ಮಂಡ್ಯ: ಇಲ್ಲಿನ ನೆಹರುನಗರದಲ್ಲಿ ಎಸ್.ಬಿ ಸಮುದಾಯ ಭವನದಲ್ಲಿ ಸಮರ್ಥನಂ ಅಂಗವಿಕಲರ ಸಂಸ್ಥೆ, ಎಸ್.ಬಿ ಎಜುಕೇಷನ್ ಟ್ರಸ್ಟ್, ಜಿಲ್ಲಾ ಉದ್ಯೋಗ ವಿನಿಮಯ ಕಚೇರಿ ಸಹಯೋಗದಲ್ಲಿ ಸೆ.21ರಂದು ಜಿಲ್ಲಾ ಮಟ್ಟದ ಉದ್ಯೋಗ ಮೇಳ ಹಮ್ಮಿಕೊಳ್ಳಲಾಗಿದೆ. ಸುಮಾರು 30 ರಿಂದ 35 ಕಂಪನಿಗಳು ಭಾಗವಹಿಸಲಿವೆ ಎಂದು ಟ್ರಸ್ಟ್‌ನ ಕಾರ್ಯದರ್ಶಿ ಮೀರಾ ಶಿವಲಿಂಗಯ್ಯ ಹೇಳಿದರು.
ಬೆಳಗ್ಗೆ 10 ರಿಂದ ಸಂಜೆ 4ರವರೆಗೆ ಮೇಳ ನಡೆಯಲಿದೆ. 18 ವರ್ಷದಿಂದ 35 ವರ್ಷದೊಳಗಿನವರು ಭಾಗವಹಿಸಬಹುದಾಗಿದೆ. ಎಸ್‌ಎಸ್‌ಎಲ್‌ಸಿ, ಪಿಯುಸಿ, ಡಿಪ್ಲೊಮಾ ಮತ್ತು ಯಾವುದೇ ಪದವಿ ವಿದ್ಯಾರ್ಹತೆ ಹೊಂದಿರುವವರು ಸ್ವಂತ ಖರ್ಚಿನಲ್ಲಿ ಸಂದರ್ಶನಕ್ಕೆ ಹಾಜರಾಗಬಹುದು ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಸಮರ್ಥನಂ ಸಂಸ್ಥೆಯು ಯುವ ಅಂಗವಿಕಲರ ಸಬಲೀಕರಣ ಮಾಡುವ ಉದ್ದೇಶದಿಂದ ದೇಶಾದ್ಯಂತ ಸರಣಿ ಉದ್ಯೋಗ ಮೇಳವನ್ನು ಆಯೋಜಿಸಿದೆ. ಕೋವಿಡ್ ಸಾಂಕ್ರಾಮಿಕ ರೋಗದಿಂದಾಗಿ ಕೆಲಸ ಕಳೆದುಕೊಂಡಿರುವವರಿಗೆ ಮರಳಿ ಉದ್ಯೋಗಾವಕಾಶ ಕಲ್ಪಿಸುವ ಸಲುವಾಗಿ ವೇದಿಕೆ ಕಲ್ಪಿಸಿಕೊಟ್ಟಿದೆ. ಮೇಳದಲ್ಲಿ 1000 ರಿಂದ 1,500 ಉದ್ಯೋಗಾಕಾಂಕ್ಷಿಗಳು ಭಾಗಿಯಾಗುವ ನಿರೀಕ್ಷೆಯಿದೆ. ಉದ್ಯೋಗಾಕಾಂಕ್ಷಿಗಳು ಬಯೋಡೆಟಾ 10 ಪ್ರತಿ, ಪಾಸ್‌ಪೋರ್ಟ್ ಅಳತೆಯ ಐದು ಭಾವಚಿತ್ರ, ಶೈಕ್ಷಣಿಕ ಅರ್ಹತೆಯ ನಕಲು ಪ್ರತಿ, ಆಧಾರ್ ಕಾರ್ಡ್‌ನೊಂದಿಗೆ ಬರಬೇಕು. ಮಾಹಿತಿಗೆ ದೂ.ಸಂ 08232-295124, 9480812121, 9972587898 ಸಂಪರ್ಕಿಸಬಹುದು ಎಂದರು.
ಜಿಲ್ಲಾ ಉದ್ಯೋಗ ವಿನಿಮಯ ಕಚೇರಿಯ ಸಹಾಯಕ ಉದ್ಯೋಗಾಧಿಕಾರಿ ವಿ.ನವೀನ್‌ಕುಮಾರ್, ಮಾಂಡವ್ಯ ಕೈಗಾರಿಕಾ ತರಬೇತಿ ಕೇಂದ್ರದ ಪ್ರಾಂಶುಪಾಲ ಲೋಹಿತ್‌ಕುಮಾರ್, ತಾವರೆಗೆರೆ ಕೈಗಾರಿಕಾ ತರಬೇತಿ ಕೇಂದ್ರದ ಪ್ರಾಂಶುಪಾಲ ಎಂ.ಸಿ.ಪ್ರವೀಣ್‌ಕುಮಾರ್, ಸಮರ್ಥನಂ ಸಂಸ್ಥೆಯ ಅಖಿಲ ಭಾರತ ಉದ್ಯೋಗ ಅಧಿಕಾರಿ ಕೆ.ಸತೀಶ್, ಉದ್ಯೋಗ ಅಧಿಕಾರಿ ವೀರಭದ್ರ ಪಾಟೀಲ್, ಜಾಬ್‌ಡೆವಲಪ್‌ಮೆಂಟ್ ಎಕ್ಸಿಕ್ಯೂಟೀವ್ ಜಾನವಿ ಹಾಜರಿದ್ದರು.