ಉಡುಪಿಯ ಡಾನ್​ ಬಾಸ್ಕೋ ಇಂಗ್ಲಿಷ್​ ಮೀಡಿಯಂ ಸ್ಕೂಲ್​ನಲ್ಲಿ ನಡೆದ ಯುಜಿಸಿ-ನೆಟ್​ ಪರೀಕ್ಷೆಗೆ ಹಾಜರಾದ ವಿದ್ಯಾರ್ಥಿಗಳ ಹಾಲ್​ಟಿಕೆಟ್​, ಪೆನ್​-ಪೇಪರ್​ ಪರಿಶೀಲಿಸಲಾಯಿತು. 
ಜಿಲ್ಲೆ

ಉಡುಪಿಯಲ್ಲಿ ಸುಗಮವಾಗಿ ನಡೆದ ಯುಜಿಸಿ-ನೆಟ್​ ಪರೀಕ್ಷೆ

ಒಟ್ಟು 810 ವಿದ್ಯಾರ್ಥಿಗಳ ನೋಂದಣಿ | 132 ಮಂದಿ ಗೈರು

ವಿಜಯವಾಣಿ ಸುದ್ದಿಜಾಲ ಉಡುಪಿ
ಶಿರ್ವಾದ ಡಾನ್​ ಬಾಸ್ಕೋ ಇಂಗ್ಲಿಷ್​ ಮೀಡಿಯಂ ಸ್ಕೂಲ್​ನಲ್ಲಿ ಮಂಗಳವಾರ ನಡೆದ ಯುಜಿಸಿ-ನೆಟ್​ (ಯುನಿವರ್ಸಿಟಿ ಗ್ರ್ಯಾಂಟ್​ ಕಮಿಷನ್​- ನ್ಯಾಷನಲ್​ ಎಲಿಜಿಬಿಲಿಟಿ ಟೆಸ್ಟ್​ ) ಪರೀಕ್ಷೆ ಸುಗಮವಾಗಿ ನಡೆಯಿತು.

ಬೆಳಗ್ಗೆ ಮತ್ತು ಮಧ್ಯಾಹ್ನ ಎರಡು ಹಂತದಲ್ಲಿ ಪರೀಕ್ಷೆ ನಡೆದಿದ್ದು, ನೋಂದಣಿ ಮಾಡಿದ್ದ ಒಟ್ಟು 810 ವಿದ್ಯಾರ್ಥಿಗಳಲ್ಲಿ 678 ಮಕ್ಕಳು ಹಾಜರಾಗಿದ್ದು, 132 ಮಂದಿ ಗೈರಾಗಿದ್ದರು.

ಎರಡು ಹಂತದಲ್ಲಿ ಟೆಸ್ಟ್

ಬೆಳಗ್ಗೆ ಅವಧಿಯಲ್ಲಿ ನೋಂದಣಿ ಮಾಡಿದ್ದ ಒಟ್ಟು 526 ವಿದ್ಯಾರ್ಥಿಗಳಲ್ಲಿ 439 ಮಕ್ಕಳು ಹಾಜರಾಗಿದ್ದು, 87 ಮಂದಿ ಗೈರಾಗಿದ್ದರು. ಮಧ್ಯಾಹ್ನದ ಅವಧಿಯಲ್ಲಿ ನೋಂದಣಿ ಮಾಡಿದ್ದ ಒಟ್ಟು 284 ವಿದ್ಯಾರ್ಥಿಗಳಲ್ಲಿ 239 ಮಕ್ಕಳು ಹಾಜರಾಗಿದ್ದು, 45 ಮಂದಿ ಗೈರಾಗಿದ್ದರು.

ವಿವಿಧ ಹುದ್ದೆಗೆ ಅರ್ಹತೆ

ಟಾಪ್​ ರ್ಯಾಂಕ್​ ಬಂದ ಜೆಆರ್​ಎಫ್​ (ಜ್ಯುನಿಯರ್​ ರಿಸರ್ಚ್ ​ಫೆಲೋಶಿಪ್​), ಯುನಿವರ್ಸಿಟಿಯಲ್ಲಿ ಪಿಎಚ್​.ಡಿ ಮಾಡುವವರಿಗೆ ಹಾಗೂ ಅಸೋಸಿಯೇಟ್​ ಪ್ರೊಫೆಸರ್​ ಹುದ್ದೆಗೆ ಅರ್ಹತೆ ಪಡೆಯಲು ಯುಜಿಸಿ-ನೆಟ್​ ಪರೀಕ್ಷೆ ಪ್ರಮುಖವಾದುದಾಗಿದೆ. ನ್ಯಾಷನಲ್​ ಟೆಸ್ಟಿಂಗ್​ ಏಜೆನ್ಸಿ (ಎನ್​ಟಿಎ) ಆಯೋಜಿಸಿದ್ದ ಒಂದು ದಿನದ ಯುಜಿಸಿ-ನೆಟ್​ ಪರೀಕ್ಷೆ ಸುವ್ಯವಸ್ಥಿತವಾಗಿ ನಡೆದಿದ್ದು, ಯಾವುದೇ ರೀತಿಯ ನಕಲು, ಅಕ್ರಮವಾಗಲೀ ಅಥವಾ ವಿದ್ಯಾರ್ಥಿಗಳ ಡಿಬಾರ್​ ಆಗಿಲ್ಲ ಎಂದು ಎನ್​ಟಿಎ ಸಿಟಿ ಕೋ-ಆರ್ಡಿನೇಟರ್​ ಬ್ರಹ್ಮಾಚಾರಿ ಕೆ.ಎನ್​. ಮಾಹಿತಿ ನೀಡಿದ್ದಾರೆ.