ಬೆಂಗಳೂರು : ಭಾರತೀಯ ಹಬ್ಬ ಹರಿದಿಗಳು ಕೇವಲ ಸಿಹಿ ಊಟಕ್ಕೆ, ಪೂಜೆ ಪುನಸ್ಕಾರಕ್ಕೆ ಸೀಮಿತವಾದ ಸಂಪ್ರದಾಯಗಳಷ್ಟೆ ಅಲ್ಲ. ಬದಲಾಗಿ ವೈಜ್ಞಾನಿಕ ಹಿನ್ನೆಲೆ ಇರುವ ಅರ್ಥಪೂರ್ಣ ಆಚರಣೆಗಳು. ಆ ನಿಟ್ಟಿನಲ್ಲಿ ಹಿಂದು ಪಂಚಾಂಗದ ಪ್ರಕಾರ ಭಾರತೀಯರ ನಿಜವಾದ ಹೊಸ ವರ್ಷ ಆರಂಭವಾಗುವ ಯುಗಾದಿ ಹಬ್ಬಕ್ಕೆ ಸನಾತನ ಹಿನ್ನೆಲೆ ಇದೆ.
ಯುಗಾದಿ ಎಂದರೆ ಯುಗದ ಆದಿ ಎಂದರ್ಥ. ಹಿಂದೂ ಪೂರಾಣ, ಶಾಸ್ತ್ರಗ್ರಂಥಗಳ ಪ್ರಕಾರ ಸೃಷ್ಟಿಕರ್ತನಾದ ಬ್ರಹ್ಮದೇವರು ಯುಗಾದಿಯಂದು ಬ್ರಹ್ಮಾಂಡವನ್ನು ಸೃಷ್ಟಿಸಿದನೆಂಬ ಪ್ರತೀತಿ ಇದೆ. ಭಾರತೀಯ ಪಂಚಾಂಗದ ನವಮಾಸಗಳು ಆರಂಭವಾಗುವ ಈ ದಿನ ಚೈತ್ರ ಶುದ್ಧ ಪಾಡ್ಯ ಅಥವಾ ಯುಗಾದಿ. 12ನೇ ಶತಮಾನದಲ್ಲಿ ಭಾರತೀಯ ಶ್ರೇಷ್ಠ ಗಣಿತ ಶಾಸ್ತ್ರಜ್ಞ ಭಾಸ್ಕರಾಚಾರ್ಯನು ಖಗೋಳಶಾಸ್ತ್ರವನ್ನು ಆಧರಿಸಿ ಯುಗಾದಿಯ ದಿನದ ಸೂರ್ಯೋದಯದವನ್ನು ಹೊಸವರ್ಷಾರಂಭ ಎಂದು ವೈಜ್ಞಾನಿಕವಾಗಿ ನಿರೂಪಿಸಿದ್ದಾನೆ.
ಯುಗಾದಿ ಆಚರಣೆಯಲ್ಲಿ ಎರಡು ವಿಧಗಳಿವೆ. ಚಾಂದ್ರಮಾನ ಯುಗಾದಿ (ಚೈತ್ರಮಾಸದ ಶುಕ್ಲಪಕ್ಷ ಪಾಡ್ಯ) ಮತ್ತು ಸೌರಮಾನ ಯುಗಾದಿ (ಸಾಮಾನ್ಯವಾಗಿ ಏಪ್ರಿಲ್ ಮಧ್ಯಭಾಗದಲ್ಲಿ ಬರುತ್ತದೆ). ದಕ್ಷಿಣ ಭಾರತದ ಕರ್ನಾಟಕ, ತೆಲಂಗಾಣ, ಆಂಧ್ರಪ್ರದೇಶ, ಮಹಾರಾಷ್ಟ್ರ, ತಮಿಳುನಾಡಿನ ಕೆಲ ಭಾಗಗಳಲ್ಲಿ ಚಾಂದ್ರಮಾನ ಪದ್ಧತಿ ಅನುಸರಿಸಿದರೆ, ಕೇರಳ, ತಮಿಳುನಾಡಿನ ಉಳಿದ ಭಾಗಗಳಲ್ಲಿ ಸೌರಮಾನ ಯುಗಾದಿ ಆಚರಿಸುತ್ತಾರೆ.
ಭಾರತದ ಎಲ್ಲ ಆಚರಣೆ, ಸಂಸ್ಕೃತಿಗೆ ಆಧಾರವಾಗಿರುವ ವೇದಗಳಲ್ಲಿಯೂ ಯುಗಾದಿ ಬಗ್ಗೆ ಉಲ್ಲೇಖಗಳಿದ್ದು, ಮಂತ್ರ-ಶ್ಲೋಕಗಳು ಅದನ್ನು ಸಾಭೀತು ಪಡಿಸುತ್ತವೆ. ಸಾಮಾನ್ಯವಾಗಿ ಯುಗಾದಿಯಂದು ಒಂದು ಮಂತ್ರವನ್ನು ಹೇಳಲಾಗುತ್ತದೆ.
ಶತಾಯು: ವಜ್ರದೇಹಯಾ ಸರ್ವ ಸಂಪತ್ಕರಾಯಚ
ಸರ್ವಾರಿಷ್ಟ ವಿನಾಶಾಯ ನಿಂಬಕಂ ದಳ ಭಕ್ಷಣಂ ॥
‘‘ನೂರು ವರ್ಷಗಳ ಆಯುಷ್ಯ , ಸದೃಢವಾದ ಆರೋಗ್ಯ, ಸಕಲ ಸಂಪತ್ತುಗಳ ಪ್ರಾಪ್ತಿಗಾಗಿ, ಸಕಲ ಅರಿಷ್ಟಗಳ ನಿವಾರಣೆಗಾಗಿ ಬೇವು-ಬೆಲ್ಲ ಸೇವನೆ ಮಾಡುತ್ತೇನೆ’ ಎಂಬುದು ಈ ಶ್ಲೋಕದ ಅರ್ಥ.
ಯಾವುದೇ ಹಬ್ಬಗಳನ್ನು ಆಚರಿಸುವುದರ ಹಿಂದೆ ನಮ್ಮ ಪೂರ್ವಿಕರು ವೈಜ್ಞಾನಿಕ ಹಿನ್ನೆಲೆಯನ್ನು ಗುಪ್ತವಾಗಿ ಅಡಗಿಸಿಟ್ಟಿದ್ದಾರೆ. ಚಳಿಗಾಲದಲ್ಲಿ ಬರುವ ಸಂಕ್ರಾಂತಿಯಂದು ಎಳ್ಳು ಮತ್ತು ಬೆಲ್ಲದ ಮಿಶ್ರಣವನ್ನು ತಿಂದು ತ್ವಚೆಯನ್ನು ರಕ್ಷಿಸಿಕೊಳ್ಳುವ ವೈದ್ಯವಿಜ್ಞಾನವನ್ನು ತಿಳಿಸಿದ್ದರೆ; ವೈಶಾಖದ ಮುನ್ನ ಬರುವ ಚೈತ್ರ ಮಾಸದ ಯುಗಾದಿ ಹಬ್ಬದಂದು ಎಣ್ಣೆ ಸ್ನಾನದ ಮೂಲಕ ದೇಹದ ಉಷ್ಣಾಂಶವನ್ನು ತಹಬಂದಿಗೆ ತರುವ ಮುನ್ನೆಚ್ಚರಿಕೆ ಇದೆ. ಅಭ್ಯಂಜನದಿಂದ ಹಲವು ಸಮಸ್ಯೆಗಳು ನಿವಾರಣೆಯಾಗುತ್ತದೆ ಎಂಬುದನ್ನು ಆಯುರ್ವೇದ ಶಾಸ್ತ್ರ ವಿವರಿಸುತ್ತದೆ. ಮಾತ್ರವಲ್ಲ ದೇಹದ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಿ ದೈಹಿಕ ಸದೃಢತೆಗೆ ಸಹಕಾರಿಯಾದ ಬೇವನ್ನು ತಿನ್ನುವ ಪರಿಪಾಠವನ್ನು ರೂಢಿಸಿದ್ದಾರೆ. ಕಹಿಯಾಗಿರುವ ಭೇವನ್ನು ಮಾತ್ರ ತಿನ್ನಲು ಸಾಧ್ಯವಿಲ್ಲ ಎಂಬ ಕಾರಣಕ್ಕೆ ಅದಕ್ಕೆ ಬೆಲ್ಲವನ್ನು ಬೆರೆಸಿದ್ದಾರೆ. ಬೇವು ಬೆಲ್ಲದಲ್ಲಿ ಒಂದು ಸಾಮಾಜಿಕ ಸಿದ್ಧಾಂತವು ಅಡಗಿದೆ. ಜೀವನದಲ್ಲಿ ಕಷ್ಟ ಸುಖಗಳು ಬಂದಾಗ ಎರಡನ್ನೂ ಸಮಾನವಾಗಿ ಸ್ವೀಕರಿಸಿ ಬದುಕಿನಲ್ಲಿ ಮುನ್ನಡೆಯಬೇಕೆಂಬ ಮಾರ್ಮಿಕತೆ ಪ್ರತೀಕವಾಗಿ ಸಿಹಿ-ಕಹಿಗಳೆರಡನ್ನೂ ಬೆರೆಸಿ ಕೊಟ್ಟಿದ್ದಾರೆ.
ಯುಗಾದಿ ನಿಜವಾದ ಹೊಸವರ್ಷ ಎಂಬುದಕ್ಕೆ ಪ್ರಾಕೃತಿಕವಾಗಿಯೂ ಸಾಕ್ಷಿ ದೊರೆಯುತ್ತದೆ. ಪಾಶ್ಚಾತ್ಯರು ಆಚರಿಸುವ ಜನವರಿ ಹೊಸವರ್ಷಾಚರಣೆ ಸಂದರ್ಭದಲ್ಲಿ ಪ್ರಕೃತಿ ಪೂರ್ಣ ಬರಿದಾಗಿ ಕಾಣುತ್ತದೆ. ಆದರೆ ಭಾರತೀಯರ ಪಾಲಿನ ಹೊಸವರ್ಷವಾದ ವಸಂತಕಾಲದ ಯುಗಾದಿ ಸಂದರ್ಭದಲ್ಲಿ ಮರಗಿಡ ಬಳ್ಳಿಗಳೆಲ್ಲವೂ ಹಣ್ಣೆಲೆಗಳೆಲ್ಲವನ್ನೂ ಕಳೆದು ಹೊಸ ಚಿಗುರಿನಿಂದ ಕಂಗೊಳಿಸುತ್ತಿರುತ್ತವೆ. ಯಾವುದೇ ಹಬ್ಬ, ಸಮಾರಂಭಗಳಿಗೆ ಕಳೆ ತಂದುಕೊಡುವುದು ಹಸಿರು. ಅದರ ಪ್ರತೀಕವೇ ಮಾವಿನ ಎಲೆ, ಬಾಳೆಕಂಬ, ತೆಂಗಿನ ಚಪ್ಪರಗಳನ್ನು ಹಾಕಿ ಶುಭ ಕಾರ್ಯವನ್ನು ಆಚರಿಸುತ್ತೇವೆ. ಆದರೆ ಯುಗಾದಿ ವೇಳೆಯಲ್ಲಿ ನೈಸರ್ಗಿಕವಾಗಿ ಇಡೀ ಪ್ರಕೃತಿ ಹಸಿರು ತೋರಣದಂತೆ ಭಾಸವಾಗುವ ಮೂಲಕ ಯುಗಾದಿ ಹಬ್ಬವನ್ನು ಸ್ವಾಗತಿಸುತ್ತದೆ.