ಜಿಲ್ಲೆ

ಬಾವಿಗಳಿಗೂ ನುಗ್ಗಿದೆ ಮಲ-ಮೂತ್ರ ಮಿಶ್ರಿತ ಕೊಳಚೆ ನೀರು..!

ಕಲುಷಿತಗೊಂಡಿದೆ ಕುಡಿಯುವ ನೀರು

ಕೇಳುವವರಿಲ್ಲ ನಾಗರಿಕರ ಪುಕಾರು

ವಿಭುದಪ್ರಿಯ ನಗರ ನಿವಾಸಿಗರ ಗೋಳು

ಪ್ರಶಾಂತ ಭಾಗ್ವತ, ಉಡುಪಿ

ಮೂರ್ನಾಲ್ಕು ದಶಕದಿಂದ ನೆಮ್ಮದಿಯ ಬದುಕು ಸಾಗಿಸುತ್ತಿದ್ದ ಉಡುಪಿಯ ವಿಭುದಪ್ರಿಯ ನಗರ ನಿವಾಸಿಗಳಿಗೆ ಇದೀಗ ಜೀವನವೇ ಸಾಕು ಎನ್ನುವಷ್ಟರಮಟ್ಟಿಗೆ ಕೊಳಚೆ ನೀರು ಕಾಡತೊಡಗಿದೆ. ಊರಿನ ಮಧ್ಯದಲ್ಲಿರುವ ಕಂಚಿಗಾರಗುಳಿ ತೋಡಿನಲ್ಲಿ ಅನ್ಯರ ಮನೆಗಳ ಮಲ-ಮೂತ್ರ ಮಿಶ್ರಿತ ಹೊಲಸು ನೀರು ಹರಿಯುತ್ತಿದೆ.

ತೋಡುಗಳಲ್ಲಿ ಹರಿಯುತ್ತಿದ್ದ ಹೊಲಸು ನೀರು ಇದೀಗ ಈ ಭಾಗದ ಎಲ್ಲರ ಮನೆಗಳ ಬಾವಿ ಸೇರುತ್ತಿದ್ದು, ಕುಡಿಯುವ ನೀರು ಕಲುಷಿತಗೊಂಡಿದೆ. ಶುದ್ಧ ನೀರಿನ ಮೇಲೆ ಮಲಿನ ನೀರು ಪದರವಾಗಿ ನಿಂತಿದ್ದು, ನೋಡಲೂ ಅಸಹ್ಯ ಉಂಟಾಗುತ್ತಿದೆ.

ಜಲಮೂಲಕ್ಕೂ ಕಂಟಕ

ಮಣಿಪಾಲ ಭಾಗದ ಅನೇಕ ವಸತಿ ಸಮುಚ್ಚಯಗಳು ಹಾಗೂ ಮನೆಯವರ ಮಲ-ಮೂತ್ರ ಮಿಶ್ರಿತ ಕೊಳಚೆ ನೀರುಗಳನ್ನು ಪೈಪ್​ ಅಳವಡಿಸಿ ರಾಜಕಾಲುವೆ ಅಥವಾ ತೋಡುಗಳಿಗೆ ನೇರವಾಗಿ ಹರಿಸುತ್ತಿದ್ದಾರೆ. ಅದೀಗ ಕುಡಿಯಲು ಬಳಸುವ ನೀರಿನ ಬಾವಿಗಳಿಗೆ ವ್ಯಾಪಿಸಿದ್ದು, ಜಲಮೂಲಗಳಿಗೂ ಕಂಟಕ ಬಂದಿದೆ.

ಒಳಚರಂಡಿಯೇ ಇಲ್ಲ!

ಉಡುಪಿ ನಗರಸಭೆಯಿಂದ ನಗರದಲ್ಲಿ ಎಂಜಿಎಂ ಕಾಲೇಜು ವರೆಗೆ ಮಾತ್ರ ಒಳಚರಂಡಿ ವ್ಯವಸ್ಥೆ ಇದೆ. ಮಣಿಪಾಲದಿಂದ ಎಜಿಎಂ ವರೆಗೆ ಒಳಚರಂಡಿ ವ್ಯವಸ್ಥೆಯೇ ಇಲ್ಲ. ನಾಗರಾಜ ಮಧ್ಯಸ್ಥ ಹಾಗೂ ಘನಶ್ಯಾಮ ಎಂಬವರು ಖಾಸಗಿಯಾಗಿ ಒಳಚರಂಡಿ ಮಾಡಿಕೊಂಡಿದ್ದಾರೆ. ಪರಿಸರದ ಸ್ವಚ್ಛತೆ ಕಾಪಾಡಬೇಕು ಎಂದು ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಭಾಷಣ ಮಾಡುತ್ತಾರೆ. ಆದರೆ, ಪರಿಸರ ಸ್ವಚ್ಛತೆಗೆ ಅವರೇನೂ ಮಾಡುವುದಿಲ್ಲ ಎನ್ನುತ್ತಾರೆ ವಿಭುದಪ್ರಿಯ ನಗರದ ನೊಂದ ಜನರು.

ತೋಡಿದ ಹೊಸ ಬಾವಿ ಮುಚ್ಚಿಸಿದರು!

ವಿಭುದಪ್ರಿಯ ನಗರದ ನಾಗಬನ ಪಕ್ಕದಲ್ಲಿ ಅನಂತ ನಾಯಕ ಎಂಬವರು ತಮ್ಮ ಮನೆಯ ಮುಂದಿನ ಅಂಗಳದಲ್ಲಿ ಹೊಸ ಬಾವಿ ತೋಡಿಸಿದರು. ಕೇವಲ ಐದಾರು ಅಡಿಯಲ್ಲೇ ನೀರು ಬಂದಿದ್ದು ಕಂಡು ಸಂತಸಗೊಂಡರು. ಆದರೆ, ಅದು ಅಂತರ್ಜಲವಾಗಿರದೆ, ಪಕ್ಕದಲ್ಲೇ ಇದ್ದ ತೋಡಿನಲ್ಲಿ ಹರಿಯುತ್ತಿದ್ದ ಕೊಳಚೆ ನೀರಾಗಿತ್ತು. ಲಾಂತರ ರೂ. ವ್ಯಯಿಸಿ ತೋಡಿದ ಬಾವಿಯಲ್ಲಿ ಗಬ್ಬು ನಾರುತ್ತಿದ್ದ ಕಪ್ಪು ಬಣ್ಣದ ನೀರು ಬಂದಿದ್ದನ್ನು ಕಂಡು ಚಿಂತೆಗೊಳಗಾದರು. ಬೇರೆ ದಾರಿ ಕಾಣದೆ ಇದೀಗ ಬಾವಿಗೆ ಮಣ್ಣು ಹಾಕಿ ಮುಚ್ಚಿಸಿದ್ದಾರೆ.
ವಿಭುದಪ್ರಿಯ ನಗರದಲ್ಲಿ ನಮ್ಮ ಕುಟುಂಬ 35 ವರ್ಷದಿಂದ ಇದೆ. ಕಳೆದ 2018ರಿಂದ ಮಣಿಪಾಲದ ಭಾಗದ ವಸತಿ ಸಮುಚ್ಚಯದವರ, ಕಾರ್​ ವಾಶ್​ನವರ ಕೊಳಚೆ ನೀರು ರಾಜಕಾಲುವೆಗಳಲ್ಲಿ ದಿನದ 24 ಗಂಟೆಯೂ ಹರಿಯುತ್ತಿದೆ. ಉಸಿರಾಡಲು ಆಗದಷ್ಟು ಗಬ್ಬು ವಾಸನೆ ನಮ್ಮ ಪರಿಸರದಲ್ಲಿದೆ. ಮಲ ಮಿಶ್ರಿತ ಕೊಳಚೆ ನೀರು ಬಾವಿಗಳಿಗೆ ಸೇರಿ ಕಲುಷಿತಗೊಂಡಿದ್ದು, ಕುಡಿಯಲು ಯೋಗ್ಯವಿಲ್ಲ ಎಂದು ಲ್ಯಾಬ್​ ವರದಿ ಬಂದಿದೆ. ಅಧಿಕಾರಿಗಳು ಬಂದು ನೋಡಿ ಆ್ಯಕ್ಷನ್​ ತೆಗೆದುಕೊಳ್ತೇವೆ ಎಂದು ಹೇಳಿ ಹೋಗುತ್ತಾರೆ. ಆದರೆ, ಸಮಸ್ಯೆ ಮುಂದುವರಿಯುತ್ತಲೇ ಇದೆ. | ಶ್ರೀನಿವಾಸ ಉಪಾಧ್ಯಾಯ. ವಿಭುದಪ್ರಿಯ ನಗರ ನಿವಾಸಿ ಕೊಳಚೆ ನೀರು ಬಿಡುವ ಮಣಿಪಾಲದ ಭಾಗದ ವಸತಿ ಸಮುಚ್ಚಯದವರಿಗೆ ನಗರಸಭೆ ನೋಟಿಸ್​ ನೀಡಿದೆ. ಆದರೆ ಏನೂ ಪ್ರಯೋಜನ ಇಲ್ಲ. ನೋಟಿಸ್​ ನೀಡುವುದು ಪರಿಹಾರ ಕಾರ್ಯವಲ್ಲ. ರಾತ್ರಿ ವೇಳೆ ಎಂಡ್​ ಕ್ಯಾಪ್​ ತೆಗೆದು ಪಂಪ್​ ಮೂಲಕ ಮನೆಗಳ ಕೊಳಚೆ ನೀರನ್ನು ಮಳೆ ನೀರು ಹರಿಯುವ ತೋಡಿಗೆ ಬಿಡುತ್ತಿದ್ದಾರೆ. ಇದರಿಂದ ವಿಭುದಪ್ರಿಯ ನಗರದ ಮನೆಗಳ ಬಾವಿಗಳ ನೀರು ಕಲುಷಿತಗೊಂಡಿದೆ. ಅಧಿಕಾರಿಗಳು ಸಮಸ್ಯೆ ನೀಗಿಸದಿದ್ದಲ್ಲಿ ಜನರೊಂದಿಗೆ ಸೇರಿ ನಗರಸಭೆಯ ಮುಂದೆ ಪ್ರತಿಭಟಿಸಬೇಕಾಗುತ್ತದೆ. | ಅಶೋಕ ನಾಯಕ. ಇಂದ್ರಾಳಿ ವಾರ್ಡ್​ ಸದಸ್ಯ