ವಿಜಯವಾಣಿ ಸುದ್ದಿಜಾಲ ಉಡುಪಿ
ಅಂಧಕಾರ ಕಳೆದು ಪ್ರತಿ ದಿನವೂ ಬಾಳಲ್ಲಿ ಬೆಳಕು ಬೆಳಗಲಿ ಎನ್ನುವುದೇ ಯುಗಾದಿಯ ಸಂದೇಶವಾಗಿದೆ. ಯುವಕ-ಯುವತಿಯರಲ್ಲಿ ಹೊಸ ವರುಷ ಹೊಸ ಹುಮ್ಮಸ್ಸು ಮೂಡಿಸಲಿ. ಗಾಂಭೀರ್ಯತೆ, ನಿಸ್ವಾರ್ಥದೊಂದಿಗೆ ದೇಶ, ಧರ್ಮ ಹಾಗೂ ಎಲ್ಲ ಬಗೆಯ ಸವಾಲು ಸ್ವೀಕರಿಸಿ ಅದರಿಂದ ಪಾರಾಗುವ ಶಕ್ತಿ ಲಭಿಸಲಿ ಎಂದು ಸಮಾನ ಮನಸ್ಕ ಕನ್ನಡಿಗರ ವೇದಿಕೆ ಅಧ್ಯಕ್ಷ, ಎಲ್ಐಸಿ ನಿವೃತ್ತ ಆಡಳಿತಾಧಿಕಾರಿ ಶ್ರೀನಿವಾಸ ರಾವ್ ಕೆ. ಆಶಯ ವ್ಯಕ್ತಪಡಿಸಿದರು.
ಉಡುಪಿಯ ಕಾತ್ಯಾಯಿನಿ ನಗರದಲ್ಲಿ ಸಮಾನ ಮನಸ್ಕ ಕನ್ನಡಿಗರ ವೇದಿಕೆಯಿಂದ ಯುಗಾದಿ ನಿಮಿತ್ತ ವಿಶ್ವಾವಸು ನಾಮ ಸಂವತ್ಸರ ಹಾಗೂ ಹೊಸವರ್ಷ ಆಚರಣೆ ನಿಮಿತ್ತ ಮಾ.30ರಂದು ಆಯೋಜಿಸಿದ್ದ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಪ್ರಸ್ತುತ ಕಾಲಘಟ್ಟದಲ್ಲಿ ತಂತ್ರಜ್ಞಾನದಿಂದ ಹೆಚ್ಚು ಸೌಲಭ್ಯ ಲಭಿಸುತ್ತಿದೆಯಾದರೂ ಮಾನವೀಯ ಸಂಬಂಧಗಳ ಕೊರತೆ ಕಾಣುತ್ತಿದೆ. ಹೀಗಾಗಿ ವಿದ್ಯಾರ್ಥಿಗಳು ಓದುವ ಹವ್ಯಾಸ ಬೆಳೆಸಿಕೊಂಡು ಸಂಸ್ಕೃತಿ ಹಾಗೂ ಪರಿಸರ ಉಳಿಸಿಕೊಳ್ಳಬೇಕಿದೆ. ಪರಿಸರ ಉಳಿದರೆ ಮುಂದಿನ ಪೀಳಿಗೆಗೆ ಶುದ್ಧ ನೀರು, ಗಾಳಿ ಸಿಗಲು ಸಾಧ್ಯ. ಈ ಯುಗಾದಿ ಹಬ್ಬವು ನಮಗೆಲ್ಲರಿಗೂ ಪರಿಸರ-ಸಂಸ್ಕೃತಿ ರಕ್ಷಿಸಲು ಮತ್ತು ಮಾನವೀಯತೆ ಬೆಳೆಯಲು ಪ್ರೇರಣೆಯಾಗಲಿ ಎಂದರು.
ಎನ್ಸಿಸಿ ಅಧಿಕಾರಿ ಎನ್.ರವೀಂದ್ರ ನಾಯಕ ಕುಂದಾಪುರ, ರಾಘವೇಂದ್ರ ಜಿ., ಸುರೇಶ ಬಿ. ಮಾತನಾಡಿದರು.
ಸುರೇಶ ಡಿ. ಕಾರ್ಯಕ್ರಮ ನಿರ್ವಹಿಸಿದರು. ರಮಾನಂದ ಎಸ್., ಐಶ್ವರ್ಯಾ ಆರ್., ನಳಿನಿ ಕೆ., ಆರಾಧ್ಯಾ ಜಿ.ಕೆ., ಹೇಮಲತಾ, ಶಿವಾನಿ, ಉಮೇಶ ಎಂ., ಸಿಂಧು ಡಿ, ರಾಮಕೃಷ್ಣ, ಚಂದ್ರಶೇಖರ, ರವೀಶ, ವಾಸುದೇವ, ಲಕ್ಷ್ಮೀ, ವಿಜಯಲಕ್ಷ್ಮೀ ಇತರರಿದ್ದರು.