ಕನಕಪುರ: ಕೇಂದ್ರ ಸರ್ಕಾರದ ಅನುದಾನಿತ ಉದ್ಯೋಗ ಖಾತ್ರಿ ಯೋಜನೆಯಲ್ಲಿ ನಿಯಮ ಉಲ್ಲಂಸಿರುವುದು ಹಾಗೂ ಅಕ್ರಮ ನಡೆದಿರುವುದು ಸಾಮಾಜಿಕ ಲೆಕ್ಕಪರಿಶೋಧನಾ ವರದಿಯಲ್ಲಿ ಬಹಿರಂಗಗೊಂಡಿದೆ.
ತಾಲೂಕಿನ ಕಸಬಾ ಹೋಬಳಿ ಶಿವನಹಳ್ಳಿ ಗ್ರಾಮ ಪಂಚಾಯತಿಯಲ್ಲಿ ಗ್ರಾಪಂ ಅಧ್ಯಕ್ಷ ಎ.ಎಂ. ಪ್ರೇಮಕುಮಾರ್ ಅಧ್ಯಕ್ಷತೆಯಲ್ಲಿ ಶುಕ್ರವಾರ ನಡೆದ 2ನೇ ಹಂತದ ಸಾಮಾಜಿಕ ಲೆಕ್ಕಪರಿಶೋಧನೆ ಮತ್ತು ಗ್ರಾಮ ಸಭೆಯಲ್ಲಿ ಜಿಲ್ಲಾ ಲೆಕ್ಕಪರಿಶೋಧಕ ಸಂಯೋಜಕ ಶ್ರೀನಿವಾಸ್ ಮತ್ತು ತಾಲೂಕು ಸಂಯೋಜಕಿ ಕಮಲಮ್ಮ ಅವರು ಮಂಡಿಸಿದ ವರದಿಯಲ್ಲಿ ಅಕ್ರಮ ನಡೆದಿರುವುದು ಬೆಳಕಿಗೆ ಬಂದಿದೆ.
ಗ್ರಾಪಂ ವ್ಯಾಪ್ತಿಯಲ್ಲಿ ನಡೆದಿರುವ ಬಹುತೇಕ ಕಾಮಗಾರಿ ಗಳು ನಿಯಮ ಉಲ್ಲಂಘನೆ ಹಾಗೂ ದುರುಪಯೋಗದಿಂದ ಕೂಡಿವೆ. ಒಟ್ಟು 220 ಕಾಮಗಾರಿಗಳು ಪೂರ್ಣಗೊಂಡಿವೆ. ಕೆಲವು ಗ್ರಾಮಗಳಲ್ಲಿ ಮೊದಲ 25 ಕಾಮಗಾರಿಗಳ ಪೈಕಿ ಚೆಕ್‌ಡ್ಯಾಂ, ದನದ ಕೊಟ್ಟಿಗೆ ಹಾಗೂ ಅಂಗನವಾಡಿ ಕಾಮಗಾರಿಗಳಲ್ಲಿ ಅಂದಾಜು ಹಾಗೂ ತಾಂತ್ರಿಕ ಅನುಮೋದನೆ ಇಲ್ಲದೆ ಹಾಗೂ ಕಾಮಗಾರಿಗಳು ಪೂರ್ಣಗೊಳ್ಳದೇ ಇದ್ದರೂ ಪಂಚಾಯಿತಿಯಿಂದ ಹಣ ಬಿಡುಗಡೆ ಮಾಡಲಾಗಿದೆ. ಇದಕ್ಕೆ ಹೊಣೆಯಾರು ಎಂದು ಪ್ರಶ್ನಿಸಿದ ಸಾಮಾಜಿಕ ಲೆಕ್ಕಪರಿಶೋಧನಾ ಅಧಿಕಾರಿಗಳು, ಈ ಹಣ ವಾಪಸ್ ತರಿಸುವ ವ್ಯವಸ್ಥೆ ಮಾಡುವಂತೆ ತಾಕೀತು ಮಾಡಿದರು.
ಲೆಕ್ಕ ಪರಿಶೋಧನಾ ಹಂತದಲ್ಲಿ ಕೆಲವು ಕಾಮಗಾರಿಗಳಿಗೆ ದಾಖಲೆಗಳಿದ್ದರೂ 2 ಮತ್ತು 3ನೇ ಹಂತದ ಫೋಟೋಗಳಿಲ್ಲ. ಅಂದಾಜು ವೆಚ್ಚಗಳೂ ಇಲ್ಲ. ಬಹುತೇಕ ದನದ ಕೊಟ್ಟಿಗೆ ನಿರ್ಮಾಣದಲ್ಲಿ ಸಾಕಷ್ಟು ದುರುಪಯೋಗ ಕಂಡುಬಂದಿದೆ. ದನದ ಕೊಟ್ಟಿಗೆ ನಿರ್ಮಾಣ ಮಾಡದೇ ಮತ್ತು ಮಾಡಿರುವ ಕಾಮಗಾರಿಗಳನ್ನು ಹೊಡೆದು ಹಾಕಿರುವ ಪ್ರಕರಣಗಳು ಪರಿಶೀಲನಾ ವೇಳೆ ಕಂಡುಬಂದಿವೆ. ಇವುಗಳ ಹಣವನ್ನೂ ಸಹ ಸರ್ಕಾರಕ್ಕೆ ಹಿಂದಿರಿಗಿಸುವ ಕ್ರಮ ಕೈಗೊಳ್ಳಬೇಕೆಂದು ಗ್ರಾಪಂ ಅಭಿವೃದ್ಧಿ ಅಧಿಕಾರಿ ವಿನುತಾರಿಗೆ ಸೂಚಿಸಿದರು.
ಸೀಗೆಕೋಟೆ ಗ್ರಾಮದ ಕೃಷ್ಣೇಗೌಡ ಮತ್ತು ಹಲವರು ಮಾತನಾಡಿ, ಗ್ರಾಮದಲ್ಲಿ ವರ್ಷದಿಂದ ಶಾಲಾ ಮಕ್ಕಳು ಮರದ ಕೆಳಗೆ ಕುಳಿತು ಪಾಠ ಕಲಿಯುತ್ತಿದ್ದಾರೆ. ಇರುವ ಶಾಲಾ ಕಾಂಪೌಂಡ್ ಸುತ್ತಲೂ ಚರಂಡಿ ವ್ಯವಸ್ಥೆಯಿಲ್ಲದೆ ಗಬ್ಬು ನಾರುತ್ತಿದೆ. ಗ್ರಾಮದಲ್ಲಿ ಅಂಗನವಾಡಿ ಕೇಂದ್ರದ ನಿರ್ಮಾಣ ಮಾಡುವಂತೆ ಒತ್ತಾಯಿಸಿದರು.
ಪಿಡಿಒ ವಿನುತಾ ಮಾತನಾಡಿ, ಗ್ರಾಮಗಳ ಅಭಿವೃದ್ಧಿಗೆ ನರೇಗಾ ವರದಾನವಾಗಿದೆ. ಯಾವುದೇ ಕಾಮಗಾರಿ ಬೇಕಾದಲ್ಲಿ ನೇರವಾಗಿ ಕಚೇರಿಯಲ್ಲಿ ನೋಂದಾಯಿಸಿಕೊಳ್ಳಬಹುದು. ಸೀಗೆಕೋಟೆ ಗ್ರಾಮದ ಸಮಸ್ಯೆಗಳನ್ನು ಮತ್ತೊಮ್ಮೆ ಭೇಟಿ ಮಾಡಿ ಬಗೆಹರಿಸಿಕೊಡುವುದಾಗಿ ಭರವಸೆ ನೀಡಿದರು. ವಿವಿಧ ಇಲಾಖೆ ಅಧಿಕಾರಿಗಳು ಸಭೆಯಲ್ಲಿ ಪಾಲ್ಗೊಂಡಿದ್ದರು. ಉಪಾಧ್ಯಕ್ಷೆ ಸಾವಿತ್ರಮ್ಮ, ಪಂಚಾಯತಿ ಸಿಬ್ಬಂದಿ, ಅಕ್ಷರ ದಾಸೋಹ ಅಧಿಕಾರಿ ಸವಿತಾ ಕುಮಾರಿ, ಗ್ರಾಮಸ್ಥರು ಉಪಸ್ಥಿತರಿದ್ದರು.
ಸುಳ್ಳು ವರದಿ ಬೇಡ: ಸಭೆ ಆರಂಭವಾಗುತ್ತಿದ್ದಂತೆ ಶಿವನಹಳ್ಳಿ ಗ್ರಾಮದ ನಿಂಗಯ್ಯ ಎಂಬುವವರು ಕಳೆದ ಐದು ವರ್ಷಗಳಿಂದ ದನದ ಕೊಟ್ಟಿಗೆ ನೀಡಿ ಎಂದು ಲಿಖಿತ ಹಾಗೂ ಮೌಖಿಕ ಮನವಿ ಮಾಡಿದ್ದರೂ ಇದುವರೆಗೆ ನೀಡಿಲ್ಲ. ದನ, ಕರು ಇಲ್ಲದವರಿಗೆ ಕೊಟ್ಟಿಗೆ ನಿರ್ಮಾಣಕ್ಕೆ ಹಣ ಕೊಟ್ಟಿದ್ದೀರಿ. ಸಭೆಗೆ ಅಭಿವೃದ್ಧಿ ಬಗ್ಗೆ ಸುಳ್ಳು ವರದಿ ನೀಡಬೇಡಿ ಎಂದು ನೇರವಾಗಿ ಪಂಚಾಯಿತಿ ಅಧಿಕಾರಿಗಳನ್ನು ತರಾಟೆ ತೆಗೆದುಕೊಂಡರು.