ಮಂಗಳೂರು: ಶಿಬರೂರು ಶ್ರೀ ಕೊಡಮಣಿತ್ತಾಯ ಕ್ಷೇತ್ರದಲ್ಲಿ ಎ.26ರಂದು ನಡೆಯಲಿರುವ ಬ್ರಹ್ಮಕುಂಭಾಭಿಷೇಕ ಮತ್ತು ನಾಗಮಂಡಲ ಹಾಗೂ ವಿಶೇಷ ಜಾತ್ರಾ ಮಹೋತ್ಸವಕ್ಕೆ ಪೂರ್ವಭಾವಿಯಾಗಿ ಉಗ್ರಾಣ ಮುಹೂರ್ತ ಕಾರ್ಯಕ್ರಮವು ತಂತ್ರಿವರೇಣ್ಯ ವೇದಮೂರ್ತಿ ವೇದವ್ಯಾಸ ತಂತ್ರಿಗಳ ಪೌರೋಹಿತ್ಯದಲ್ಲಿ ಸೋಮವಾರ ಬೆಳಗ್ಗೆ ನಡೆಯಿತು. ಪ್ರಾರಂಭದಲ್ಲಿ ಕೊಡಮಣಿತ್ತಾಯ ದೈವಕ್ಕೆ ಸಾಮೂಹಿಕ ಪ್ರಾರ್ಥನೆ ಸಲ್ಲಿಸಲಾಯಿತು.
ಬಳಿಕ ನಡೆದ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಮಾತಾಡಿದ ಸಂಜೀವಿನಿ ಟ್ರಸ್ಟ್ ಅಧ್ಯಕ್ಷ ಡಾ. ಸುರೇಶ್ ರಾವ್ ಎಕ್ಕಾರ್, ಶಿಬರೂರು ಕ್ಷೇತ್ರಕ್ಕೆ ತಲೆತಲಾಂತರಗಳ ಇತಿಹಾಸವಿದೆ. ಇಲ್ಲಿನ ಮಣ್ಣಿಗೂ ರೋಗ ಗುಣಪಡಿಸುವ ಶಕ್ತಿಯಿದ್ದು ಭಕ್ತರು ಕ್ಷೇತ್ರಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಪುನೀತರಾಗುತ್ತಿದ್ದಾರೆ. ಕ್ಷೇತ್ರದಲ್ಲಿ ಇಂದು ನಡೆದಿರುವ ಉಗ್ರಾಣ ಮುಹೂರ್ತ ಕಾರ್ಯಕ್ರಮದಿಂದ ಮೊದಲ್ಗೊಂಡು ಎಲ್ಲಾ ಧಾರ್ಮಿಕ ಕಾರ್ಯಕ್ರಮಗಳು ಯಶಸ್ವಿಯಾಗಿ ನೆರವೇರಲಿ ಎಂದರು.
ಕಟೀಲು ದೇವಳದ ಆಡಳಿತ ಮೊಕ್ತೇಸರ ಸನತ್ ಶೆಟ್ಟಿ ಮಾತನಾಡಿ, ಶ್ರೀ ಕ್ಷೇತ್ರದಲ್ಲಿ ನಡೆಯಲಿರುವ ಧಾರ್ಮಿಕ ಕಾರ್ಯಕ್ರಮಗಳು ಯಾವುದೇ ಅಡಚಣೆಯಿಲ್ಲದೆ ಕಟೀಲು ದೇವಿಯ ಅನುಗ್ರಹದಿಂದ ನಡೆಯಲಿ. ಕ್ಷೇತ್ರಕ್ಕೆ ಆಗಮಿಸುವ ಭಕ್ತರು ದೈವದ ಅನುಗ್ರಹಕ್ಕೆ ಪಾತ್ರರಾಗಲಿ ಎಂದರು.
ಕಟೀಲು ಕ್ಷೇತ್ರದ ಅನುವಂಶಿಕ ಆರ್ಚಕ ಲಕ್ಷ್ಮೀನಾರಾಯಣ ಆಸ್ರಣ್ಣರು, ಶಿಬರೂರು ಗುತ್ತಿನಾರ್ ಉಮೇಶ್ ಎನ್. ಶೆಟ್ಟಿ, ಕಟೀಲು ಕ್ಷೇತ್ರದ ಅನುವಂಶಿಕ ಮೊತ್ತೇಸರ ಸನತ್ ಕುಮಾರ್ ಶೆಟ್ಟಿ ಕೊಡೆತ್ತೂರುಗುತ್ತು, ಬ್ರಹ್ಮಶ್ರೀ ವೇದವ್ಯಾಸ ತಂತ್ರಿಗಳು ಶಿಬರೂರು ಮಠ, ಸಹಾಯಕ ಆಯುಕ್ತ ಹರ್ಷವರ್ಧನ ಎಸ್.ಜೆ. ಎಂ. ದುಗ್ಗಣ್ಣ ಸಾವಂತರು, ಪುರೋಹಿತರಾ ವೆಂಕಟರಾಜ ಉಡುಪರು, ಶ್ರೀ ನಿವಾಸ ಭಟ್, ಹರಿದಾಸ ಉಡುಪರು ಗೋಪಾಲಕೃಷ್ಣ ಮಠ ಮೊದಲಾದವರು ಉಪಸ್ಥಿತರಿದ್ದರು.
ತನಿಷ್ಕಾ ಶೆಟ್ಟಿ ಸ್ವಾಗತಿಸಿದರು. ಕೋರ್ಯಾರು ಗುತ್ತು ಜೀತೇಂದ್ರ ಶೆಟ್ಟಿ ಅತಿಥಿಗಳನ್ನು ಸ್ವಾಗತಿಸಿದರು. ವಿಜೇಶ್ ಶೆಟ್ಟಿ ಪ್ರಾಸ್ತಾವಿಕ ಮಾತನಾಡಿ ಸಾಯಿನಾಥ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು. ಸುರೇಂದ್ರ ಶೆಟ್ಟಿ ದೇಲಂತಬೆಟ್ಟು ವಂದಿಸಿದರು.