ಹಾವೇರಿ: ಕೌಶಲಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ ವತಿಯಿಂದ ಸರ್ವರಿಗೂ ಉದ್ಯೋಗ ಕಾರ್ಯಕ್ರಮದಡಿ ಫೆ.14ರಂದು ಪಿಬಿ ರಸ್ತೆಯ ಜೆ.ಪಿ.ರೋಟರಿ ಹಳೇ ಕಟ್ಟಡದಲ್ಲಿ ‘ಜಿಲ್ಲಾ ಮಟ್ಟದ ಉದ್ಯೋಗ ಮೇಳ’ ಆಯೋಜಿಸಲಾಗಿದೆ ಎಂದು ಶಾಸಕ ನೆಹರು ಓಲೇಕಾರ ಹೇಳಿದರು.
ನಗರದ ಪ್ರವಾಸಿ ಮಂದಿರದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬೆಳಗ್ಗೆ 9 ಗಂಟೆಯಿಂದ ಸಂಜೆ 4 ಗಂಟೆವರೆಗೆ ಮೇಳ ನಡೆಯಲಿದೆ. ಈಗಾಗಲೇ 64 ಕಂಪನಿಗಳನ್ನು ಸಂಪರ್ಕಿಸಲಾಗಿದ್ದು, 10 ಕಂಪನಿಗಳು ಮೇಳದಲ್ಲಿ ಭಾಗವಹಿಸಲು ಒಪ್ಪಿಕೊಂಡಿವೆ. ಈ ಕಂಪನಿಗಳಲ್ಲಿ ಖಾಲಿ ಇರುವ 143 ಹುದ್ದೆಗಳಿಗೆ ಮೇಳದ ಮೂಲಕ ನೇಮಕಾತಿ ನಡೆಯಲಿದೆ. ಮೇಳದಲ್ಲಿ ಸುಮಾರು 800ಕ್ಕಿಂತ ಹೆಚ್ಚು ಅಭ್ಯರ್ಥಿಗಳು ಭಾಗವಹಿಸಬಹುದು, ಅಂದಾಜು 500 ನಿರುದ್ಯೋಗಿಗಳಿಗೆ ಉದ್ಯೋಗ ದೊರೆಯುವ ಉದ್ದೇಶವಿದೆ ಎಂದು ವಿವರಿಸಿದರು.
ಕೌಶಲಾಭಿವೃದ್ಧಿ ಇಲಾಖೆ ಜಿಲ್ಲಾ ವ್ಯವಸ್ಥಾಪಕ ಸಂಜಯ ಕೋರೆ, ನಗರ ಸಭೆ ಸದಸ್ಯರಾದ ಶಿವರಾಜ ಮತ್ತಿಹಳ್ಳಿ, ಬಾಬುಸಾಬ ಮೊಮಿನಗಾರ, ಲಲತಾ ಗುಂಡೇನಹಳ್ಳಿ, ನಿಂಗನಗೌಡ ಹೊಸಮನಿ, ಇತರರಿದ್ದರು.