‘ಯುಗಾದಿ ರಂಗೋಲಿ ಸ್ಪರ್ಧೆ’ ವಿಜೇತರೊಂದಿಗೆ ವಿಆರ್​ಎಲ್ ಮೀಡಿಯಾ ಆಡಳಿತಾಧಿಕಾರಿ ಶೋಭಾ ಕುಲಕರ್ಣಿ, ಸ್ವಸ್ಥ ಸಮೃದ್ಧ ಭಾರತದ ಅಧ್ಯಕ್ಷ ಡಾ. ಸಿ.ಎ. ಕಿಶೋರ್, ವಿಜಯವಾಣಿಯ ರಾಘವೇಂದ್ರ ಗಣಪತಿ, ನಾಗರಾಜ ಇಳೆಗುಂಡಿ, ರಾಜಶೇಖರ ಹೆಗಡೆ, ರುದ್ರಣ್ಣ ಹರ್ತಿಕೋಟೆ, ಪ್ರಭುದೇವ ಶಾಸ್ತ್ರಿಮಠ ಮತ್ತು ಕೀರ್ತಿನಾರಾಯಣ. 
ಜಿಲ್ಲೆ

ಯುಗಾದಿ ರಂಗೋಲಿ ಸ್ಪರ್ಧೆ ವಿಜೇತರಿಗೆ ಬಹುಮಾನ ವಿತರಣೆ: ವಿಜಯವಾಣಿ- ದಿಗ್ವಿಜಯ 24*7 ನ್ಯೂಸ್ ಸಹಯೋಗ

Webdesk - Ravikanth

3 ವಿಭಾಗಗಳಲ್ಲಿ 9 ಮಂದಿಗೆ ನಗದು ಬಹುಮಾನ

ಬೆಂಗಳೂರು: ಯುಗಾದಿ ಹಬ್ಬದ ಪ್ರಯುಕ್ತ ಸ್ವಸ್ಥ ಸಮೃದ್ಧ ಭಾರತ ಮತ್ತು ಭಾರತೀಯ ಆಯುರ್ವೆದ ಪ್ರತಿಷ್ಠಾನವು ವಿಜಯವಾಣಿ ಮತ್ತು ದಿಗ್ವಿಜಯ 24*7 ನ್ಯೂಸ್ ಸಹಯೋಗದಲ್ಲಿ ಆಯೋಜಿಸಿದ್ದ ‘ರಂಗೋಲಿ ಸ್ಪರ್ಧೆ’ಯ ವಿಜೇತರಿಗೆ ಶನಿವಾರ ವಿಜಯವಾಣಿ ಕಚೇರಿಯಲ್ಲಿ ಆಯೋಜಿಸಿದ್ದ ಸರಳ ಕಾರ್ಯಕ್ರಮದಲ್ಲಿ ಬಹುಮಾನ ವಿತರಿಸಲಾಯಿತು.

ಬಸವನಗುಡಿಯ ನ್ಯಾಷನಲ್ ಕಾಲೇಜು ಆಟದ ಮೈದಾನ ಮುಂಭಾಗದಲ್ಲಿರುವ ರಸ್ತೆಯಲ್ಲಿ ಏ. 4ರಂದು ರಂಗೋಲಿ ಸ್ಪರ್ಧೆ ಆಯೋಜಿಸಲಾಗಿತ್ತು. ಮೂರು ವಿಭಾಗಗಳಲ್ಲಿ (ಮಹಿಳೆಯರು, ಪುರುಷರು ಹಾಗೂ ಅಂಗವಿಕಲರು) 168 ಮಂದಿ ಪಾಲ್ಗೊಂಡಿದ್ದರು. ಇವರಲ್ಲಿ 9 ವಿಜೇತರಿಗೆ ಫಲಕ ಹಾಗೂ ನಗದು ಬಹುಮಾನಗಳನ್ನು (ಪ್ರಥಮ 5 ಸಾವಿರ ರೂ., ದ್ವಿತೀಯ 3 ಸಾವಿರ ರೂ. ಹಾಗೂ ತೃತೀಯ 2 ಸಾವಿರ ರೂ.) ವಿತರಿಸಲಾಯಿತು.

ಸ್ಪರ್ಧೆ ವಿಜೇತರು: ಮಹಿಳೆಯರ ವಿಭಾಗದಲ್ಲಿ ಎ. ಸುನೀತಾ (ಪ್ರಥಮ), ಡಿ. ಸುಮಾ (ದ್ವಿತೀಯ) ಹಾಗೂ ಸುಮಾ ಕರ್ವ ಕರ್ (ತೃತೀಯ) ಬಹುಮಾನ ಪಡೆದುಕೊಂಡರು. ಪುರುಷರ ವಿಭಾಗದಲ್ಲಿ ಮಂಜುನಾಥ್ ಲಕ್ಕಣ್ಣನವರ್, ಪವಮಾನ ನರಗುಂದ ಮತ್ತು ಎನ್.ಎಸ್. ಮಹೇಶ್ ಕ್ರಮವಾಗಿ ಮೊದಲ, 2ನೇ ಹಾಗೂ 3ನೇ ಬಹುಮಾನ ಸ್ವೀಕರಿಸಿದರು. ಅಂಗವಿಕಲರ ವಿಭಾಗದಲ್ಲಿ ಶೋಭಾ (ಪ್ರಥಮ), ಡಿ. ಅನುರಾಧಾ (ದ್ವಿತೀಯ) ಹಾಗೂ ಎನ್. ಸೌಮ್ಯಾ (ತೃತೀಯ) ಬಹುಮಾನಗಳಿಗೆ ಭಾಜನರಾದರು. ವಿಜೇತರಿಗೆ ವಿಆರ್​ಎಲ್ ಮೀಡಿಯಾ ಆಡಳಿತಾಧಿಕಾರಿ ಶೋಭಾ ಕುಲಕರ್ಣಿ, ಸ್ವಸ್ಥ ಸಮೃದ್ಧ ಭಾರತದ ಅಧ್ಯಕ್ಷ ಡಾ.ಸಿ.ಎ. ಕಿಶೋರ್, ಸಂಯೋಜಕ ಕೆ.ಸಿ. ಚಂದ್ರಶೇಖರ್ ಬಹುಮಾನ ವಿತರಿಸಿದರು.

ಸಂಸ್ಕೃತಿ- ಪರಂಪರೆ ಉಳಿಸುವ ಕಾಯಕ: ನಶಿಸಿ ಹೋಗುತ್ತಿರುವ ರಂಗೋಲಿ ಸಂಸ್ಕೃತಿಯನ್ನು ಉಳಿಸುವ ಉದ್ದೇಶದೊಂದಿಗೆ ಈ ಸ್ಪರ್ಧೆ ಆಯೋಜಿಸಲಾಗಿತ್ತು. ಹಿಂದೆಲ್ಲ ರಂಗೋಲಿ ಎಂದರೆ ಮನೆ ಯೊಡತಿಯ ಹಕ್ಕು ಎನ್ನಲಾಗುತ್ತಿತ್ತು. ಆದರೆ ಬೆಂಗ ಳೂರಿನಂತಹ ಮಹಾನಗರದಲ್ಲೀಗ ರಂಗೋಲಿ ಹಾಕುವುದನ್ನೂ ಹೆಚ್ಚನಂಶ ಕೆಲಸದವರೇ ಮಾಡು ತ್ತಾರೆ. ಶ್ರೀಮಂತ ಗೃಹಿಣಿಯರ ಮನದಲ್ಲಿಯೂ ಈ ಭಾವನೆಯೇ ಇದೆ. ಆದರೆ, ರಂಗೋಲಿ ಕಲೆಯು ಭಾವನೆ- ಸಂಬಂಧಗಳನ್ನು ಬೆಸೆಯುವ ಸಂಕೇತ. ರಂಗೋಲಿ ಹಾಕಲು ಕೂರುವ ಭಂಗಿ, ಬಿಡಿಸುವ ರೀತಿಯಿಂದ ಕೆಲಕಾಲ ದೇಹಕ್ಕೆ ವ್ಯಾಯಾಮ ಆಗುತ್ತದೆ. ಅಂಥ ವಿಶಿಷ್ಟ ಸಂಸ್ಕೃತಿಯ ಪ್ರತೀಕವಾದ ಕೆಲ ಸಂಪ್ರದಾಯಗಳನ್ನು ಮರೆತಿರುವುದರಿಂದಲೇ ಸಂದಿವಾತ, ಮಧುಮೇಹ ಮತ್ತಿತರ ಸಮಸ್ಯೆಗಳಿಗೆ ಒಳಗಾಗುತ್ತಿದ್ದಾರೆ ಎಂದು ಸ್ವಸ್ಥ ಸಮೃದ್ಧ ಭಾರತದ ಅಧ್ಯಕ್ಷ ಡಾ.ಸಿ.ಎ. ಕಿಶೋರ್ ಹೇಳಿದರು. ಭಾರತೀಯ ಸಂಸ್ಕೃತಿ ಹಾಗೂ ಪರಂಪರೆಯನ್ನು ಉಳಿಸುವ ಮೂಲಕ ದೇಶ ಕಟ್ಟುವ ಕಾರ್ಯ ನಿರಂತರವಾಗಿರಬೇಕು. ಈ ಸತ್ಕಾರ್ಯದಲ್ಲಿ ‘ವಿಜಯವಾಣಿ’ ಹಾಗೂ ದಿಗ್ವಿಜಯ 24*7 ನ್ಯೂಸ್ ವಾಹಿನಿ ಸದಾ ಸಹಕಾರ ಹಾಗೂ ಬೆಂಬಲ ನೀಡುತ್ತ ಬಂದಿದೆ ಎಂದು ಹೇಳಿದರು.

ರಂಗೋಲಿ ನಮ್ಮ ದೇಶದ ಸಂಸ್ಕೃತಿಯ ಪ್ರತೀಕ. ಮಹಿಳೆಯ ರಿಗೆ ದಿನ ಆರಂಭವಾಗುವುದೇ ರಂಗೋಲಿ ಬಿಡಿಸುವುದರಿಂದ. ಇಂಥ ಅಪರೂಪದ ಸಂಪ್ರದಾಯವನ್ನು ಉಳಿಸಿ- ಬೆಳೆಸುವ ನಿಟ್ಟಿನಲ್ಲಿ ಎಲ್ಲರೂ ಮನೆಮಕ್ಕಳಿಗೆ ರಂಗೋಲಿ ಬಿಡಿಸುವುದನ್ನು ಕಲಿಸಬೇಕು.

| ಎ. ಸುನೀತಾ ಬಿಎಂಎಸ್ ಸಮೂಹ ಸಂಸ್ಥೆಯ ಅಕೌಂಟೆಂಟ್ ಆಫೀಸರ್

ಸಾಮಾನ್ಯವಾಗಿ ದೇವರ ಮನೆ ಮುಂದೆ ರಂಗೋಲಿ ಹಾಕುತ್ತೇನೆ. ಆದರೆ ಈ ಸ್ಪರ್ಧೆಯ ಮೂಲಕ ಪುರುಷರಿಗೂ ಅವಕಾಶ ಕಲ್ಪಿಸಲಾಗಿತ್ತು. ಸ್ಪರ್ಧೆಯಲ್ಲಿ ಬಹುಮಾನ ದೊರೆತಿರುವುದು ಖುಷಿ ತಂದಿದೆ.

| ಪವಮಾನ ನರಗುಂದ ಸೇಂಟ್ ಗೋಬೈನ್ ಸಂಸ್ಥೆ ಪ್ರಾದೇಶಿಕ ವಾಣಿಜ್ಯ ವ್ಯವಸ್ಥಾಪಕ

ನಾನು ತುಂಬ ಸೊಗಸಾಗಿ ರಂಗೋಲಿ ಬಿಡಿಸಲು ನನ್ನ ತಾಯಿಯೇ ಪ್ರೇರಣೆ ಅವರು ರಾಜ್ಯ ಹಾಗೂ ರಾಷ್ಟ್ರಮಟ್ಟದ ಸ್ಪರ್ಧೆಗಳಲ್ಲಿ ಭಾಗವಹಿಸುತ್ತಿ ದ್ದರು. ಆಗ ಅವರಿಗೆ ನೆರವು ನೀಡಲು ಹೋಗುತ್ತಿದ್ದ ನನಗೆ ರಂಗೋಲಿ ಬಿಡಿಸುವುದರಲ್ಲಿ ಆಸಕ್ತಿ ಮೂಡಿತು. ಇಂದು ಈ ಮಟ್ಟಕ್ಕೆ ಬೆಳೆದಿದ್ದೇನೆ.

| ಮಂಜುನಾಥ್ ಲಕ್ಕಣನವರ್ ರಾಮಯ್ಯ ತಾಂತ್ರಿಕ ಸಂಸ್ಥೆ ಸಹಾಯಕ ಪ್ರಾಧ್ಯಾಪಕ