ವಿಜಯವಾಣಿ ಸುದ್ದಿಜಾಲ ಬೆಳ್ತಂಗಡಿ
ಉಜಿರೆಯಲ್ಲಿ ಸ್ವಚ್ಛತೆ ಸಮಸ್ಯೆ ಇದ್ದು ಸಾರ್ವಜನಿಕರ ಸಹಕಾರ ಅಗತ್ಯವಿದೆ. ಉಜಿರೆ ತ್ಯಾಜ್ಯ ಘಟಕ ಆದಾಯದ ಮೂಲವಾಗಿದ್ದು, ರಾಜ್ಯವೇ ಗುರುತಿಸಿದೆ ಎಂದು ಉಜಿರೆ ಗ್ರಾ.ಪಂ ಅಧ್ಯಕ್ಷೆ ಉಷಾ ಕಿರಣ ಕಾರಂತ್ ಎ.ಕೆ. ತಿಳಿಸಿದರು.
ಮಂಗಳವಾರ ಶಾರದಾ ಮಂಟಪದಲ್ಲಿ ನಡೆದ ಉಜಿರೆ ಪಂಚಾಯಿತಿ ಗ್ರಾಮಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಉಜಿರೆ ಪೇಟೆಯಲ್ಲಿ ವ್ಯವಸ್ಥಿತ ಪಾರ್ಕಿಂಗ್ ವ್ಯವಸ್ಥೆ ಇಲ್ಲ. ರಸ್ತೆ ಬದಿ ಹಲವು ಅಕ್ರಮ ಕಟ್ಟಡಗಳಿದ್ದು, ಅವುಗಳನ್ನು ಗುರುತಿಸುವ ಕಾರ್ಯ ನಡೆಯಬೇಕು ಎಂದು ಗ್ರಾಮಸ್ಥ ಬೊಳಿಂಬಿ ಸುಬ್ರಹ್ಮಣ್ಯ ಭಟ್ ಆಗ್ರಹಿಸಿದರು.
ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಪೂರ್ಣಗೊಂಡ ಕೂಡಲೇ ಶಾಶ್ವತ ವ್ಯವಸ್ಥೆ ಹಾಗೂ ಪ್ರಸ್ತುತ ತಾತ್ಕಾಲಿಕ ವ್ಯವಸ್ಥೆ ಮಾಡುವುದಾಗಿ ಪಿಡಿಒ ಉತ್ತರಿಸಿದರು. ಹೆದ್ದಾರಿ ಇಲಾಖೆಗೆ ಈಗಾಗಲೇ ಪಟ್ಟಾ ಲ್ಯಾಂಡ್ ಹಾಗೂ ಸರ್ಕಾರಿ ಜಮೀನಿನಲ್ಲಿರುವ ಮರಗಳನ್ನು ಗುರುತಿಸುವಂತೆ ತಿಳಿಸಲಾಗಿದೆ. ಆದರೆ ಈ ಕಾರ್ಯ ವಿಳಂಬವಾಗುತ್ತಿದೆ ಎಂದು ಅರಣ್ಯ ಇಲಾಖೆಯ ಅಧಿಕಾರಿ ಉತ್ತರಿಸಿದರು. ಉಜಿರೆಯಲ್ಲಿ ನಿವೇಶನ ರಹಿತರಿಗೆ ಗುರುತಿಸಲಾದ ಸರ್ಕಾರಿ ಜಾಗದಲ್ಲಿ ಮರಗಳಿದ್ದು ನಿವೇಶನ ಹಂಚಿಕೆ ತಡವಾಗುತ್ತಿದೆ ಇಲ್ಲಿರುವ ಮರಗಳನ್ನು ತೆರವುಗೊಳಿಸಲು ತಕ್ಷಣ ಅನುಮತಿ ನೀಡುವಂತೆ ಗ್ರಾಮಸ್ಥ ಶ್ರೀನಿವಾಸ್ ಆಗ್ರಹಿಸಿದರು.
ಅಡುಗೆ ಅನಿಲ ಎಲ್ಲಾ ಪ್ರದೇಶಗಳಲ್ಲಿ ಡೋರ್ ಡೆಲಿವರಿ ಮಾಡುತ್ತಿಲ.್ಲ ಹೆಚ್ಚಿನ ಮೊತ್ತ ವಸೂಲಿ ಮಾಡಲಾಗುತ್ತಿದೆ. ಈ ಬಗ್ಗೆ ಗ್ಯಾಸ್ ಕಂಪನಿಗಳಿಗೆ ಮಾಹಿತಿ ನೀಡುವುದಾಗಿ ನಿರ್ಣಯ ಕೈಗೊಳ್ಳಲಾಯಿತು. ಶಿಕ್ಷಕರಿಲ್ಲದ ಸರ್ಕಾರಿ ಶಾಲೆಗಳಲ್ಲಿ ಶಿಕ್ಷಕರನ್ನು ತುಂಬುವ ಬಗ್ಗೆ ಹಾಗೂ ಗ್ರಾ.ಪಂ ವತಿಯಿಂದ ಮಕ್ಕಳಿಗೆ ಪರೀಕ್ಷೆ ತಯಾರಿ ಬಗ್ಗೆ ತಜ್ಞರಿಂದ ಮಾಹಿತಿ ನೀಡುವಂತೆ ಆಗ್ರಹಿಸಲಾಯಿತು.
ಉಪಾಧ್ಯಕ್ಷ ರವಿಕುಮಾರ್, ಸದಸ್ಯರು ಉಪಸ್ಥಿತರಿದ್ದರು. ಪಿಡಿಒ ಪ್ರಕಾಶ್ ಶೆಟ್ಟಿ ನೊಚ್ಚ ಕಾರ್ಯಕ್ರಮ ನಿರ್ವಹಿಸಿದರು. ಕಾರ್ಯದರ್ಶಿ ಶ್ರವಣ್ ಕುಮಾರ್ ಸ್ವಾಗತಿಸಿದರು.
ಎಸ್ಸೆಸ್ಸೆಲ್ಸಿ ಶೇ.100 ಫಲಿತಾಂಶ ಪಡೆದ ಬದನಾಜೆ ಸರ್ಕಾರಿ ಹೈಸ್ಕೂಲ್ನ ವಿದ್ಯಾರ್ಥಿನಿ ವೈಷ್ಣವಿ ಹಾಗೂ ಹಳೇಪೇಟೆ ಸರ್ಕಾರಿ ಪ್ರೌಢಶಾಲೆಯ ಸಮೀಮಾ ಅವರನ್ನು ಗೌರವಿಸಲಾಯಿತು. ಶಾಲೆಗೆ ತಲಾ 50 ಸಾವಿರ ರೂ. ವೆಚ್ಚದ ವಿಜ್ಞಾನ ಪ್ರಯೋಗಾಲಯ ಸಲಕರಣೆಗಳ ಕಿಟ್ ನೀಡಲಾಯಿತು. 8 ಮಂದಿ ಎಸ್‌ಸಿ, ಎಸ್‌ಟಿ ಲಾನುಭವಿಗಳಿಗೆ ಸಹಾಯಧನ, ವಿಕಲಚೇತನರಿಗೆ ವೈದ್ಯಕೀಯ ಪರಿಹಾರ, ಒಂದು ವೀಲ್ ಚೇರ್ ವಿತರಿಸಲಾಯಿತು.