ಜಿಲ್ಲೆ

ಉಡುಪಿಯ ರಸ್ತೆಗಳಿಗೆ ಭೀಕರ ಗಾಯ...!

ಅತಿಯಾದ ಮಳೆಯಿಂದ ತೆಗ್ಗು-ಗುಂಡಿಮಯ

ವಾಹನ ಸವಾರರಿಗೆ ಕಾಡುತ್ತಿದೆ ಜೀವಭಯ

ಪ್ರಶಾಂತ ಭಾಗ್ವತ ಉಡುಪಿ

ಜಿಲ್ಲೆಯಲ್ಲಿ ಚತುಷ್ಪಥ ಹೆದ್ದಾರಿ ಹೊರತು ಪಡಿಸಿದರೆ ನಗರ ಹಾಗೂ ಗ್ರಾಮೀಣ ಭಾಗ ಸಂಪರ್ಕಿಸುವ ಬಹುತೇಕ ಎಲ್ಲ ರಸ್ತೆಗಳಲ್ಲೂ ಹೊಂಡ ಕಂಡುಬರುತ್ತಿವೆ. ಮಳೆಯೂ ನಿರಂತರ ಮುಂದುವರಿದಿದ್ದು, ಸಣ್ಣಸಣ್ಣ ಗುಂಡಿಗಳೆಲ್ಲ ಬೃಹತ್​ ಹೊಂಡಗಳಾಗಿ ಕಾಡುತ್ತಿವೆ.

ಮಳೆಯಿಂದಾಗಿ ಹೊಂಡಗಳಲ್ಲಿ ನೀರು ಭರ್ತಿಯಾಗಿ, ಆಳ ಅರಿಯದೆ ವಾಹನಗಳು ಅಪಘಾತಕ್ಕೊಳಗಾಗುತ್ತಿವೆ. ಬೈಕ್​ ಸವಾರರಿಗಂತೂ ಯಮಸ್ವರೂಪಿ ಹೊಂಡಗಳು ಜೀವಭಯ ಉಂಟುಮಾಡುತ್ತಿದೆ.

ಕೆರೆಯಂತಾದ ರಸ್ತೆಗಳು

ಉಡುಪಿ ನಗರದಿಂದ ಯಾವುದೇ ವಾರ್ಡ್​ ಸಂಪರ್ಕಿಸುವ ರಸ್ತೆಗೆ ತೆರಳಿದರೂ ಅಲ್ಲಲ್ಲಿ ಗುಂಡಿಗಳು ಗೋಚರಿಸುತ್ತವೆ. ವಾಹನ ಸಂಚಾರದಿಂದ ಹೊಂಡಗಳ ಆಳ ಹಾಗೂ ಅಗಲ ಹೆಚ್ಚುತ್ತಲೇ ಇದ್ದು, ರಸ್ತೆಯ ಮಧ್ಯದಲ್ಲಿ ಕೆರೆಯಂತೆ ಗೋಚರಿಸುತ್ತಿವೆ. ರಾತ್ರಿ ವೇಳೆಯಲ್ಲಂತೂ ಇಂತಹ ಗುಂಡಿಗಳು ವಾಹನ ಸವಾರರಿಗೆ ಸವಾಲು ಹಾಕುತ್ತಿವೆ.

ಸಿಮೆಂಟ್​ ರಸ್ತೆಗೆ ಪಾಚಿ

ಗಣೇಶರಾಜ್

ಡಾಂಬರ್​ ರಸ್ತೆಗಳಲ್ಲಿ ಹೊಂಡ-ಗುಂಡಿಗಳದ್ದೇ ದರ್ಬಾರು ಕಂಡುಬಂದರೆ, ವಿವಿಧ ವಾರ್ಡ್​ಗಳ ಸಿಮೆಂಟ್​ ರಸ್ತೆಗಳಲ್ಲಿ ಪಾಚಿ ಬೆಳೆದಿದೆ. ಪಾದಚಾರಿಗಳು ಕಾಲುಜಾರಿ ಬೀಳುತ್ತಿದ್ದರೆ, ಬೈಕ್​ ಸವಾರರು ಸ್ಕಿಡ್​ ಆಗಿ ಬಿದ್ದು ಗಾಯಗೊಳ್ಳುತ್ತಿದ್ದಾರೆ. ವಿವಿಧೆಡೆ ಸಿಮೆಂಟ್​ ರಸ್ತೆಗಳಲ್ಲೂ ಹೊಂಡ ಬಿದ್ದಿರುವುದು ಅಚ್ಚರಿ ಮೂಡಿಸುತ್ತಿದೆ ಎನ್ನುತ್ತಾರೆ ಸಾಮಾಜಿಕ ಕಾರ್ಯಕರ್ತ ಪರ್ಕಳದ ಗಣೇಶರಾಜ್​ ಸರಳಬೆಟ್ಟು.

ಮಣಿಪಾಲ-ಪೆರಂಪಳ್ಳಿ ಮಾರ್ಗದಲ್ಲಿ ಗೋಳು

ರಾಷ್ಟ್ರೀಯ ಹೆದ್ದಾರಿಯಿಂದ ಮಣಿಪಾಲ ಸಂಪರ್ಕಿಸುವ ಪೆರಂಪಳ್ಳಿ ರಸ್ತೆಯ ಗೋಳು ತೀರದಾಗಿದೆ. ಪ್ರತಿವರ್ಷ ಮಳೆಗಾಲದಲ್ಲಿ ಬಿವಿಟಿಯಿಂದ ಮುಂದೆ ಪೆರಂಪಳ್ಳಿ ಮಾರ್ಗದಲ್ಲಿ ಅಗಲೀಕರಣವಾಗದೆ ಅಂದಾಜು 400 ಮೀಟರ್​ನಷ್ಟು ರಸ್ತೆಯಲ್ಲಿ ಸಂಚಾರ ದುಸ್ತರವಾಗಿರುತ್ತದೆ. ಮಣಿಪಾಲದ ಕಸ್ತೂರ್ಬಾ ಆಸ್ಪತ್ರೆಗೆ ರೋಗಿಗಳನ್ನು ಹಾಗೂ ಅಪಘಾತಕ್ಕೊಳಗಾಗಿ ಜೀವನ್ಮರಣದ ಸ್ಥಿತಿಯಲ್ಲಿ ಇರುವವರನ್ನು ಕರೆತರುವ ಆಂಬುಲೆನ್ಸ್​ಗಳೂ ಸಹ ಇದೇ ಹೊಂಡಮಯ ಮಾರ್ಗದಲ್ಲಿ ಸಂಚರಿಸುತ್ತವೆ.

ಗಿಡ ನೆಟ್ಟು ಪ್ರತಿಭಟಿಸುವ ಎಚ್ಚರಿಕೆ

ನಿತ್ಯಾನಂದ
ನಗರಸಭೆ ಮುಂಭಾಗದ ಸಿಮೆಂಟ್​ ರಸ್ತೆ.

ಉಡುಪಿ ನಗರದ ಯಾವುದೇ ರಸ್ತೆಗೆ ಹೋದರೂ ಅಲ್ಲಲ್ಲಿ ಬೃಹತ್​ ಗುಂಡಿಗಳು ಬಿದ್ದಿವೆ. ಸುಗಮ ಸಂಚಾರಕ್ಕೆ ಹೊಂಡಗಳು ತೊಡಕಾಗುತ್ತಿದ್ದು, ಅಪಘಾತಗಳೂ ಹೆಚ್ಚುತ್ತಿವೆ. ಮಳೆ ಹೆಚ್ಚಾಗಿದ್ದರಿಂದ ಹೊಂಡ ಬಿದ್ದಿದೆ ಎನ್ನುತ್ತಾರೆ. ಆದರೆ, ರಸ್ತೆಗಳ ಗುಣಮಟ್ಟ ಹೇಗಿದೆ ಎನ್ನುವುದನ್ನು ಹೊಂಡಗಳೇ ಹೇಳುತ್ತಿವೆ. ಆಡಳಿತ ವ್ಯವಸ್ಥೆಯ ನಿರ್ಲಕ್ಷ್ಯ ಖಂಡಿಸಿ ರಸ್ತೆಯ ಹೊಂಡಗಳಲ್ಲಿ ಗಿಡ ನೆಟ್ಟು ಪ್ರತಿಭಟಿಸಲಿದ್ದೇನೆ ಎಂದು ಉಡುಪಿ ಜಿಲ್ಲಾ ನಾಗರಿಕ ಸಮಿತಿ ಸಂಚಾಲಕ ನಿತ್ಯಾನಂದ ಒಳಕಾಡು ಎಚ್ಚರಿಕೆ ನೀಡಿದ್ದಾರೆ.

ಉಡುಪಿ ನಗರದ ವಿವಿಧೆಡೆ ರಸ್ತೆಗಳು ಹೊಂಡಮಯವಾಗಿದ್ದು, ಸಂಚಾರಕ್ಕೆ ತೊಡಕಾಗಿದೆ. ನಿತ್ಯದ ಕೆಲಸ ಮುಗಿಸಿ ಬೈಕ್​ನಲ್ಲಿ ರಾತ್ರಿ ಮನೆಗೆ ಹೋಗುವಾಗ ತೀವ್ರ ತೊಂದರೆಯಾಗುತ್ತಿದೆ. ಪೆರಂಪಳ್ಳಿ ಮಾರ್ಗವಂತೂ ತುಂಬ ಹಾಳಾಗಿದೆ. ರಸ್ತೆ ಸರಿಪಡಿಸಿ ಸವಾರರ ಜೀವ ಉಳಿಸಬೇಕು. | ನಿತಿನ್​. ಬೈಕ್​ ಸವಾರ ಗ್ಯಾರಂಟಿ ಯೋಜನೆಗಳಿಗೆ ಹಣ ವಿನಿಯೋಗಿಸುತ್ತಿರುವ ರಾಜ್ಯ ಕಾಂಗ್ರೆಸ್​ ಸರ್ಕಾರ ಎರಡು ವರ್ಷದಿಂದ ಪ್ರಾಕೃತಿಕ ವಿಕೋಪದ ಅನುದಾನವನ್ನೇ ಬಿಡುಗಡೆ ಮಾಡಿಲ್ಲ. ಹೀಗಾಗಿ ಗ್ರಾಮೀಣ ರಸ್ತೆಗಳೂ ನಿರ್ವಹಣೆಯಿಲ್ಲದೆ ಹೊಂಡ ಬಿದ್ದಿದ್ದು, ಸುಗಮ ಸಂಚಾರಕ್ಕೆ ತೊಂದರೆಯಾಗಿದೆ. ಸಾರ್ವಜನಿಕ ಆಸ್ತಿ-ಪಾಸ್ತಿಗಳ ರಕ್ಷಣೆ ಹಾಗೂ ರಸ್ತೆಗಳ ದುರಸ್ತಿಗಾಗಿ ಉಡುಪಿ ವಿಧಾನಸಭಾ ಕ್ಷೇತ್ರಕ್ಕೆ 50 ಕೋಟಿ ರೂ. ವಿಶೇಷ ಅನುದಾನ ನೀಡುವಂತೆ ಸಿಎಂ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದಿದ್ದೇನೆ. | ಯಶ್​ಪಾಲ್​ ಸುವರ್ಣ. ಉಡುಪಿ ಶಾಸಕ