ವಿಜಯವಾಣಿ ಸುದ್ದಿಜಾಲ ಧಾರವಾಡ
ಹಳತನ್ನು ಕಳಚಿ ಹೊಸ ಚಿಗುರು ಚಿಗುರಿ ಪರಿವರ್ತನೆಗೆ ಸಂಕೇತವಾಗುವ ಯುಗಾದಿ ಮತ್ತೆ ಬಂದಿದೆ. ಯುಗಾದಿ ಕೇವಲ ಪ್ರಕೃತಿ ಬದಲಾವಣೆ ಮಾತ್ರವಲ್ಲದೆ ಜೀವಿಗಳ ಬದುಕಿನ ಬದಲಾವಣೆ, ಅದರಲ್ಲೂ ನಮ್ಮ ಆ ವರ್ಷದ ಬದುಕಿಗೆ ಮುನ್ನುಡಿ ಬರೆಯುವ ಹಬ್ಬ. ಹೊಸ ವರ್ಷದ ಆಚರಣೆಗೆ ಇಡೀ ಜಿಲ್ಲೆಯ ಜನತೆ ಸಜ್ಜಾಗಿದ್ದಾರೆ.
ಬದುಕಿನಲ್ಲಿ ಸಿಹಿ -ಕಹಿ ಎರಡೂ ಬೆರೆತಿರಲಿ ಎಂದು ಬೇವು-ಬೆಲ್ಲ ತಿಂದು ಪ್ರಕೃತಿ ಪೂಜಿಸುವ ಹಬ್ಬವನ್ನು ಜೋರಾಗಿ ಆಚರಿಸಲಾಗುತ್ತದೆ. ಎಲ್ಲರೂ ಹೊಸ ಬಟ್ಟೆ ತೊಟ್ಟು, ವಿಶೇಷ ಪೂಜೆ ಸಲ್ಲಿಸಿ, ಸಿಹಿ ಅಡುಗೆ ಮಾಡಿ ಇಡೀ ಕುಟುಂಬಸ್ಥರು ಸೇರಿ ಹಬ್ಬ ಆಚರಿಸುತ್ತಾರೆ. ಶನಿವಾರ ನಗರದಲ್ಲಿ ಹಬ್ಬದ ಕಡೇ ಕ್ಷಣದ ಖರೀದಿ ಬಲು ಜೋರಾಗಿತ್ತು.
ಬಿರು ಬಿಸಿಲಿನಲ್ಲಿ ನೆತ್ತಿ ಸುಡುತ್ತಿದ್ದರೆ, ಅಗತ್ಯ ವಸ್ತುಗಳ ಬೆಲೆ ಗಗನಕ್ಕೇರಿ ಜನರ ಕಿಸೆ ಸುಡುವಂತಾಗಿದೆ. ಆದಾಗ್ಯೂ ನಗರದ ಮಾರುಕಟ್ಟೆಯಲ್ಲಿ ಅತ್ಯಂತ ಸಂಭ್ರಮದಿಂದಲೇ ಹೂವು, ಹಣ್ಣು, ತರಕಾರಿ, ತಳಿರು ತೋರಣಗಳನ್ನು ಖರೀದಿಯಲ್ಲಿ ತೊಡಗಿದ್ದರು. ಹಣ್ಣಿನ ದರ ತುಸು ಏರಿಕೆಯಾಗಿದೆ. ಈ ಮೊದಲು ಪ್ರತಿ ಕೆಜಿಗೆ 40-50 ರೂ. ಇದ್ದ ಏಲಕ್ಕಿ ಬಾಳೆಹಣ್ಣಿಗೆ 60-70 ರೂ. ಗೆ ಏರಿಕೆ ಖಂಡಿದೆ. ಇದೇ ರೀತಿ ಪ್ರತಿ ಹಣ್ಣುಗಳ ಬೆಲೆ ಕನಿಷ್ಠ 10-20 ರೂ. ಬೆಲೆ ಏರಿಕೆ ಕಂಡಿವೆ.
ಇನ್ನು ಹೂವುಗಳದ್ದೂ ಇದೆ ಕಥೆ. ಒಂದು ಮಾರು ಮಲ್ಲಿಗೆ ಹೂವು 50-60 ರೂ. ಇದೆ. ಸಾಮಾನ್ಯ ದಿನಗಳಲ್ಲಿ 10 ರಿಂದ 20 ರೂ. ಒಂದು ಮಾರಿನಂತೆ ಮಾರಾಟವಾಗುತ್ತಿದ್ದ ಸೇವಂತಿಗೆ ಮಾಲೆ 40-50 ರೂ.ಗೆ ಏರಿಕೆ ಕಂಡಿದೆ. ಉಳಿದಂತೆ ಗುಲಾಬಿ, ಸುಗಂಧರಾಜ, ಚೆಂಡು ಹೂವುಗಳ ಬೆಲೆ ಸಹ ಏರಿಕೆಯಾಗಿವೆ. ಇವೆಲ್ಲವುಗಳ ಜತೆಗೆ ತರಕಾರಿ, ದಿನಸಿಗಳ ಬೆಲೆಯಲ್ಲೂ ಕೊಂಚ ಏರಿಕೆ ಕಂಡಿವೆ. ಆದರೆ ಇದ್ಯಾವುದಕ್ಕೂ ಬೇಸರಗೊಳ್ಳದ ಜನರು ಮಾತ್ರ ಸಂಭ್ರಮ ಹಬ್ಬ ಆಚರಣೆಗೆ ವಸ್ತುಗಳ ಖರೀದಿಯಲ್ಲಿ ತೊಡಗಿದ್ದಾರೆ.