ಹುಬ್ಬಳ್ಳಿ : ಇಲ್ಲಿನ ಉಣಕಲ್ನ ಸದ್ಗುರು ಸಿದ್ಧಪ್ಪಜ್ಜರ ಯುಗಾದಿ ಮಹೋತ್ಸವ, ರಥೋತ್ಸವ ಹಾಗೂ 104ನೇ ವರ್ಷದ ಪುಣ್ಯಾರಾಧನೆ ಮಹೋತ್ಸವ ಅಂಗವಾಗಿ ಮಾ. 16ರಿಂದ 30ರವರೆಗೆ ವಿವಿಧ ಧಾರ್ವಿುಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.
ಈ ಕುರಿತು ನಗರದಲ್ಲಿ ಸೋಮವಾರದಂದು ಸುದ್ದಿಗೋಷ್ಠಿಯಲ್ಲಿ ವಿವರ ನೀಡಿದ ಸದ್ಗುರು ಸಿದ್ಧಪ್ಪಜ್ಜ ಹೊಸಮಠದ ಟ್ರಸ್ಟ್ ಕಮಿಟಿ ಅಧ್ಯಕ್ಷ ರಾಜಣ್ಣ ಕೊರವಿ, 16ರಂದು ಬೆಳಗ್ಗೆ 10.30ಕ್ಕೆ ಜಾತ್ರಾ ಮಹೋತ್ಸವ ಉದ್ಘಾಟನೆ ಸಮಾರಂಭ ನಡೆಯಲಿದ್ದು, ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಹಾಗೂ ಜಿಲ್ಲೆಯ ಎಲ್ಲ ಶಾಸಕರು ಭಾಗವಹಿಸುವರು ಎಂದು ಹೇಳಿದರು.
ಸಂಜೆ 7 ಗಂಟೆಗೆ ಪ್ರವಚನ ಉದ್ಘಾಟನೆ ಸಮಾರಂಭ ನಡೆಯಲಿದ್ದು, ರುದ್ರಾಕ್ಷಿಮಠದ ಶ್ರೀ ಬಸವಲಿಂಗ ಸ್ವಾಮೀಜಿ ಸಾನ್ನಿಧ್ಯ ವಹಿಸುವರು. ಮುಂಡರಗಿ ತೋಂಟದಾರ್ಯ ಮಠ, ಬೈಲೂರ ನಿಷ್ಕಲ ಮಂಟಪದ ನಿಜಗುಣಪ್ರಭು ಸ್ವಾಮೀಜಿ ಅವರು 16 ರಿಂದ 29ರವರೆಗೆ ನಿತ್ಯ ಸಂಜೆ 7 ಗಂಟೆಗೆ ಪ್ರವಚನ ನೀಡುವರು ಎಂದರು.
ಉಪ್ಪಿನಬೆಟಗೇರಿಯ ಶ್ರೀ ಕುಮಾರ ವಿರೂಪಾಕ್ಷ ಸ್ವಾಮೀಜಿ, ಧಾರವಾಡ ಮುರುಘಾಮಠದ ಶ್ರೀ ಮಲ್ಲಿಕಾರ್ಜುನ ಸ್ವಾಮೀಜಿ, ಕುಂದಗೋಳ ಕಲ್ಯಾಣಪುರ ಮಠದ ಶ್ರೀ ಬಸವಣ್ಣಜ್ಜನವರು, ಮನಗುಂಡಿಯ ಶ್ರೀ ಬಸವಾನಂದ ಸ್ವಾಮೀಜಿ, ಗದಗ ತೋಂಟದಾರ್ಯ ಮಠದ ಶ್ರೀ ತೋಂಟದ ಸಿದ್ಧರಾಮ ಸ್ವಾಮೀಜಿ ಅವರು 25ರಿಂದ 29ರವರೆಗೆ ನಡೆಯುವ ಪ್ರವಚನ ಕಾರ್ಯಕ್ರಮದ ಸಾನ್ನಿಧ್ಯ ವಹಿಸುವರು ಎಂದು ತಿಳಿಸಿದರು.
30ರಂದು ಬೆಳಗ್ಗೆ ಸಿದ್ಧಪ್ಪಜ್ಜರ ಗದ್ದುಗೆಗೆ ರುದ್ರಾಭಿಷೇಕ ಹಾಗೂ ಮಹಾಪೂಜೆ ನೆರವೇರಲಿದೆ. 10.30ಕ್ಕೆ ಸಾಮೂಹಿಕ ವಿವಾಹ ಏರ್ಪಡಿಸಿದ್ದು, ಸಂಜೆ 5.30ಕ್ಕೆ ರಥೋತ್ಸವ ಜರುಗಲಿದೆ. ಜಾತ್ರಾ ಮಹೋತ್ಸವ ಅಂಗವಾಗಿ ಮಾ. 31ರಿಂದ ಏ. 3ರವರೆಗೆ ಕುಸ್ತಿ ಪಂದ್ಯಾವಳಿ, ಏ. 6ಕ್ಕೆ ಚಕ್ಕಡಿ ಓಡಿಸುವ ಸ್ಪರ್ಧೆ ಏರ್ಪಡಿಸಲಾಗಿದೆ. ನಿತ್ಯ ಅನ್ನಪ್ರಸಾದ ವ್ಯವಸ್ಥೆ ಇರಲಿದೆ ಎಂದರು.
ಅಪ್ಪಣ್ಣ ನಾಡಿಗೇರ, ಶಿವಣ್ಣ ರೆಡ್ಡಿ, ಶಿವಾಜಿ ಕನ್ನಿಕೊಪ್ಪ, ಗುರುಸಿದ್ದಪ್ಪ ಮೆಣಸಿನಕಾಯಿ ಅವರು ಸುದ್ದಿಗೋಷ್ಠಿಯಲ್ಲಿ ಇದ್ದರು.