ಜಿಲ್ಲೆ

ನಾಡೋಜ ಡಾ. ಜಿ.ಶಂಕರ್​ 'ಅರ್ಥಪೂರ್ಣ' ಜನ್ಮದಿನ ಆಚರಣೆ

70ನೇ ವರುಷಕ್ಕೆ ಮಾನವೀಯ ಸಹಕಾರ

ಬಡ ರೋಗಿಗಳು, ಅಶಕ್ತ ಕಲಾವಿದರಿಗೆ ನೆರವು

ವಿಜಯವಾಣಿ ಸುದ್ದಿಜಾಲ ಉಡುಪಿ

ಪ್ರತಿವರ್ಷವೂ ಅ.5ರಂದು ನಾಡೋಜ ಡಾ.ಜಿ.ಶಂಕರ್​ ಅವರ ಜನ್ಮದಿನವನ್ನು ವಿಶಿಷ್ಟವಾಗಿ ಆಚರಿಸಲಾಗುತ್ತದೆ. ಈ ಬಾರಿ ಅವರ 70ನೇ ಜನ್ಮದಿನದ ನಿಮಿತ್ತ ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಯ ಸರ್ಕಾರಿ ಹಾಗೂ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ನೂರಾರು ರೋಗಿಗಳಿಗೆ ನೆರವು ನೀಡುವ ಮೂಲಕ ಅರ್ಥಪೂರ್ಣವಾಗಿ ಆಚರಿಸಲಾಯಿತು.

ಡಾ.ಜಿ.ಶಂಕರ್​.

ಕಾಸರಗೋಡು ಸೇರಿದಂತೆ ಕರ್ನಾಟಕದ ವಿವಿಧ ಜಿಲ್ಲೆಗಳ ಆರ್ಥಿಕ ಅಶಕ್ತ ಬಡ ರೋಗಿಗಳಿಗೆ ಆರ್ಥಿಕ ಸಹಾಕರ ನೀಡುವ ಮೂಲಕ ಕಷ್ಟದಲ್ಲಿದ್ದವರಿಗೆ ನೆರವಾಗಿದ್ದಾರೆ. ಆಸ್ಪತ್ರೆಗಳಲ್ಲಿ ದಾಖಲಾಗಿರುವ ಕ್ಯಾನ್ಸರ್​ ರೋಗಿಗಳಿಗೆ ತಲಾ 20 ಸಾವಿರ ರೂ. ಮತ್ತು ಕಿಡ್ನಿ ವೈಫಲ್ಯದಿಂದ ಬಳಲುತ್ತಿರುವವರಿಗೆ ತಲಾ 10 ಸಾವಿರ ರೂ. ವೈದ್ಯಕೀಯ ಚಿಕಿತ್ಸೆಗಾಗಿ ನೆರವು ನೀಡಿ ಮಾನವೀಯತೆ ಮೆರೆದಿದ್ದಾರೆ.

1,089 ರೋಗಿಗಳಿಗೆ ನೆರವು

ಮಂಗಳೂರು ಕೆಎಂಸಿಯ 120 ಕ್ಯಾನ್ಸರ್​ ಹಾಗೂ 68 ಕಿಡ್ನಿ ರೋಗಿಗಳು, ಫಾದರ್​ ಮುಲ್ಲರ್ಸ್​ ಆಸ್ಪತ್ರೆಯ 42 ಕ್ಯಾನ್ಸರ್​, 26 ಕಿಡ್ನಿ, ವೆನ್​ಲಾಕ್​ ಆಸ್ಪತ್ರೆಯ 22 ಕ್ಯಾನ್ಸರ್​, 79 ಕಿಡ್ನಿ, ಮಂಗಳೂರು ಇನ್​ಸ್ಟಿಟ್ಯೂಟ್​ ಆಫ್​ ಆಂಕಾಲಜಿಯ 438 ಕ್ಯಾನ್ಸರ್​, ಉಡುಪಿ ಕೆಎಂಸಿ ಮಣಿಪಾಲ ಆಸ್ಪತ್ರೆಯ 156 ಕ್ಯಾನ್ಸರ್​, 76 ಕಿಡ್ನಿ, ಉಡುಪಿ ಗಾಂಧಿ ಆಸ್ಪತ್ರೆಯ 8 ಕ್ಯಾನ್ಸರ್​, ಉಡುಪಿ ಸರ್ಕಾರಿ ಆಸ್ಪತ್ರೆಯ 10 ಕ್ಯಾನ್ಸರ್​, 11 ಕಿಡ್ನಿ, ಆದರ್ಶ ಆಸ್ಪತ್ರೆಯ 2 ಕ್ಯಾನ್ಸರ್​ ಮತ್ತು 31 ಕಿಡ್ನಿ ರೋಗಿಗಳಿಗೆ ನೆರವು ನೀಡಲಾಗಿದೆ.

ವಿಶೇಷ ಮಕ್ಕಳಿಗೆ, ಗುರಿಕಾರರಿಗೆ ಸಹಾಯಧನ

ಉಡುಪಿ, ದಕ್ಷಿಣ ಕನ್ನಡ, ಶಿವಮೊಗ್ಗ, ಚಿಕ್ಕಮಗಳೂರು ಜಿಲ್ಲೆಯಲ್ಲಿ ನೋಂದಾಯಿತ ಸುಮಾರು 31ಕ್ಕೂ ಅಧಿಕ ವಿಶೇಷ ಮಕ್ಕಳ ಶಾಲೆಗಳಿಗೆ ತಲಾ 15 ಸಾವಿರ ರೂ. ಸಹಾಯಧನ ನೀಡಲಾಗಿದೆ. ಯಕ್ಷಗಾನ ಕಲೆಯ ಪ್ರೋತ್ಸಾಹಾರ್ಥವಾಗಿ ದಕ್ಷಿಣ ಕನ್ನಡ, ಉಡುಪಿ, ಶಿವಮೊಗ್ಗ, ಉತ್ತರ ಕನ್ನಡ ಮತ್ತು ಚಿಕ್ಕಮಗಳೂರು ಜಿಲ್ಲೆಯ 70 ಅಶಕ್ತ ಕಲಾವಿದರಿಗೆ ತಲಾ 10 ಸಾವಿರ ರೂ. ಗೌರವಧನ ನೀಡಲಾಗಿದೆ. ಸಮಾಜದ ಸುಮಾರು 350ಕ್ಕೂ ಅಧಿಕ ಗುರಿಕಾರರಿಗೆ 2 ಸಾವಿರ ರೂ. ಗೌರವಧನವನ್ನು ಅವರ ಬ್ಯಾಂಕ್​ ಖಾತೆಗಳಿಗೆ ಜಮಾ ಮಾಡಲಾಗಿದೆ ಎಂದು ಜಿ.ಶಂಕರ್​ ಫ್ಯಾಮಿಲಿ ಟ್ರಸ್ಟ್​ (ರಿ.) ತಿಳಿಸಿದೆ. ಮಂಗಳೂರಿನ ಇನ್​ಸ್ಟಿಟ್ಯೂಟ್​ ಆಫ್​ ಆಂಕಾಲಜಿಯಲ್ಲಿ ಕ್ಯಾನ್ಸರ್​ ರೋಗಿಗಳಿಗೆ ಜಿ.ಶಂಕರ್​ ಫ್ಯಾಮಿಲಿ ಟ್ರಸ್ಟ್​ನ ಶ್ಯಾಮಿಲಿ ನವೀನ್​ ಆರ್ಥಿಕ ನೆರವು ನೀಡಿದರು. ಎಸ್​.ಕೆ. ಆನಂದ್, ಸಚಿನ್​ ಆನಂದ್, ಶಂಕರ್ ಸಾಲಿಯಾನ್, ಡಾ.ರಾಹುಲ್​ ಆರ್​. ಶೆಟ್ಟಿ, ಶರತಕುಮಾರ್​, ಸುರಭಿ ರತನ್​, ಆಸ್ಪತ್ರೆಯ ನಿರ್ದೇಶಕ ಡಾ. ಡಿ.ಸುರೇಶ ರಾವ್​, ಡಾ. ಸನತ್​ ಹೆಗ್ಡೆ, ಡಾ.ಕೃಷ್ಣಪ್ರಸಾದ್​, ಡಾ. ಹೇಮಂತಕುಮಾರ್​ ಹಾಗೂ ಸಿಬ್ಬಂದಿ ಇದ್ದರು.