಟಗಾರರಲ್ಲಿ ಬದ್ಧತೆ ಬೇಕು, ಪ್ರತ್ಯೇಕತೆಯ ಬದಲು ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ ಬಗ್ಗೆ ಚಿಂತನೆ ನಡೆಯಲಿ ಎಂದರು.

ಸಂಜಯ ಡಿ.ಕೆ. ಮಾತನಾಡಿ, ಹೋರಾಟಗಾರರ ವಾಟ್ಸಪ್ ಗ್ರುಪ್ ಮಾಡಬೇಕು, ನಿರಂತರತೆ ಇರಬೇಕು. ತನು ಮನ ಧನದೊಂದಿಗೆ ಈ ಭಾಗದವರು ಭಾಗಿಯಾಗಬೇಕು ಎಂದರು.

ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬೇಕಾದರೆ ಶಾಲೆ ಮಟ್ಟದಿಂದ ಬದಲಾವಣೆ ತರಬೇಕು. ಇದಕ್ಕಾಗಿ ಮಕ್ಕಳಲ್ಲಿ ಜಾಗೃತಿ ಮೂಡಿಸಬೇಕು, ಪ್ರಶ್ನಿಸುವ ಗುಣ ಬೆಳೆಸಬೇಕು ಎಂದು ಕೆಲವರು ಸೂಚಿಸಿದರು.

ಸಂಘಟಕ ಶರಣು ಪಾಟೀಲ ಮಾತನಾಡಿ, ಉತ್ತರ ಕರ್ನಾಟಕ ಭಾಗದ 13 ಜಿಲ್ಲೆಗಳನ್ನು ಸಂಪರ್ಕಿಸಬೇಕಾಗಿದೆ. ಇದಕ್ಕಾಗಿ ನಾಲ್ಕು ತಿಂಗಳು ಎಲ್ಲ ಕಡೆ ಸಂಚಾರ ಮಾಡಿ ಸಂಘಟನೆ ಬಲಗೊಳಿಸಬೇಕು. ಮುಂದಿನ ದಿನಗಳಲ್ಲಿ ಉಕ ಅಭಿವೃದ್ಧಿಗಾಗಿ ಪ್ರಾಜ್ಞರು, ವಕೀಲರು, ನಿವೃತ್ತ ನ್ಯಾಯಾಧೀಶರು, ಶಿಕ್ಷಣ ತಜ್ಞರು ಎಲ್ಲರೂ ಕೈಜೋಡಿಸಲಿದ್ದಾರೆ. ಮುಂದಿನ ಹೋರಾಟ ವಿಭಿನ್ನವಾಗಿ ಇರಲಿದೆ. ಹಳ್ಳಿಯಿಂದ ದೆಹಲಿಯವರೆಗೂ ದೊಡ್ಡ ಮಟ್ಟದ ಸಭೆಗಳು ನಡೆಯಲಿವೆ ಎಂದು ಮಾಹಿತಿ ನೀಡಿದರು.

ಮುಖಂಡರಾದ ಮಂಜುನಾಥ ಹೆಬಸೂರ, ಮಲ್ಲಿನಾಥ ಕಂಠಿ, ಕುಂದಗೋಳದ ಪ್ರಕಾಶಗೌಡ ಪಾಟೀಲ, ಸಂತೋಷ ಹಿರೇಮಠ, ಕಿರಣ ಬರಾಡೆ, ರೈತ ಹೋರಾಟಗಾರ ಸಿದ್ದು ತೇಜಿ, ರಾಜಶೇಖರ, ಶಶಿಕಾಂತ ಹೊಂಬಳ, ರಮೇಶ, ಮಂಜುನಾಥ ಪೂಜಾರಿ, ಉಮೇಶ ಪಾಟೀಲ, ಜಿ.ಬಿ. ಹೂಗಾರ, ಮಲ್ಲಿಕಾರ್ಜುನ ಕಿರೇಸೂರ, ಇತರರು ಇದ್ದರು.