ಬೆಳ್ತಂಗಡಿ: ಉಜಿರೆಯ ಉದ್ಯಮಿ ಬಿಜೊಯ್ ಅವರ ಪುತ್ರ, 8ರ ಹರೆಯದ ಬಾಲಕ ಅನುಭವ್ ಅವರನ್ನು ಕೋಲಾರದಲ್ಲಿ ಸುರಕ್ಷಿತವಾಗಿ ಪತ್ತೆ ಹಚ್ಚುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.
ಈ ಸಂಬಂಧ ಒಟ್ಟು 6 ಮಂದಿಯನ್ನು ಬಂಧಿಸಲಾಗಿದೆ ಎಂದು ಪ್ರಕರಣದ ತನಿಖಾಧಿಕಾರಿ ಬೆಳ್ತಂಗಡಿ ಸರ್ಕಲ್ ಇನ್ಸ್‌ಪೆಕ್ಟರ್ ಸಂದೇಶ್ ಪಿ.ಜಿ ಅವರು ತಿಳಿಸಿದ್ದಾರೆ.
ಕೋಲಾರದ ಮಾಲೂರು ತಾಲೂಕಿನ ಕೂರ್ನ ಹೊಸಹಳ್ಳಿ ಮನೆಯಲ್ಲಿ ಮಗುವನ್ನು ಬಚ್ಚಿಡಲಾಗಿತ್ತು. ಬೆಳಗ್ಗಿನ ಜಾವಾ 5 ಗಂಟೆಗೆ ಕಾರ್ಯಾಚರಣೆ ನಡೆದಿದೆ. ಸಂದೇಶ್ ಪಿ.ಜಿ ಅವರೇ ಖುದ್ದು ಭಾಗಿಯಾಗಿದ್ದ ತಂಡವೇ ಆರೋಪಿಗಳು ಮಲಗಿ ನಿದ್ರಿಸುತ್ತಿದ್ದ ಮನೆಗೆ ಲಗ್ಗೆ ಇಟ್ಟಿದ್ದಾರೆ. ಈ ಮನೆಯವರೂ ಕೂಡ ಆರೋಪಿಗಳೇ ಆಗಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.
ಕೋಲಾರ ನ್ಯಾಯಾಲಯಕ್ಕೆ ಆರೋಪಿಗಳನ್ನು ಮತ್ತು ಬಾಲಕನನ್ನು ಬೆಳಗ್ಗೆ 11 ಗಂಟೆಗೆ ಹಾಜರುಪಡಿಸಬೇಕಾಗಿದೆ. ಆ ಬಳಿಕ ಬಾಲಕನ ಅಗತ್ಯ ಆರೋಗ್ಯ ತಪಾಸಣೆ ಕೈಗೊಂಡು ಹೆತ್ತವರಿಗೆ ಹಸ್ತಾಂತರ ಮಾಡಲಾಗುತ್ತದೆ.
ಆರೋಪಿಗಳನ್ನು ಅಲ್ಲಿನ ನ್ಯಾಯಾಲಯದ ಅನುಮತಿ ಪಡೆದು ಬೆಳ್ತಂಗಡಿಗೆ ಕರೆತರಲಾಗುವುದು. ಆರೋಪಿಗಳನ್ನು ಪೊಲೀಸ್ ವಶಕ್ಕೆ ತೆಗೆದುಕೊಂಡು ಮುಂದಿನ ವಿಚಾರಣೆ ನಡೆಸಲಾಗುತ್ತದೆ. ತಂಡದಲ್ಲಿ ಇನ್ನು ಬೇರೆ ಯಾರಾದರೂ ಇದ್ದಾರೆ ಎನ್ನುವುದನ್ನೂ ಇದ್ದಾರೆ ಎನ್ನುವುದನ್ನು ಅರಿತು ಅವರನ್ನು ಬಂಧಿಸಲಾಗುವುದು ಎಂದೂ ತಿಳಿಸಿದ್ದಾರೆ.
ಡಿ.೧೭ರಂದು ಸಂಜೆ ಬಾಲಕನನ್ನು ಅಜ್ಜ ಎ.ಕೆ.ಶಿವನ್ ಅವರ ಮುಂದೆಯೇ ಅಪಹರಿಸಿ ಕಾರಿನಲ್ಲಿ ಕೊಂಡೊಯ್ಯಲಾಗಿತ್ತು. ಈ ಕುರಿತು ದ.ಕ ಪೊಲೀಸರ ಐದು ತಂಡ ರಚಿಸಿ ತನಿಖೆ ನಡೆಸಲಾಗಿತ್ತು.
ಬಾಲಕನ ತಂದೆ ಬಿಜೊಯ್ ಅವರಿಗೆ ನಿರಂತರವಾಗಿ ಸಾಮಾಜಿಕ ಜಾಲತಾಣದ ಮೂಲಕ ಅಪಹರಣಕಾರರು ಸಂದೇಶ ನೀಡುತ್ತಾ ೧೦೦ ಬಿಟ್ ಕಾಯಿನ್ ನೀಡಿದರೆ ಮಾತ್ರವೇ ಬಾಲಕನನ್ನು ಬಿಡುಗಡೆ ಮಾಡುವುದಾಗಿ ಒತ್ತಾಯಿಸುತ್ತಿತ್ತು.
ಮಗುವನ್ನು ಅಪಹರಿಸಿದ ಆಗಂತುಕರು ಉಪ್ಪಿನಂಗಡಿ ಸುಳ್ಯ ಮೂಲಕ ಪ್ರಯಾಣ ಬೆಳೆಸಿದ್ದರು ಎಂದು ಪ್ರಾಥಮಿಕ ಮಾಹಿತಿ ಪೊಲೀಸರಿಗೆ ಲಭ್ಯವಾಗಿದೆ.