ಮಂಡ್ಯ: ಜಿಲ್ಲೆಯಲ್ಲಿ ಹೆಚ್ಚಿನ ಅಭ್ಯರ್ಥಿಗಳಿಗೆ ಉದ್ಯೋಗ ಒದಗಿಸುವ ದೃಷ್ಟಿಯಿಂದ ಇನ್ನು 2 ತಿಂಗಳೊಳಗೆ ಮತ್ತೆ ಬೃಹತ್ ಉದ್ಯೋಗ ಮೇಳ ಆಯೋಜಿಸಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೆ.ಗೋಪಾಲಯ್ಯ ತಿಳಿಸಿದರು.
ನಗರದ ಪಿಇಎಸ್ ಇಂಜಿನಿಯರಿಂಗ್ ಕಾಲೇಜಿನಲ್ಲಿ ಜಿಲ್ಲಾಡಳಿತ, ಕೌಶಲಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ, ಕರ್ನಾಟಕ ಕೌಶಲ ಅಭಿವೃದ್ಧಿ ನಿಗಮ, ಜಿಲ್ಲಾ ಕೌಶಲಾಭಿವೃದ್ಧಿ ಅಧಿಕಾರಿಗಳ ಕಚೇರಿ ಹಾಗೂ ಪಿಇಎಸ್ ಇಂಜಿನಿಯರಿಂಗ್ ಕಾಲೇಜಿನ ಸಹಯೋಗದಲ್ಲಿ ಆಯೋಜಿಸಿದ್ದ ಬೃಹತ್ ಉದ್ಯೋಗ ಮೇಳವನ್ನು ಉದ್ಘಾಟಿಸಿ ಮಾತನಾಡಿದರು.
ಪ್ರತಿಯೊಬ್ಬರಿಗೂ ಉದ್ಯೋಗ ಒದಗಿಸಬೇಕು ಎಂಬ ಆಶಯದೊಂದಿಗೆ ಸರ್ಕಾರ ಕೌಶಲಾಭಿವೃದ್ಧಿ ಇಲಾಖೆ ಮೂಲಕ ವಿವಿಧ ತರಬೇತಿಗಳನ್ನು ಆಯೋಜಿಸುತ್ತಿದೆ ಎಂದರು.
ಉದ್ಯೋಗ ಮೇಳದಲ್ಲಿ ಸ್ಕಿಲ್ ಕನೆಕ್ಟ್ ಆನ್‌ಲೈನ್ ಮೂಲಕ ಸಾವಿರಾರು ಅಭ್ಯರ್ಥಿಗಳು ಹೆಸರು ನೋಂದಣಿ ಮಾಡಿಕೊಂಡಿದ್ದಾರೆ. ಆಫ್‌ಲೈನ್ ಮೂಲಕ ಕೂಡ ಸ್ಥಳದಲ್ಲೇ ಹೆಸರು ನೋಂದಣಿ ಮಾಡಿಕೊಳ್ಳುತ್ತಿದ್ದಾರೆ. 103 ಕಂಪನಿಗಳು ಭಾಗವಹಿಸಿ ತಮಗೆ ಬೇಕಿರುವ ಕೌಶಲವುಳ್ಳ ಅಭ್ಯರ್ಥಿಗಳನ್ನು ಆಯ್ಕೆ ಮಾಡಿಕೊಳ್ಳಲು ಕಾರ್ಯಪ್ರವೃತ್ತರಾಗಿದ್ದಾರೆ. ಉದ್ಯೋಗ ಮೇಳದಲ್ಲಿ ಭಾಗವಹಿಸುವ ಅಭ್ಯರ್ಥಿಗಳು ಉದ್ಯೋಗ ಸಿಗದಿದ್ದರೆ ನಿರಾಸೆಗೆ ಒಳಗಾಗಬಾರದು. ಮುಂದೆ ಬಹಳಷ್ಟು ಅವಕಾಶಗಳಿವೆ. ಜೀವನದಲ್ಲಿ ಗುರಿ ನಿಗದಿ ಮಾಡಿಕೊಂಡು ಅದರ ಅನ್ವಯ ಸಿದ್ಧತೆಗಳನ್ನು ಮಾಡಿಕೊಳ್ಳಿ. ಇನ್ನೆರಡು ತಿಂಗಳಲ್ಲಿ ಇನ್ನೊಂದು ಬೃಹತ್ ಉದ್ಯೋಗ ಮೇಳವನ್ನು ಜಿಲ್ಲೆಯಲ್ಲಿ ಆಯೋಜಿಸಲಾಗುವುದು. ಇಲ್ಲಿ ನೋಂದಣಿಯಾದವರಿಗೂ ಆ ವೇಳೆಯೂ ಅವಕಾಶ ಕಲ್ಪಿಸಲಾಗುವುದು ಎಂದರು.
ಜಿಲ್ಲಾಧಿಕಾರಿ ಡಾ.ಎಚ್.ಎನ್. ಗೋಪಾಲಕೃಷ್ಣ ಮಾತನಾಡಿ, ಭಾರತ ಹೆಚ್ಚು ಯುವಜನತೆಯನ್ನು ಹೊಂದಿದೆ. ದುಡಿಯುವ ಕೈಗಳಿಗೆ ಉದ್ಯೋಗ ಒದಗಿಸುವುದು ದೊಡ್ಡ ಸವಾಲಾಗಿದೆ. ಉನ್ನತ ಶಿಕ್ಷಣ ಎಲ್ಲರೂ ಪಡೆಯುವುದು ಕಷ್ಟಕರ. ಎಸ್‌ಎಸ್‌ಎಲ್ಸಿ, ಪಿಯುಸಿ, ಡಿಪ್ಲೊಮಾ ವಿದ್ಯಾರ್ಹತೆ ಹೊಂದಿರುವವರೂ ವಿವಿಧ ಕೌಶಲಾಭಿವೃದ್ಧಿ ತರಬೇತಿ ಪಡೆದು ಉದ್ಯೋಗ ಪಡೆದುಕೊಳ್ಳಬಹುದು. ಸರ್ಕಾರದ ಯೋಜನೆಗಳ ಮೂಲಕ ಸ್ವಯಂ ಉದ್ಯೋಗ ಕೈಗೊಂಡು ಅವರೇ ಉದ್ಯೋಗದಾತರು ಸಹ ಆಗಬಹುದು ಎಂದರು.
ಕೇಂದ್ರ ಹಾಗೂ ರಾಜ್ಯ ಸರ್ಕಾರ ಹಲವಾರು ಯೋಜನೆಗಳನ್ನು ರೂಪಿಸಿ ಉದ್ಯೋಗ ಪಡೆಯಲು ಕೌಶಲಾಭಿವೃದ್ಧಿ ತರಬೇತಿಗಳನ್ನು ನೀಡುತ್ತಿದೆ. ಉದ್ಯೋಗ ಮೇಳಗಳನ್ನು ಆಯೋಜಿಸುತ್ತಿದೆ. ಕಂಪನಿಗಳು ಹಾಗೂ ಉದ್ದಿಮೆಗಳಿಗೆ ಉದ್ಯೋಗ ನೀಡಲು ಕೆಲವು ಕೌಶಲಗಳನ್ನು ನಿಗದಿ ಮಾಡಿಕೊಂಡಿರುತ್ತದೆ. ಅದರ ಅನ್ವಯ ಕಾಲೇಜು ವಿದ್ಯಾರ್ಥಿಗಳಿಗೆ ತರಬೇತಿ ನೀಡಲಾಗುತ್ತಿದೆ. ಕೌಶಲಾಭಿವೃದ್ಧಿ ಇಲಾಖೆ ವತಿಯಿಂದ ಮುಖ್ಯಮಂತ್ರಿಗಳ ಕೌಶಲ ಕರ್ನಾಟಕ ಯೋಜನೆಯಡಿ ಜಿಲ್ಲೆಯಲ್ಲಿ 4 ತರಬೇತಿ ಕೇಂದ್ರಗಳಲ್ಲಿ 270 ಫಲಾನುಭವಿಗಳಿಗೆ ತರಬೇತಿ ನೀಡಲಾಗುತ್ತಿದೆ. ಯಶಸ್ವಿ ಕ್ರೆಡಿಟ್ ಲಿಂಕ್ ಯೋಜನೆಯಡಿ ಉದ್ಯೋಗ ಕೈಗೊಳ್ಳಲು 73 ಸಂಘಗಳಿಗೆ ತಲಾ 1 ಲಕ್ಷ ರೂ. ಸಾಲ ನೀಡಲಾಗುತ್ತಿದೆ ಎಂದು ವಿವರಿಸಿದರು.
ಶಾಸಕ ಎಂ.ಶ್ರೀನಿವಾಸ್, ಪಿಇಟಿ ಅಧ್ಯಕ್ಷ ಕೆ.ಎಸ್.ವಿಜಯಾನಂದ, ಜಿಪಂ ಸಿಇಒ ಶಾಂತಾ ಎಲ್.ಹುಲ್ಮನಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎನ್.ಯತೀಶ್, ಪಿಇಟಿ ಕಾರ್ಯದರ್ಶಿ ಶಿವಪ್ರಸಾದ್, ಮಂಡ್ಯ ವಿಶ್ವವಿದ್ಯಾಲಯದ ಕುಲಸಚಿವ ಡಾ.ನಾಗರಾಜ್, ಪಿಇಎಸ್ ಇಂಜಿನಿಯರಿಂಗ್ ಕಾಲೇಜಿನ ಪ್ರಾಂಶುಪಾಲ ಮಹಾಲಿಂಗೇಗೌಡ, ಕೌಶಲಾಧಿಕಾರಿ ವೇಣುಗೋಪಾಲ್ ಇತರರಿದ್ದರು.