ಜಿಲ್ಲೆ

ಗ್ರಾಮೀಣ ಭಾಗಕ್ಕೂ ವಿಸ್ತರಿಸಿದ ಯುಜಿಡಿ ಕಿರಿಕಿರಿ

ಕೆರೆ ಸೇರುತ್ತಿದೆ ತ್ಯಾಜ್ಯ > ಓಡಾಟಕ್ಕೂ ಸಮಸ್ಯೆ | ಪರ್ಯಾಯ ವ್ಯವಸ್ಥೆಗೆ ಒತ್ತಾಯ

 ತಿಪಟೂರು: ನಗರದ ಜನತೆಯನ್ನು ಕಾಡುತ್ತಿದ್ದ ಯುಜಿಡಿ ಕಿರಿಕಿರಿ ಈಗ ತಿಪಟೂರಿನ ಗ್ರಾಮೀಣ ಭಾಗಕ್ಕೂ ವಿಸ್ತರಿಸಿದೆ.

ನಗರದ ಕೋಡಿ ಸರ್ಕಲ್​ ಮೂಲಕ ರಾಷ್ಟ್ರೀಯ ಹೆದ್ದಾರಿ 206ರ ಬದಿಯಲ್ಲಿ ಸಾಗಿ ಈಡೇನಹಳ್ಳಿ ಬಳಿ ನಿರ್ಮಿಸಲಾಗಿರುವ ಜಾಕ್​ ವೆಲ್​ ಮೂಲಕ ಹಾದು ಕಲ್ಲೇಗೌಡನಪಾಳ್ಯ ಸಮೀಪದ ಎಸ್​ಟಿಪಿ ಘಟಕಕ್ಕೆ ಹೋಗಬೇಕಿದ್ದ ತ್ಯಾಜ್ಯ ಸಾಗಿಸುವ ಮ್ಯಾನ್​ಹೋಲ್​ಗಳು ಮಳೆ ಬಂದಾಗೆಲ್ಲಾ ತೆರೆದು ರಾಷ್ಟ್ರೀಯ ಹೆದ್ದಾರಿಯಲ್ಲಿ ಹರಿದು, ಸಂಚಾರ ಅವ್ಯವಸ್ಥೆ ಸೃಸ್ಟಿಸುತ್ತಿರುವುದು ನಿತ್ಯದ ಸಂಗತಿ.

ಈ ಸಮಸ್ಯೆ ಈಗ ಗ್ರಾಮೀಣ ಭಾಗಕ್ಕೂ ವಿಸ್ತರಿಸಿದ್ದು, ಎಸ್​ಟಿಪಿ ಘಟಕ ಸೇರಬೇಕಾದ ಯುಜಿಡಿ ನೀರು ಹಿಂಡಿಸ್ಕೆರೆ ಗ್ರಾಮದ ರಸ್ತೆಗಳಲ್ಲಿ ಹರಿದು ಅವಾಂತರ ಸೃಷ್ಟಿಸುತ್ತಿದೆ. ನಗರಕ್ಕೆ ಕುಡಿಯುವ ನೀರು ಪೂರೈಸುವ ಈಚನೂರು ಜಲಸಂಗ್ರಹಾಗಾರಕ್ಕೆ ಯುಜಿಡಿ ನೀರು ಸೇರುತ್ತಿರುದನ್ನು ಸಂಪೂರ್ಣವಾಗಿ ತಡೆಯುವ ಪ್ರಯತ್ನ ಇಲ್ಲಿವರೆಗೂ ನಗರಸಭೆಗೆ ಸಾಧ್ಯವಾಗಿಲ್ಲ. ಈ ಮಧ್ಯೆ ಎಸ್​ಟಿಪಿ ಘಟಕಕ್ಕೆ ತಲುಪುವ ಯುಜಿಡಿ ತ್ಯಾಜ್ಯ ಅಲ್ಲಿ ಸರಿಯಾಗಿ ಸಂಸ್ಕರಣೆಗೊಳ್ಳದೇ ಹಿಂಡಿಸ್ಕೆರೆ ಗ್ರಾಮದ ರಸ್ತೆ ಮೂಲಕ ಈಚನೂರು ಕೆರೆ ಸೇರುತ್ತಿದೆ ಎಂದು ಹಿಂಡಿಸ್ಕೆರೆ ಗ್ರಾಮಸ್ಥರು ಆರೋಪಿಸಿದ್ದಾರೆ.

ಕಲುಷಿತ ನೀರಿನ ದುರ್ವಾಸನೆ ಸಹಿಸಲು ಸಾದ್ಯವಾಗುತ್ತಿಲ್ಲ. ಜತೆಗೆ ಜನ, ಜಾನುವಾರುಗಳಿಗೆ ಕುಡಿಯುವ ನೀರಿನ ತೊಂದರೆ ಉಂಟಾಗಲಿದ್ದು, ತಾಲೂಕು ಆಡಳಿತ ಕೂಡಲೇ ಇದಕ್ಕೆ ಪರ್ಯಾಯ ವ್ಯವಸ್ಥೆ ಕಲ್ಪಿಸಲಿ ಎಂದು ಒತ್ತಾಯಿಸಿದ್ದಾರೆ.

ನಗರ ಸಮೀಪದ ಕಲ್ಲೇಗೌಡನಪಾಳ್ಯದ ಬಳಿ ಇರುವ 6 ಎಂಎಲ್​ಡಿ ಸಾಮರ್ಥ್ಯದ ಎಸ್​ಟಿಪಿ ಘಟಕವನ್ನು ಉನ್ನತಿಕರಿಸಲು ಮತ್ತು ಶಿಥಿಲಗೊಂಡಿರುವ ಯಂತ್ರಗಳನ್ನು ಬದಲಾಯಿಸಿ ಹೊಸ ಯಂತ್ರಗಳನ್ನು ಅಳವಡಿಸುವ ಮೂಲಕ ಒಂದೇ, ಒಂದು ಹನಿ ಯುಜಿಡಿ ತ್ಯಾಜ್ಯ ನೀರು ರಸ್ತೆ ಅಥವಾ ಈಚನೂರು ಕೆರೆ ಸೇರದಂತೆ ಶಾಶ್ವತ ಕಾಮಗಾರಿ ಕೈಗೊಳ್ಳುವಂತೆ ನಗರಾಯುಕ್ತರಿಗೆ ಶಾಸಕ ಕೆ.ಷಡಕ್ಷರಿ ಒಪ್ಪಿಗೆ ನೀಡಿ 6 ತಿಂಗಳೇ ಕಳೆದಿದೆ. ಇದಕ್ಕಾಗಿ 15 ಕೋಟಿ ರೂ. ವೆಚ್ಚದ ಅಂದಾಜು ಪಟ್ಟಿ ಸಿದ್ಧವಾಗಿದೆ ಎನ್ನಲಾಗಿದೆ. ಆದರೆ ಉದ್ದೇಶಿತ ಕಾಮಗಾರಿ ಮಾತ್ರ ಪ್ರಾರಂಭವಾಗಿಲ್ಲ.

ಇದರ ಪರಿಣಾಮ ಯುಜಿಡಿ ಮ್ಯಾನ್​ ಹೋಲ್​ಗಳಿಂದ ಹೊರಬರುತ್ತಿರುವ ತ್ಯಾಜ್ಯ ನೀರು ನಗರ ಸಮೀಪದ ಹಳ್ಳ, ಕೊಳ್ಳದ ಮೂಲಕ ಕೊಪ್ಪ ಗ್ರಾಮದ ಮೂಲಕ ಕುಡಿಯುವ ನೀರು ಸಂಗ್ರಹಾಗಾರ ಈಚನೂರು ಕೆರೆ ಸೇರುತ್ತಿರುವುದನ್ನು ಇಲ್ಲಿವರೆಗೂ ತಪ್ಪಿಸಲು ಸಾಧ್ಯವಾಗಿಲ್ಲ. ಇದರ ಜತೆಗೆ ಎಸ್​ಟಿಪಿ ಘಟಕ ಸೇರುವ ಯುಜಿಡಿ ನೀರು ಅಲ್ಲಿ ಸಂಪೂರ್ಣವಾಗಿ ಸಂಸ್ಕರಣೆಗೊಳ್ಳದೇ ಯಥಾ ಸ್ಥಿತಿಯಲ್ಲಿ ಹಿಂಡಿಸ್ಕೆರೆ ಗ್ರಾಮದ ರಸ್ತೆಗಳ ಮೂಲಕ ಹಾದು ಮತ್ತದೇ ಈಚನೂರು ಕೆರೆ ಸೇರುತ್ತಿದೆ ಎನ್ನಲಾಗಿದೆ. ಈಚನೂರು ಕೆರೆ ಭರ್ತಿಯಾಗಿ, ಕೋಡಿ ಬಿದ್ದರೆ. ಇದೇ ಕಲುಷಿತ ನೀರು ತುರುವೇಕೆರೆ ಸಮೀಪದ ಮಲ್ಲಾಘಟ್ಟ ಕೆರೆಗೆ ಸೇರುವ ಅಪಾಯವಿದೆ.